Advertisement

ಸರ್ಕಾರಿ ವಾಹನ ಚಾಲಕರಿಗೆ ಶೀಘ್ರ ನಿವೇಶನ: ಸಿ.ಎಸ್‌. ಷಡಕ್ಷರಿ

04:54 PM Jan 18, 2021 | Team Udayavani |

ಕಲಬುರಗಿ: ರಾಜ್ಯ ಸರ್ಕಾರಿ ವಾಹನ ಚಾಲಕರಿಗೆ ನಿವೇಶನ ಮಂಜೂರು ಮಾಡುವ ಕುರಿತು ರಾಜ್ಯ ಸರ್ಕಾರ ಈಗಾಗಲೇ ತೀರ್ಮಾನಿಸಿದ್ದು, ಈ ಕುರಿತ ಅಗತ್ಯ ಸಿದ್ಧತೆಗಳನ್ನು ನಡೆಸಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜಾಧ್ಯಕ್ಷ ಸಿ.ಎಸ್‌. ಷಡಕ್ಷರಿ ತಿಳಿಸಿದರು.

Advertisement

ನಗರದ ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ರವಿವಾರ ಕರ್ನಾಟಕ ರಾಜ್ಯ ಸರ್ಕಾರಿ ವಾಹನ ಚಾಲಕರ ಸಂಘ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸಮಾವೇಶ, ಕೊರೊನಾ ಸೇನಾನಿಗಳು ಹಾಗೂ ನಿವೃತ್ತ ಚಾಲಕರಿಗೆ ಸನ್ಮಾನ ಮತ್ತು ಕ್ಯಾಲೆಂಡರ್‌ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ವಾಹನ ಚಾಲಕರ ಸಂಘ ರಾಜ್ಯದಲ್ಲಿ ಮತ್ತಷ್ಟು ಸಂಘಟನೆಯಾಗುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಸರ್ಕಾರಿ ನೌಕರರ ಸಂಘದಿಂದ ಎಲ್ಲ ರೀತಿಯ ಸಹಕಾರ ಸಿಗಲಿದೆ. ಚಾಲಕರ ಬೇಡಿಕೆಗಳಿಗೆ ಸಂಘದ ಸ್ಪಂದಿಸುವುದೇ ಸರ್ಕಾರ ಮಟ್ಟದಲ್ಲಿ ಗಮನ ಸೆಳೆಯುವ ಕೆಲಸ ಮಾಡಲಿದೆ. ನಿವೇಶನ ಮಂಜೂರು ಬಗ್ಗೆ ಅಧಿ ಕಾರಿಗಳ ಮೇಲೆ ಒತ್ತಡ ತಂದು ಆದಷ್ಟು ಶೀಘ್ರ ಜಾರಿ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.

ವಾಹನ ಚಾಲಕರು ಹೆಚ್ಚು ವಿವಾದಗಳು, ಘರ್ಷಣೆಗಳಿಲ್ಲದೇ ಕಾರ್ಯ ನಿರ್ವಹಿಸುತ್ತಾರೆ. ಆದರೂ, ತಮ್ಮಲ್ಲಿಯೂ ಹಲವು ಸಮಸ್ಯೆಗಳಿವೆ. ಹೊರಗುತ್ತಿಗೆ ಆಧಾರದ ನೇಮಕಾತಿ ನಿಲ್ಲಿಸಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳು ಕೇಳಿಬರುತ್ತಿವೆ. ಈ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚಿಸಲಾಗುವುದು ಎಂದರು. ಇದಕ್ಕೂ ಮುನ್ನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಸಮಾವೇಶ ಉದ್ಘಾಟಿಸಿದರು.

ಸುಲಫಲ ಮಠದ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಂಘದ ಜಿಲ್ಲಾಧ್ಯಕ್ಷ ಸೈಯದ್‌ ಹಾಜಿ ಪೀರಾ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯ ಶಶೀಲ್‌ ನಮೋಶಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ, ಸಣ್ಣ ನೀರಾವರಿ ವೃತ್ತ ಕಚೇರಿ
ಅ ಧೀಕ್ಷಕ ಎಂಜಿನಿಯರ್‌ ಸುರೇಶ ಶರ್ಮಾ, ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್‌ ಜಗನ್ನಾಥ ಹಾಲಂಗೆ, ಅಧೀಕ್ಷಕ ಎಂಜಿನಿಯರ್‌ ಶಶಿಕಾಂತ ಮಳ್ಳಿ, ಬೃಹತ್‌ ನೀರಾವರಿ ಯೋಜನೆ ವಲಯದ ಮುಖ್ಯ ಎಂಜಿನಿಯರ್‌ ವೆಂಕಟೇಶ ಆರ್‌. ಎಲ್‌., ಪಂಚಾಯಿತಿ ರಾಜ್‌ ಇಲಾಖೆ ಅಧೀಕ್ಷಕ ಎಂಜಿನಿಯರ್‌ ರಾಜು ಡಾಂಗೆ, ಪ್ರಾದೇಶಿಕ ಸಾರಿಗೆ ಉಪ ಸಹಾಯಕ ಆಯುಕ್ತ ದಾಮೋದರ್‌, ಸಂಘದ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಶ್ರೀನಿವಾಸ, ಚಾಲಕರ ಸಂಘದ ಉಪಾಧ್ಯಕ್ಷ ಆನಂದ ಔರಳ್ಳಿಕರ, ಕಾರ್ಯದರ್ಶಿ ಸಂತೋಷ ಜೇರಟಗಿ, ಖಜಾಂಚಿ ಸಂತೋಷ ಯಡ್ರಾಮಿ, ನಗರ ಸಂಚಾಲಕ ಗುರುಶಾಂತಪ್ಪ ಓಗಿ, ಕಾನೂನು ಸಲಹೆಗಾರರ ಚಂದ್ರಕಾಂತ ಕಾಳಗಿ ಸೇರಿ ಹಲವರು ಉಪಸ್ಥಿತರಿದ್ದರು.

ಇದೇ ಸಮಯದಲ್ಲಿ ಚಾಲಕರ ಸಂಘದಿಂದ ಹಲವು ಬೇಡಿಕೆಗಳನ್ನು ಮಂಡಿಸಲಾಯಿತು. ಜತೆಗೆ ಕೊರೊನಾ ಸೇನಾನಿ, ನಿವೃತ್ತ ನೌಕರರು, ಕ್ರಿಯಾಶೀಲ ವಾಹನ ಚಾಲಕರು, ಸಂಘದ ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರಗಳನ್ನು ಸನ್ಮಾನಿಸಲಾಯಿತು.

Advertisement

ವಾಹನ ಚಾಲಕರ ಬೇಡಿಕೆಗಳು
ಸಮಾವೇಶದಲ್ಲಿ ಸರ್ಕಾರಿ ವಾಹನ ಚಾಲಕರ ಸಂಘದಿಂದ ಹಲವು ಬೇಡಿಕೆಗಳನ್ನು ಮಂಡಿಸಲಾಯಿತು. ವಾಹನ ಚಾಲಕರ ನಿವೇಶನಕ್ಕಾಗಿ ಕಲಬುರಗಿ ನಗರದಲ್ಲಿ ನಿವೇಶನ ಮಂಜೂರು ಮಾಡಬೇಕು. ಚಾಲಕರಿಗೆ ಮುಂಬಡ್ತಿ ಇಲ್ಲದ ಕಾರಣ, ವೇತನ ಪರಿಷ್ಕರಣೆ ಮಾಡಬೇಕು. ಖಾಲಿ ಇರುವ ಚಾಲಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ಪೊಲೀಸ್‌ ಇಲಾಖೆಯ ಚಾಲಕರಿಗೆ “ರಿಸ್ಕ್’ ಭತ್ಯೆಗಳನ್ನು ನೀಡಬೇಕು. ಸಂಘದ ಚಟುವಟಿಕೆಗಳಿಗೆ ಪ್ರತ್ಯೇಕ ಕಚೇರಿ ನಿರ್ಮಿಸಬೇಕು. ಲೋಕಸಭೆ ಚುನಾವಣೆಯಂತೆ ಗ್ರಾಮ ಪಂಚಾಯಿತಿ ಚುನಾವಣೆಯ ಗೌರವ ಧನ ಪಾವತಿಸಬೇಕೆಂದು ಒತ್ತಾಯಿಸಲಾಯಿತು.

ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ನೌಕರರ ಹಲವು ಸಮಸ್ಯೆಗಳ ಬಗ್ಗೆ ಈಗಾಗಲೇ ಗಮನಕ್ಕೆ ಬಂದಿದೆ. 371 (ಜೆ) ಅಡಿ ನೇಮಕಾತಿ, ಬಡ್ತಿ, ಮೀಸಲಾತಿಯಲ್ಲಿ ಗೊಂದಲ ಕೇಳಿಬರುತ್ತಿವೆ. ಈ ಬಗ್ಗೆ ಕೆಕೆಆರ್‌ಡಿಬಿಯಿಂದ ಒಂದು ಅಧ್ಯಯನ ನಡೆಸಲು ಉದ್ದೇಶಿಸಲಾಗಿದೆ. ಕಲಬುರಗಿ ನಗರದಲ್ಲಿ ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ ಒಂದು ಕೋಟಿ ಅನುದಾನ ನೀಡಲಾಗುವುದು.
ದತ್ತಾತ್ರೇಯ ಪಾಟೀಲ ರೇವೂರ, ಅಧ್ಯಕ್ಷ, ಕೆಕೆಆರ್‌ಡಿಬಿ

Advertisement

Udayavani is now on Telegram. Click here to join our channel and stay updated with the latest news.

Next