Advertisement

ಹಕ್ಕುಪತ್ರ ವಿತರಣೆ ತ್ವರಿತಗೊಳಿಸಿ: ಕಾಗೋಡು

03:53 PM Jan 22, 2018 | Girisha |

ಶಿವಮೊಗ್ಗ: ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರು ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಫೆ.26 ರವರೆಗೆ ಕಾಲಾವಕಾಶ
ನೀಡಲಾಗಿದೆ. ಅಷ್ಟರೊಳಗೆ ಎಲ್ಲರೂ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳುವಂತೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ
ಹೇಳಿದರು.

Advertisement

ತಾಲೂಕಿನ ಶೆಟ್ಟಿಕೆರೆ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆಂದು ದೂರು ನೀಡದೆ ಅದನ್ನು ಸಕ್ರಮ ಮಾಡಿಸಲು ಬೆಂಬಲಿಸುವಂತೆ ಹೇಳಿದರು. ಕಳೆದ 65 ವರ್ಷಗಳಿಂದ ನೆನೆಗುದಿದೆ ಬಿದ್ದಿದ್ದ ಕೆಲಸವನ್ನು ಈಗ ಮಾಡಲಾಗುತ್ತಿದೆ. ಬಾಕಿ ಉಳಿದಿರುವ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರಗಳನ್ನು ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಬೇಕು. ಆದಷ್ಟು ಬೇಗ ಅರ್ಜಿಗಳನ್ನು ಸರ್ಕಾರಕ್ಕೆ ಕಳಿಸಿದರೆ ವಿಲೇವಾರಿ ಮಾಡಿಕೊಡುವುದಾಗಿ ತಿಳಿಸಿದರು.

ಮುಳುಗಡೆ ಸಂದರ್ಭದಲ್ಲಿಯೇ ನೀರಾವರಿ ಭೂಮಿಯನ್ನು ನೀಡಿದರೆ ಅದನ್ನು ತೆಗೆದುಕೊಳ್ಳಲಿಲ್ಲ. ಬೇರೆ ಬೇರೆ ಕಾರಣ ಹೇಳಿ ಪುನಃ ಕಾಡಿಗೆ ಬಂದಿದ್ದರಿಂದಾಗಿಯೂ ಇಂದು ಸಮಸ್ಯೆ ಹಾಗೇ ಉಳಿಯುವಂತಾಗಿತ್ತು. ಸಮಸ್ಯೆ ಆಗಿದೆ ಎಂದು ಅದನ್ನು ಹಾಗೆ ಉಳಿಸುವುದರಲ್ಲಿಯೂ ಅರ್ಥವಿಲ್ಲವೆಂದು ಸರ್ಕಾರದ ಮಟ್ಟದಲ್ಲಿ ಯತ್ನ ನಡೆಸಲಾಗಿದೆ. ಅಂದಿನ ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ, ಅರಣ್ಯ
ಇಲಾಖೆ ಪ್ರಧಾನ ಕಾರ್ಯದರ್ಶಿ ಮದನ್‌ ಗೋಪಾಲ್‌ ಶ್ರಮದಿಂದಾಗಿ ಇಂದು ಒಂದು ಹಂತದ ಸಮಸ್ಯೆ ಬಗೆಹರಿಯುವಂತಾಗಿದೆ ಎಂದರು.

ರಾಜಕಾರಣಕ್ಕೆ ಬಂದಿದ್ದೇ ಭೂಮಿ ಹೋರಾಟದಿಂದ. ಹೀಗಾಗಿ ಭೂ ಒಡೆತನ ಕೊಡಿಸಬೇಕೆಂಬ ಕುದಿತ ತಮ್ಮನ್ನು ಸದಾ ಕಾಡುತ್ತಿತ್ತು. ಹೇಳಿದ ಕೆಲಸವನ್ನು ಇಂದಿನ ಅಪರ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಚಾಚೂ ತಪ್ಪದೆ ಮಾಡಿದ್ದಾರೆ. ಉಳಿದ ಸಂತ್ರಸ್ತರಿಗೂ ಸೌಲಭ್ಯ ಕಲ್ಪಿಸುವಂತೆಯೂ ಕಿವಿಮಾತು ಹೇಳಿದ ಅವರು, ಸಂತ್ರಸ್ತರೂ ಕೂಡ ಅಧಿಕಾರಿಗಳ ಹಿಂದೆ ಬಿದ್ದು ಕೆಲಸ ಮಾಡಿಸಿಕೊಳ್ಳಬೇಕೆಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಮಾತನಾಡಿ, ಭೂಮಿ ಇದ್ದರೆ ಸ್ವಾವಲಂಬಿಯಾಗಿ ಬದುಕಬಹುದು. ಈಗ ಪಡೆದ ಭೂಮಿಯನ್ನು ಸರಿಯಾಗಿ ಬಳಕೆ ಮಾಡಿಕೊಂಡು ವೈಜ್ಞಾನಿಕ ಕೃಷಿ ಮಾಡಿ ಆರ್ಥಿಕ ಅಭಿವೃದ್ಧಿ ಹೊಂದಬೇಕೆಂದು ಕಿವಿಮಾತು ಹೇಳಿದರು. ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ ಮಾತನಾಡಿ, ಸೇವಾವಧಿಯಲ್ಲಿಯೇ ಈ ದಿನ ಮರೆಯಲಾಗದ ಕ್ಷಣ. ರೈತರು ಬಂದು ಅರ್ಜಿ ಕೊಟ್ಟು ಹತ್ತು ಅರ್ಜಿ ಕೊಟ್ಟಾಗಿದೆ ಎಂದರು. ಶಾಸಕಿ ಶಾರದಾ ಪೂರ್ಯಾನಾಯ್ಕ, ಜಿಪಂ ಸದಸ್ಯರಾದ ತಮ್ಮಡಿಹಳ್ಳಿ ನಾಗರಾಜ್‌, ಕಲಗೋಡು ರತ್ನಾಕರ, ತಾಪಂ ಸದಸ್ಯ ಟಿ.ಡಿ. ಸುರೇಶ್‌, ಬಗರ್‌ ಸಮಿತಿ ಸದಸ್ಯ ರಾಜಪ್ಪ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next