Advertisement

ಬೇಗ ಬೇಗ ಕಾಮಗಾರಿ ಮುಗಿಸಿ

06:40 AM Jan 05, 2019 | |

ಬೆಂಗಳೂರು: ಬಿಬಿಎಂಪಿ ವತಿಯಿಂದ ಕೈಗೆತ್ತಿಕೊಂಡ ಯೋಜನೆಗಳಿಗೆ ಎದುರಾಗಿರುವ ಭೂ ಸ್ವಾಧೀನದಂತಹ ಸಮಸ್ಯೆಗಳನ್ನು ಪರಿಹರಿಸಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್‌ ಸೂಚಿಸಿದ್ದಾರೆ.

Advertisement

ಪಾಲಿಕೆ ವ್ಯಾಪ್ತಿಯಲ್ಲಿ ನಗರೋತ್ಥಾನ, ಹಣಕಾಸು, ಕಂದಾಯ ಹಾಗೂ ನಗರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕಾಮಗಾರಿಗೆ ಎದುರಾಗಿರುವ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು. ಜತೆಗೆ ಈಗಾಗಲೇ ಸರ್ಕಾರದಿಂದ ಅನುಮೋದನೆ ನೀಡಿರುವ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದರು.

ರಾಜ್ಯ ಸರ್ಕಾರ ಬಿಬಿಎಂಪಿಗೆ ಕಳೆದ ನಾಲ್ಕು ವರ್ಷಗಳಲ್ಲಿ 17,978 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಅನುಮೋದನೆ ನೀಡಿದೆ. ಆ ಪೈಕಿ ಈಗಾಗಲೇ 9,978 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಉಳಿದ ಕಾಮಗಾರಿಗಳಿಗೂ ಅನುದಾನ ನೀಡಲು ಸರ್ಕಾರ ಸಿದ್ಧವಾಗಿದ್ದು, ಶೀಘ್ರವೇ ಉಳಿದ ಕಾಮಗಾರಿಗಳು ಆರಂಭವಾಗಲಿವೆ ಎಂದು ಹೇಳಿದರು. 

ಪಾಲಿಕೆಯ ವ್ಯಾಪ್ತಿಯಲ್ಲಿ 2016-17 ಹಾಗೂ 2017-18ನೇ  ಸಾಲಿನಲ್ಲಿ ಒಟ್ಟು 9,978 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ನೀಡಿದೆ. ಆ ಅನುದಾನದಲ್ಲಿ ಗ್ರೇಡ್‌ ಸೆಪರೇಟರ್‌ಗಳು, ವೈಟ್‌ ಟಾಪಿಂಗ್‌, ಅಂಡರ್‌ಪಾಸ್‌, ಮೇಲ್ಸೇತುವೆ, ಬೃಹತ್‌ ನೀರುಗಾಲುವೆ ದುರಸ್ತಿ ಸೇರಿ ವಿವಿಧ ಯೋಜನೆಗಳ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಈಗಾಗಲೇ ಶೇ.70ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಯನ್ನು ಸಮಸ್ಯೆ ಬಗೆಹರಿಸಿ ಶೀಘ್ರ ಪೂರ್ಣಗೊಳಿಸುವಂತೆ ತಾಕೀತು ಮಾಡಿದ್ದಾರೆ.

ಎಂಟು ಸಾವಿರ ಕೋಟಿಗೆ ಅನುಮೋದನೆ: ಸಮ್ಮಿಶ್ರ ಸರ್ಕಾರ 2018-19 ಹಾಗೂ 2019-20ನೇ ಸಾಲಿನಲ್ಲಿ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು 8 ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ ತಿಳಿಸಿದೆ. ಅದರಂತೆ ಈಗಾಗಲೆ ಬಿಬಿಎಂಪಿ ಸಲ್ಲಿಸಿರುವ ಕ್ರಿಯಾ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದಿದ್ದು, ಶೀಘ್ರವೇ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಯೋಜನೆ ಅನುಷ್ಠಾನಕ್ಕಾಗಿ ಟೆಂಡರ್‌ ಪ್ರಕ್ರಿಯೆ ನಡೆಸಲಾಗುವುದು ಎಂದು ಪರಮೇಶ್ವರ್‌ ಹೇಳಿದರು. 

Advertisement

ಎಂಟು ಸಾವಿರ ಕೋಟಿ ರೂ. ಅನುದಾನದಲ್ಲಿ ಪ್ರಮುಖವಾಗಿ ನಗರದಲ್ಲಿ ತ್ಯಾಜ್ಯದಿಂದ ಇಂಧನ ಉತ್ಪಾದನಾ ಘಟಕ ಸ್ಥಾಪನೆ, ರಸ್ತೆಗುಂಡಿ ಮುಚ್ಚುವುದು, ವೈಟ್‌ಟಾಪಿಂಗ್‌ ಕಾಮಗಾರಿ, ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗದಂತೆ ರಾಜಕಾಲುವೆ ದುರಸ್ತಿ ಕಾಮಗಾರಿ, ಕೆರೆಗಳಿಗೆ ತ್ಯಾಜ್ಯ ನೀರು ಸೇರಿದಂತೆ ತಡೆಯುವ ಕಾಮಗಾರಿಗಳಿಗೆ ಒತ್ತು ನೀಡಲಾಗುವುದು ಎಂದು ಹೇಳಿದ್ದಾರೆ. 

ಆಸ್ತಿಗಳ ಜಪ್ತಿಗೆ ವಾರೆಂಟ್‌: ಪಾಲಿಕೆಗೆ ಹಲವಾರು ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ 58,856 ಆಸ್ತಿಗಳಿಗೆ ಡಿಮ್ಯಾಂಡ್‌ ನೋಟಿಸ್‌ ಜಾರಿಗೊಳಿಸಲಾಗಿದೆ. ಈ ಆಸ್ತಿಗಳಿಂದಲೇ ಪಾಲಿಕೆಗೆ 113 ಕೋಟಿ ರೂ. ತೆರಿಗೆ ಬಾಕಿ ಬರಬೇಕಿದೆ. ಆ ಪೈಕಿ 973 ಆಸ್ತಿಗಳಿಗೆ ಜಪ್ತಿ ವಾರೆಂಟ್‌ ನೀಡಲಾಗಿದ್ದು, ಬಾಕಿ ಪಾವತಿಸಲು ಮೂರು ತಿಂಗಳು ಅವಕಾಶ ನೀಡಲಾಗಿದೆ. ಆ ಗಡುವಿನೊಳಗೆ ಮಾಲೀಕರು ತೆರಿಗೆ ಪಾವತಿಸದಿದ್ದರೆ ಅಂತಹವರ ಆಸ್ತಿಗಳಲ್ಲಿನ ಚರಾಸ್ತಿಗಳನ್ನು ಜಪ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಾಕಿದಾರರ ಪಟ್ಟಿ ಬಿಡುಗಡೆ ಮಾಡಿ: ಪಾಲಿಕೆಗೆ ಸಮರ್ಪಕವಾಗಿ ತೆರಿಗೆ ಪಾವತಿಸದ ಪ್ರತಿ ವಲಯದ 100 ಆಸ್ತಿದಾರರ ಹೆಸರುಗಳನ್ನು ಮಾಧ್ಯಮಗಳ ಮೂಲಕ ಬಹಿರಂಗ ಪಡಿಸಿಸಬೇಕು. ಇದರಿಂದಾಗಿ ಯಾರು ಪಾಲಿಕೆಗೆ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎಂಬುದು ಜನರಿಗೂ ತಿಳಿಯಲಿದೆ. ಬಾಕಿ ಉಳಿಸಿಕೊಂಡವರಿಗೆ ಪಾಲಿಕೆಯಿಂದ ಯಾವುದೇ ವಿನಾಯಿತಿ ಕೊಡಬೇಕಿಲ್ಲ. ಜತೆಗೆ ತೆರಿಗೆ ಪಾವತಿಸಿದ ಕೇಂದ್ರದ ಕಟ್ಟಡಗಳ ವಿರುದ್ಧವೂ ನೋಟಿಸ್‌ ಜಾರಿಗೊಳಿಸಿ ಎಂದು ಪರಮೇಶ್ವರ್‌ ಆಯುಕ್ತರಿಗೆ ಸೂಚಿಸಿದ್ದಾರೆ.

ಮೇ ವೇಳೆಗೆ ವೈಟ್‌ ಟಾಪಿಂಗ್‌ ಮುಗಿಸಿ: ನಗರದಲ್ಲಿ ಕಳೆದ ಎರಡು ವರ್ಷಗಳಿಂದ ವೈಟ್‌ಟಾಪಿಂಗ್‌ ಕಾಮಗಾರಿ ನಡೆಯುತ್ತಿದ್ದು, ಮೇ ತಿಂಗಳೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಪರಮೇಶ್ವರ್‌ ಅವರು, ತ್ಯಾಜ್ಯ ಸಮಸ್ಯೆ ನಿವಾರಣೆಗೆ ಹೊಸದಾಗಿ ಟೆಂಡರ್‌ ಪ್ರಕ್ರಿಯೆ ನಡೆಸುತ್ತಿದ್ದು, ಶೀಘ್ರದಲ್ಲಿಯೇ ಹಸಿ ತ್ಯಾಜ್ಯ ಸಂಗ್ರಹ ಹಾಗೂ ವಿಲೇವಾರಿಗೆ ಟೆಂಡರ್‌ ಆಹ್ವಾನಿಸಿ ಗುತ್ತಿಗೆದಾರರನ್ನು ಗುರುತಿಸಲಾಗುವುದು ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next