ಬೆಳಗಾವಿ: ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕೆಲವು ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಲು ಸಿದ್ಧತೆ ನಡೆದ ಬೆನ್ನಲ್ಲೇ ಈ ಭಾಗದ ಜನರ ಅನುಕೂಲಕ್ಕಾಗಿ ಈಗ ಗ್ರಾಮೀಣಾಭಿವೃದ್ಧಿ ಇಲಾಖೆಯ ವಿಶೇಷ ಕಚೇರಿಯನ್ನೂ ಆರಂಭಿಸಲು ನಿರ್ಧರಿಸಲಾಗಿದೆ.
ನೀರು, ರಸ್ತೆ, ನೈರ್ಮಲ್ಯ, ಉದ್ಯೋಗ ಖಾತ್ರಿ ಸೇರಿದಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗಾಗಿ ಈ ವಿಶೇಷ ಕಚೇರಿ ಸ್ಥಾಪನೆಯಾಗಲಿದ್ದು, ಆಡಳಿತಾತ್ಮಕ ಮತ್ತು ಆರ್ಥಿಕ ಸವಲತ್ತು ನೀಡಿ ಎಲ್ಲ ನಿರ್ಣಯ ಕೈಗೊಳ್ಳುವ ಅಧಿಕಾರ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಸುವರ್ಣ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಲಾಖೆಯ ಒಂದು ಕಚೇರಿ ಬೆಂಗಳೂರಿನಲ್ಲೇ ಇರಲಿದ್ದು ಅದು ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ಅನುಕೂಲವಾಗುವಂತೆ ಕಾರ್ಯ ನಿರ್ವಹಿಸಲಿದೆ. ಇನ್ನೊಂದು ವಿಶೇಷ ಕಚೇರಿಯನ್ನು ಬೆಳಗಾವಿಯಲ್ಲಿ ಸ್ಥಾಪನೆ ಮಾಡಲಾಗುವುದು. ಈ ಸಂಬಂಧ ಅಧಿಕಾರಿಗಳ ಜತೆ ಒಂದು ಹಂತದ ಸಮಾಲೋಚನೆ ಪೂರ್ಣಗೊಂಡಿದೆ. ಆದರೆ ಕಚೇರಿಯ ಸ್ಥಾಪನೆಗೆ ಕಾಲ ನಿಗದಿ ಮಾಡುವುದು ಕಷ್ಟ. ಯಾವ ರೀತಿ ಕಚೇರಿ ಇರಬೇಕು. ಯಾವ ಹಂತದ ಅಧಿಕಾರಿಗಳನ್ನು ಇಲ್ಲಿಗೆ ನಿಯೋಜನೆ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆದಿದೆ. ಆದಷ್ಟು ಬೇಗ ಈ ವಿಶೇಷ ಕಚೇರಿ ಇಲ್ಲಿ ಕಾರ್ಯನಿರ್ವಹಿಸಲಿದೆ ಎಂದರು.
ಉತ್ತರ ಕರ್ನಾಟಕದ ಜನರಿಗೆ ಮೊದಲಿಂದಲೂ ಸರ್ಕಾರಗಳು ತಮ್ಮನ್ನು ತಾತ್ಸಾರದಿಂದ ನೋಡುತ್ತಿವೆ ಎಂಬ ಭಾವನೆ ಇದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಈ ವಿಶೇಷ ಕಚೇರಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಅಗತ್ಯವಿರುವ ವ್ಯವಸ್ಥೆ ರೂಪಿಸಿ ಶೀಘ್ರ ಅನುಷ್ಠಾನ ಮಾಡಲಾಗುವುದು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯ ಎಲ್ಲ ಕಚೇರಿಗಳು ಇಲ್ಲಿ ಕಾರ್ಯನಿರ್ವಹಿಸಲಿವೆ ಎಂದರು.
ಸುವರ್ಣ ವಿಧಾನಸೌಧದಲ್ಲಿ ಜಿಪಂ ಸಿಇಒಗಳ ಜತೆ ನಡೆದ ಸಭೆಯಲ್ಲಿ ಹಲವಾರು ಅಭಿಪ್ರಾಯ ಹಾಗೂ ಸಲಹೆಗಳು ಬಂದಿವೆ. ಮುಖ್ಯವಾಗಿ ನರೇಗಾ ಯೋಜನೆಯಡಿ ಮಾನವ ದಿನಗಳನ್ನು 100 ದಿನಗಳಿಂದ 150 ದಿನಗಳಿಗೆ ಹೆಚ್ಚಿಸಬೇಕು ಎಂಬ ಸಲಹೆ ಬಂದಿದೆ. ಎಲ್ಲ ಆಭಿಪ್ರಾಯಗಳನ್ನು ಕ್ರೋಡೀಕರಿಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದರು.