Advertisement

ಸದ್ದಿಲ್ಲದ ಸಾಧಕಿ: ಮಂಗಳೂರಿನ “ಚಿನ್ನದ ಹುಡುಗಿ’

08:15 AM Mar 02, 2018 | |

ಕಳೆದ 15 ವರ್ಷಗಳ ಅವಧಿಯಲ್ಲಿ 16ಕ್ಕೂ ಹೆಚ್ಚು ರಾಷ್ಟ್ರಮಟ್ಟದ ಪದಕ ಮತ್ತು 250ಕ್ಕೂ ಮಿಕ್ಕಿ ರಾಜ್ಯ, ಜಿಲ್ಲಾ ಮಟ್ಟದ ಪದಕ ಗಳಿಸುವ ಮೂಲಕ ಕುಡ್ಲದ ಶ್ರೀಮಾ ಪ್ರಿಯದರ್ಶಿನಿ “ಚಿನ್ನದ ಹುಡುಗಿ’ಯಾಗಿ ಮಿಂಚುತ್ತಿದ್ದಾರೆ. ಸದ್ದಿಲ್ಲದ ಸಾಧಕಿಯಾಗಿ ದಾಪುಗಾಲಿಕ್ಕುತ್ತಿದ್ದಾರೆ.

Advertisement

ವಿಶೇಷವೆಂದರೆ, ಈಕೆಯ ಈ ಎಲ್ಲ ಸಾಧನೆಯ ಹಿಂದಿರುವ ಪ್ರೇರಣಾಶಕ್ತಿ ತಾಯಿ ಸೇವಂತಿ. ಮಂಗಳೂರು ಯೆಯ್ನಾಡಿ ವ್ಯಾಸನಗರ ನಿವಾಸಿ ಶ್ರೀಮಾ 12ನೇ ವರ್ಷದಿಂದಲೇ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು. ದೈಹಿಕ ಶಿಕ್ಷಣ ನಿರ್ದೇಶಕಿಯಾಗಿದ್ದ ತಾಯಿ ಸೇವಂತಿ ಅವರ ಒತ್ತಾಯದ ಮೇರೆಗೆ ಕ್ರೀಡಾಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ಆ್ಯತ್ಲೆಟಿಕ್ಸ್‌ನಲ್ಲಿ ಮುಂದುವರಿದರು. ಆಕೆಯನ್ನು ಈ ಕ್ಷೇತ್ರದಲ್ಲಿ ಬೆಳೆಸಿದ್ದು ತರಬೇತುದಾರ ದಿನೇಶ್‌ ಕುಂದರ್‌. ಡಿಸ್ಕಸ್‌ ತ್ರೋ ಮೂಲಕ ಕ್ರೀಡಾ ಜೀವನ ಆರಂಭಿಸಿದ ಅವರು, ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. ಪರಿಣಾಮ, ವಿವಿಧ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ 16ಕ್ಕೂ ಹೆಚ್ಚು ಚಿನ್ನ, ಬೆಳ್ಳಿಯ ಪದಕಗಳ ಬೇಟೆ.

ಚಿನ್ನದ ಮೇಲೆ ಚಿನ್ನ
100 ಮೀ. ಹರ್ಡಲ್ಸ್‌, ಡಿಸ್ಕಸ್‌ ತ್ರೋನಲ್ಲಿ ರಾಷ್ಟ್ರ ಮಟ್ಟದ ಚಿನ್ನದ ಪದಕ, ಹೆಪ್ಟತ್ಲಾನ್‌ನಲ್ಲಿ ರಾಷ್ಟ್ರ ಮಟ್ಟದ ಬೆಳ್ಳಿ ಪದಕ ಸೇರಿ ವಿವಿಧ ಕ್ರೀಡಾಕೂಟಗಳಲ್ಲಿ ಸಾಕಷ್ಟು ಚಿನ್ನ, ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಏಶ್ಯನ್‌ ಗ್ರ್ಯಾನ್‌ಪ್ರಿ, ಇಂಡೋನೇಶ್ಯದಲ್ಲಿ ನಡೆದ ಅಂತಾರಾಷ್ಟ್ರೀಯ ಹಿರಿಯರ ಕ್ರೀಡಾ ಕೂಟಗಳಲ್ಲಿ ಭಾರತವನ್ನು ಪ್ರತಿ ನಿಧಿಸಿದ್ದಾರೆ. ಕ್ರೀಡಾಕ್ಷೇತ್ರದ ಮೂಲಕವೇ ಭಾರತೀಯ ರೈಲ್ವೇಯಲ್ಲಿ 2007ರಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಅವರು 2015ರಲ್ಲಿ ನಡೆದ ರಾಷ್ಟ್ರ ಮಟ್ಟದ ಇಂಟರ್‌ ಡಿವಿಜನ್‌ ರೈಲ್ವೇ ಮೀಟ್‌ನಲ್ಲಿ 3 ಚಿನ್ನದ ಪದಕ ಗಳಿಸಿ ಕ್ರೀಡೆಯಲ್ಲಿ ಸಾಧನೆಯ ಉತ್ತುಂಗಕ್ಕೇರಿದರು.  

ಶ್ರೀಮಾ ಅವರ ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಸ್ವಾತಂತ್ರೊತ್ಸವ ಪ್ರಶಸ್ತಿ, ಗಣ ರಾಜ್ಯೋತ್ಸವ ಪ್ರಶಸ್ತಿ, ಕ್ರೀಡಾಭಾರತಿ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ. ಶ್ರೀಮಾ ಅಂತಾರಾಷ್ಟ್ರೀಯ, ರಾಷ್ಟ್ರೀಯ ಕ್ರೀಡಾಕೂಟ ಗಳಲ್ಲಿ ಗೆದ್ದು, ಚಿನ್ನ ಪಡೆದು ಬಂದರೂ ತನ್ನ ಸಾಧನೆ ಯನ್ನು ಸುದ್ದಿಯಾಗಿಸಿಲ್ಲ. ತಾನಾಯಿತು, ತನ್ನ ಕ್ರೀಡಾ ಅಭಿರುಚಿಯಾಯಿತು ಎಂಬಂತಿದ್ದ ಅವರು, ಸದ್ದಿಲ್ಲದ ಸಾಧಕಿಯಾಗಿಯೇ ಗಮನ ಸೆಳೆಯುತ್ತಿದ್ದಾರೆ. ಮುಂದೆಯೂ ಕ್ರೀಡಾಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಉತ್ಸುಕರಾಗಿದ್ದು, ಕ್ರೀಡಾ ಭವಿಷ್ಯದ ಮೇಲೆ ವ್ಯಾಪಕ ಒಲವು ಹೊಂದಿದ್ದಾರೆ. 

ಕ್ರೀಡಾ ಕುಟುಂಬದ ಕುಡಿ
ಶ್ರೀಮಾ ಅವರ ತಾಯಿ ಸೇವಂತಿ ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದುಕೊಂಡು ನಿವೃತ್ತರಾದವರು. ಅಮ್ಮನ ಕ್ರೀಡಾಸಕ್ತಿ ಮಗಳನ್ನು ಕ್ರೀಡಾ ಕ್ಷೇತ್ರಕ್ಕೆ ಅರ್ಪಿಸುವಂತೆ ಮಾಡಿತು. ಶ್ರೀಮಾರು ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿ ಕೊಳ್ಳುವಂತೆ ತಾಯಿ ಒತ್ತಾಯ ಮಾಡಿದ್ದರಿಂದ, ಅನಾಸಕ್ತಿಯಿಂದಲೇ ಹೋದ ಶ್ರೀಮಾ, ಇಂದು ರಾಷ್ಟ್ರಮಟ್ಟದಲ್ಲಿ ಮಿನುಗುತ್ತಿರು ವುದು ಮಂಗಳೂರಿಗೂ ಹೆಮ್ಮೆ. ಶ್ರೀಮಾ ಅವರ ಪತಿ ಪಿ.ಸಿ. ಸೋಮಯ್ಯ ಅವರೂ ವೃತ್ತಿಪರ ಹಾಕಿ ಆಟಗಾರ ರಾಗಿದ್ದಾರೆ. ಪ್ರಸ್ತುತ ಅವರು ತಮಿಳುನಾಡಿ ನಲ್ಲಿ ಉದ್ಯೋಗದಲ್ಲಿದ್ದಾರೆ. ಶ್ರೀಮಾ ಅವರ ಇಡೀ ಕುಟುಂಬವೇ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವುದು ಗಮನಾರ್ಹ.

Advertisement

ದಾಖಲೆ ಅಜೇಯ !
2007ರಲ್ಲಿ ನಡೆದ ಮಂಗಳೂರು ವಿವಿ ಮಟ್ಟದ 100 ಮೀ. ಹರ್ಡಲ್ಸ್‌ನ ದಾಖಲೆ ಶ್ರೀಮಾ ಅವರ ಹೆಸರಿನಲ್ಲೇ ಇದೆ. 14.2 ಸೆಕೆಂಡ್ಸ್‌ನಲ್ಲಿ ಇವರು ಮಾಡಿದ ದಾಖಲೆಯನ್ನು ಕಳೆದ 11 ವರ್ಷದಿಂದ ಯಾರೂ ಮುರಿದಿಲ್ಲ. ಅಲ್ಲದೆ, ಹೆಪ್ಟತ್ಲಾನ್‌ನಲ್ಲಿಯೂ ಅವರ ದಾಖಲೆಯನ್ನು 10 ವರ್ಷದಿಂದ ಮುರಿಯಲು ಇತರರಿಗೆ ಸಾಧ್ಯವಾಗಿಲ್ಲ. “ಇದು ನನ್ನ ಕ್ರೀಡಾ ಬದುಕಿನ ಅತ್ಯಂತ ಹೆಮ್ಮೆಯ ವಿಚಾರವಾಗಿದೆ’ ಎನ್ನುತ್ತಾರೆ ಶ್ರೀಮಾ.

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next