ಅಳ್ನಾವರ: ಪಟ್ಟಣದ ಜನರಿಗೆ ಕುಡಿವ ನೀರು ಪೂರೈಸುವ ಶಾಶ್ವತ ಯೋಜನೆಯಾದ ಕಾಳಿ ನದಿಯಿಂದ ನೀರು ತರುವ ಕಾಮಗಾರಿಯನ್ನು ಶೀಘ್ರ ಆರಂಭಿಸಲಾಗುವುದೆಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು. ಪಟ್ಟಣದಲ್ಲಿ ರವಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಕಾಳಿ ನದಿ ಯೋಜನೆಗೆ ಸರ್ಕಾರ 72 ಕೋಟಿ ಅನುದಾನ ಬಿಡುಗಡೆಗೆ ಮಂಜೂರಾತಿ ನೀಡಿದೆ. ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಕ್ರಿಯಾ ಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಬೇಕು. ಅನಧಿಕೃತ ನಿರ್ಮಾಣಗೊಂಡಿರುವ ಬಡಾವಣೆಗಳನ್ನು ಸಕ್ರಮಗೊಳಿಸಲು ಅಡಚಣೆಯಾಗಿರುವ ಕಾನೂನು ತೊಡಕುಗಳ ಬಗ್ಗೆ ಚರ್ಚಿಸಿದರು.
ಆಶ್ರಯ ಯೋಜನೆಯಡಿ ನಿವೇಶನ ಒದಗಿಸಲು ಅಗತ್ಯ ಜಮೀನು ಖರೀದಿಸಲು ಸೂಕ್ತ ಭೂಮಿ ಗುರುತಿಸಿ ಮಂಜೂರಾತಿಗೆ ಪ್ರಸ್ತಾವನೆ ಕಳುಹಿಸಬೇಕು. ಭೂಮಿ ನೀಡಲು ಮುಂದಾಗುವ ಮಾಲಕರಿಗೆ ಮಾರುಕಟ್ಟೆ ದರದ ಜೊತೆಗೆ ಹೆಚ್ಚುವರಿ ಹಣವನ್ನು ಪಪಂದಿಂದ ಭರಿಸುವಂತೆ ಸೂಚಿಸಿದರು.
ಕಾಳಿ ನೀರು ತರುವ ಯೋಜನೆಗೆ ಈಗಾಗಲೇ ಅಗತ್ಯವಿರುವ ಎಲ್ಲ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ. ಜಾಕ್‌ವೆàಲ್ ನಿರ್ಮಾಣಕ್ಕೆ ಅವಶ್ಯವಿರುವ ಭೂಮಿಯ ಮಂಜೂರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅರಣ್ಯ ಇಲಾಖೆಯ ಪೂರ್ವಾನುಮತಿಗಾಗಿ ಇಲಾಖೆಯೊಂದಿಗೆ ಪತ್ರ ವ್ಯವಹಾರ ಮಾಡಲಾಗಿದೆ ಎಂದು ಜಲ ಮಂಡಳಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಕಳೆದ ಬೇಸಿಗೆಯಲ್ಲಿ ಪಟ್ಟಣದ ಜನರಿಗೆ ಟ್ಯಾಂಕರ್ ಮೂಲಕ ಸುಮಾರು 94 ದಶ ಲಕ್ಷ ಲೀಟರ್ ನೀರು ಪೂರೈಸಲಾಗಿದೆ. ಸಮೀಕ್ಷೆಯಂತೆ ಪಟ್ಟಣದಲ್ಲಿ ಒಂದು ಸಾವಿರಕ್ಕೂ ಅ ಧಿಕ ಕುಟುಂಬಕ್ಕೆ ಶೌಚಾಲಯವಿಲ್ಲ. ಇವರ ಪೈಕಿ ಈಗಾಗಲೇ ನಾಲ್ಕು ನೂರು ಶೌಚಾಲಯಗಳ ನಿರ್ಮಾಣಗೊಳ್ಳುತ್ತಿವೆ. ನಿಗದಿತ ಗುರಿಯನ್ನು ಇನ್ನೊಂದು ತಿಂಗಳಲ್ಲಿ ತಲುಪಲಾಗುವುದೆಂದು ಎಂದು ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ ಸಭೆಗೆ ತಿಳಿಸಿದರು.
ಯೋಜನಾ ನಿರ್ದೇಶಕ ರಮೇಶ ಕೋನರೆಡ್ಡಿ, ಧಾರವಾಡ ತಹಶೀಲ್ದಾರ ಪ್ರಕಾಶ ಕುದರಿ, ಪಪಂ ಪ್ರಭಾರಿ ಅಧ್ಯಕ್ಷ ಉಸ್ಮಾನ ಬಾತಖಂಡೆ, ಅಭಿಯಂತರ ಪಾಟೀಲ, ಉಪ ತಹಶೀಲ್ದಾರ ಟಿ.ಬಿ. ಬಡಿಗೇರ, ಕಂದಾಯ ನಿರೀಕ್ಷಕ ರಮೇಶ ಬಂಡಿ, ಶ್ರೀಕಾಂತ ಗಾಯಕವಾಡ, ಸ್ಥಾಯಿ ಸಮಿತಿ ಅಧ್ಯಕ್ಷ ರಾಜೇಶ ಬೈಕೇರಿಕರ, ಮಧು ಬಡಸ್ಕರ, ಛಗನ ಪಟೇಲ, ಪರಮೇಶ್ವರ ತೇಗೂರ ಇದ್ದರು.