ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 60 ಸಾವಿರ ಗಡಿ ತಲುಪಿದೆ. ಈ ಮಧ್ಯೆ ಸೋಂಕು ದೃಢಪಟ್ಟವರ ಸಂಪರ್ಕದಲ್ಲಿದ್ದವರ ಸಂಖ್ಯೆಯೂ ಮೂರು ಪಟ್ಟಾಗಿದೆ.
ಕೋವಿಡ್ ಸೋಂಕಿತರ ಸಂಪರ್ಕದಲ್ಲಿದ್ದವರ ಸಂಖ್ಯೆ ಎರಡು ಲಕ್ಷಕ್ಕೂ ಹೆಚ್ಚಾಗಿದ್ದು, ಇವರನ್ನೆಲ್ಲ ಬಿಬಿಎಂಪಿ ಕ್ವಾರಂಟೈನ್ ಮಾಡಿದೆ.
ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇವರ ಸಂಪರ್ಕದಲ್ಲಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ನಗರದಲ್ಲಿ ಇಲ್ಲಿಯವರೆಗೆ ಕೋವಿಡ್ ಸೋಂಕು ದೃಢಪಟ್ಟವರ ಸಂಪರ್ಕದಲ್ಲಿದ್ದ 2.60ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಇವರಲ್ಲಿ 1.16 ಲಕ್ಷ ಮಂದಿ ಪ್ರಾಥಮಿಕ ಸಂಪರ್ಕಿತರು, 1.44 ಲಕ್ಷ ಜನ ದ್ವಿತೀಯ ಸಂಪರ್ಕಿತರಿದ್ದಾರೆ.
ಇದನ್ನೂ ಓದಿ: ಕೋವಿಡ್ 19 ಕಳವಳ-ಆಗಸ್ಟ್ 03: 4752 ಹೊಸ ಪ್ರಕರಣಗಳು ; 4776 ಡಿಸ್ಚಾರ್ಜ್ ; 98 ಸಾವು
ಕೋವಿಡ್ ಸೋಂಕು ದೃಢಪಟ್ಟವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರಿಗೂ ಕೋವಿಡ್ ಸೋಂಕು ದೃಢಪಡುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರ ಸಂಪರ್ಕದಲ್ಲಿ ಇರುವವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಕ್ವಾರಂಟೈನ್‍ನಲ್ಲಿ ಇರುವವರಲ್ಲಿ ಕೋವಿಡ್ ಸೋಂಕು ದೃಢಪಟ್ಟವರ ಕುಟುಂಬದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಉಳಿದಂತೆ ಅವರ ಸ್ನೇಹಿತರು ಸೇರಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ವಲಯದಲ್ಲಿ ಹೆಚ್ಚು ಸೋಂಕು ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಸೋಂಕಿತರ ಸಂಪರ್ಕದಲ್ಲಿ ಇದ್ದವರ ಸಂಖ್ಯೆಯೂ ಹೆಚ್ಚಾಗಿದೆ. ದಕ್ಷಿಣ ವಲಯಲ್ಲಿ ಒಟ್ಟು 89,333 ಸಂಪರ್ಕಿತರು, ಪೂರ್ವ ವಲಯದಲ್ಲಿ 52,265 ಸಂಪರ್ಕಿತರು, ಪಶ್ಚಿಮ ವಲಯದಲ್ಲಿ 51,834 ಸಂಪರ್ಕಿತರು, ಮಹದೇವಪುರದಲ್ಲಿ 15,633, ಬೊಮ್ಮನಹಳ್ಳಿಯಲ್ಲಿ 15,547, ದಾಸರಹಳ್ಳಿಯಲ್ಲಿ 14,695, ಯಲಹಂಕದಲ್ಲಿ 12,431 ಹಾಗೂ ರಾಜರಾಜೇಶ್ವರಿ ನಗರ ವಲಯದಲ್ಲಿ 8,838 ಜನರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.