ಹೊಸದಿಲ್ಲಿ : ಆರ್ಥಿಕವಾಗಿ ದುರ್ಬಲರಿರುವವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಸಾಮಾನ್ಯ ವರ್ಗದಡಿ ಶೇ.10ರ ಮೀಸಲಾತಿಯನ್ನು ಕಲ್ಪಿಸುವ ಮಸೂದೆಯನ್ನು (ಕೋಟಾ ಬಿಲ್) ಸರಕಾರ ಇಂದು ರಾಜ್ಯಸಭೆಯಲ್ಲಿ ಮಂಡಿಸಿದೆ.
ಸಂವಿಧಾನದ 103ನೇ ತಿದ್ದುಪಡಿ ಮಸೂದೆಯನ್ನು ಬಹತೇಕ ಎಲ್ಲ ರಾಜಕೀಯ ಪಕ್ಷಗಳು ಬೆಂಬಲಿಸಿದ್ದು ಇದೊಂದು ದೇಶ ಹಿತಾಸಕ್ತಿಯ ಐತಿಹಾಸಿಕ ಮಸೂದೆ ಎಂದು ಸರಕಾರ ಹೇಳಿಕೊಂಡಿದೆ.
ಹಾಗಿದ್ದರೂ ಕಾಂಗ್ರೆಸ್ ಸಹಿತ ವಿರೋಧ ಪಕ್ಷಗಳು “ಇದೊಂದು ರಾಜಕೀಯ ಗಿಮಿಕ್‌ನ ಮಸೂದೆಯಾಗಿದ್ದು ಇದು ನ್ಯಾಯಾಂಗದ ಪರೀಕ್ಷೆಯಲ್ಲಿ ಪಾಸಾಗುವ ಸಾಧ್ಯತೆಗಳು ಇರಲಾರವು’ ಎಂದಿವೆ; ಆದರೂ ಮಸೂದೆಯನ್ನು ಅವು ಬೆಂಬಲಿಸುವುದಾಗಿ ಹೇಳಿವೆ. ಸರಕಾರ ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಸಮಾಜದ ಮೇಲ್ವರ್ಗದ ಬಡವರ ಬೆಂಬಲವನ್ನು ಬಾಚಿಕೊಳ್ಳುವ ಯತ್ನದಲ್ಲಿ ರೂಪಿಸಿರುವ ಮಸೂದೆ ಇದಾಗಿದೆ ಎಂದು ವಿಪಕ್ಷಗಳು ಹೇಳಿವೆ.
ಲೋಕಸಭೆಯ 323 ಸದಸ್ಯರು ಮಸೂದೆಯ ಪರವಾಗಿ ಮತ ಹಾಕಿದ್ದಾರೆ. ಈ ಮಸೂದೆಯು ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ, ಸಾಮಾನ್ಯ ಕೆಟಗರಿಯಡಿ ಶೇ.10ರ ಮೀಸಲಾತಿಯನ್ನು ಕಲ್ಪಿಸುವ ಸಲುವಾಗಿ ಸಂವಿಧಾನದ 15 ಮತ್ತು 16ನೇ ವಿಧಿಗೆ ತಿದ್ದುಪಡಿ ತರಲು ಉದ್ದೇಶಿಸಿದೆ.
ಮಸೂದೆಯನ್ನು ವಿರೋಧಿಸಿ ರಾಜ್ಯಸಭೆಯಲ್ಲಿನ 13 ಮಂದಿ ಎಐಎಡಿಎಂಕೆ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ. ಹಾಗಿದ್ದರೂ ಮಸೂದೆಯು ಪಾಸಾಗುವ ನಿರೀಕ್ಷೆ ಇದೆ; ಮಸೂದೆ ಪಾಸಾಗಲು ಮೂರನೇ ಎರಡಂಶದ ಬಹುಮತ ಬೇಕಿದೆ. ಎಸ್‌ಪಿ, ಬಿಎಸ್‌ಪಿ ಮತ್ತು ಕಾಂಗ್ರೆಸ್ ಮಸೂದೆ ಪಾಸಾಗುವುದಕ್ಕೆ ಬೆಂಬಲ ನೀಡಲಿವೆ.