ಬೆಳ್ತಂಗಡಿ: ರಾಜ್ಯದಲ್ಲಿ 40 ದಿನಗಳಿಂದ ಮದ್ಯ ಸೇವನೆಯನ್ನು ನಿಲ್ಲಿಸಿರುವ ಎಲ್ಲರೂ ಮದ್ಯಪಾನವನ್ನು ಶಾಶ್ವತವಾಗಿ ತ್ಯಜಿಸಬೇಕೆಂದು ಜನಜಾಗೃತಿ ವೇದಿಕೆಯ ಗೌರವಾಧ್ಯಕ್ಷ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಕರೆ ನೀಡಿದ್ದಾರೆ.ಈ ಸಂಬಂಧ ಶನಿವಾರ ನಡೆದ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಈ ವಿಚಾರ ಪ್ರಸ್ತಾವಿಸಿದರು.
ಕರ್ನಾಟಕವನ್ನು ಮದ್ಯ ಮಾರಾಟ ಮುಕ್ತಗೊಳಿ ಸಲು ಸರಕಾರ ನಿರ್ಧರಿಸಿದರೆ ಜನತೆ ಸ್ವಯಂ ಪ್ರೇರಿತವಾಗಿ ಬೆಂಬಲಿಸಬೇಕು. ಅಲ್ಲದೆ ರಾಷ್ಟ್ರ ಮಟ್ಟ ದಲ್ಲಿ ಮದ್ಯ ನಿಷೇಧ ಘೋಷಣೆಯಾಗಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್ ಗ್ರಾಮಾಭಿವೃದ್ಧಿ ಯೋಜನೆಯು ಇತ್ತೀಚೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆಸಿದ ಸರ್ವೇಕ್ಷಣೆಯಲ್ಲಿ ಮದ್ಯ ಮಾರಾಟದ ಸ್ಥಗಿತದಿಂದ ಉಂಟಾದ ಪರಿಸ್ಥಿತಿ ಬಗ್ಗೆ ವಿಶ್ಲೇಷಿಸಿದ್ದಾರೆ.
ಕೋವಿಡ್ ಸಮಸ್ಯೆಯಿಂದ ಸರಕಾರವು ಲಾಕ್‌ಡೌನ್ ಘೋಷಣೆ ಮಾಡಿದ ಅನಂತರದ 40 ದಿನಗಳಲ್ಲಿ ಮದ್ಯಸೇವನೆಯು ಕಡಿಮೆಯಾಗಿ ಶೇ. 89 ಸಂಸಾರಗಳಲ್ಲಿ ಸಂತೋಷ, ನೆಮ್ಮದಿ ಹೆಚ್ಚಾಗಿದೆ. ಮದ್ಯ ಸೇವಿಸದಿರುವುದರಿಂದ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗಿಲ್ಲ. ಉಳಿತಾಯ ಹೆಚ್ಚಾಗಿದೆ ಎಂದು ಸರ್ವೇಕ್ಷಣ ವರದಿ ತಿಳಿಸಿದೆ ಎಂದರು.
ಸರಕಾರವು ಮದ್ಯದ ಅಂಗಡಿಗಳನ್ನು ತೆರೆಯಲು ನಿರ್ಧರಿಸಿದರೂ ಮದ್ಯಪಾನ ನಿಷೇಧವನ್ನು ಜನತಾ ಚಳವಳಿಯಾಗಿ ಮಾಡಿಕೊಂಡು ಯಾರೂ ಮದ್ಯದ ಅಂಗಡಿಯ ಬಳಿ ಸುಳಿಯಬಾರದೆಂದು ವೇದಿಕೆ ಅಧ್ಯಕ್ಷ ರಾಮಸ್ವಾಮಿ ವಿನಂತಿಸಿದ್ದಾರೆ.
ಧರ್ಮಸ್ಥಳ ಯೋಜನೆಯು ಪ್ರಾಯೋಜಿಸಿರುವ ಹೆಚ್ಚಿನ ಮಹಿಳಾ ಸಂಘದ ಸದಸರ ಒಕ್ಕೊರಲ ಅಭಿಪ್ರಾಯ ಮದ್ಯ ಖರೀದಿಯನ್ನು ಸ್ಥಗಿತಗೊಳಿಸ ಬೇಕೆಂಬುದೇ ಆಗಿದೆ. ಈ ನಿಟ್ಟಿನಲ್ಲಿ ಕುಟುಂಬ ಮಟ್ಟದಲ್ಲಿ ದೇವರ ಹೆಸರಿನಲ್ಲಿ ಮದ್ಯ ಖರೀದಿಸದಂತೆ ಸಂಕಲ್ಪ ಮಾಡಬೇಕೆಂದು ವೇದಿಕೆಯು ಕರೆ ನೀಡಿದೆ. ವೀಡಿಯೋ ಕಾನ್ಫರೆನ್ಸ್‌ನಲ್ಲಿ ವೇದಿಕೆ ಕಾರ್ಯದರ್ಶಿ ವಿವೇಕ್ ಪಾಯಸ್ ಮತ್ತಿತರರಿದ್ದರು.