ಉಡುಪಿ: ಉಡುಪಿಯಲ್ಲಿ ಭಾರತದ 2ನೇ ಅತೀ ದೊಡ್ಡ ಲಾಂಗ್ ಟೆನ್ನಿಸ್ ಒಳಾಂಗಣ ಕ್ರೀಡಾಂಗಣ ಸಿದ್ಧವಾಗುತ್ತಿದ್ದು 2 ತಿಂಗಳೊಳಗೆ ಲೋಕಾರ್ಪಣೆಯಾಗಲಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಹೇಳಿದರು.
ಅವರು ಆ. 29ರಂದು ಖ್ಯಾತ ಕ್ರೀಡಾಪಟು ದಿ| ಧ್ಯಾನ್‌ಚಂದ್ ಅವರ ಸ್ಮರಣೆಯ ಅಂಗವಾಗಿ ಪುರ ಭವನದಲ್ಲಿ ಜರಗಿದ ರಾಷ್ಟ್ರೀಯ ಕ್ರೀಡಾ ದಿನಾ ಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಸುಸಜ್ಜಿತ ಕ್ರಿಕೆಟ್ ಸ್ಟೇಡಿಯಂ, ನೇಜಾರಿನಲ್ಲಿ 8 ಕೋ.ರೂ. ವೆಚ್ಚದ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ, ಕ್ರೀಡಾ ಹಾಸ್ಟೆಲ್, ಮಹಿಳಾ ಹಾಸ್ಟೆಲ್, ಅಮೆರಿಕದ ಗುಣಮಟ್ಟ ವನ್ನು ಹೋಲುವ ಜಿಮ್ನಾಶಿಯಂ ಜತೆಗೆ ಉಡುಪಿ ಯಲ್ಲಿ ನ್ಪೋರ್ಟ್ಸ್ ಸೈನ್ಸ್ ಸೆಂಟರ್ ಅನ್ನು ನಿರ್ಮಾಣ ಮಾಡಲಾಗುವುದು ಎಂದು ನುಡಿದರು.
ಪ್ರತಿವರ್ಷ ಅರ್ಜುನ ಪ್ರಶಸ್ತಿಯನ್ನು ನೀಡುವಂತೆ ಈ ಬಾರಿ ಕ್ರೀಡೆಗಳಿಗೆ ವಿಶೇಷ ಪ್ರೋತ್ಸಾಹ ನೀಡುವ ಹತ್ತು ಸಂಘ-ಸಂಸ್ಥೆಗಳಿಗೆ ತಲಾ ಐದು ಲಕ್ಷ ರೂಪಾಯಿ ನಗದು ನೀಡುವ ಪ್ರಶಸ್ತಿಯನ್ನು ಸ್ಥಾಪಿಸ ಲಾಗಿದೆ ಎಂದು ತಿಳಿಸಿದ ಸಚಿವರು, ರಾಜ್ಯದ 14 ಈಜು ಕೊಳ ಗಳ ನಿರ್ವಹಣೆಯನ್ನು ಹೊರ ಗುತ್ತಿಗೆ ಯಿಂದ ತಪ್ಪಿಸಿದ್ದಕ್ಕೆ 14 ಲಕ್ಷ ರೂಪಾಯಿ ಇದ್ದ ಆದಾಯ ಎರಡೇ ತಿಂಗಳಲ್ಲಿ ಈಗ 27 ಲಕ್ಷ ರೂ. ಆಗಿದೆ. ರಾಜ್ಯದ 32 ಕ್ರೀಡಾ ಹಾಸ್ಟೆಲ್‌ಗಳ ನಿರ್ವಹಣೆ ಯನ್ನೂ ಹೊರಗುತ್ತಿಗೆಯಿಂದ ತಪ್ಪಿಸಿ ಇಲಾಖೆ ಯಿಂದಲೇ ಮೆಸ್ ನಡೆಸುವಂತೆ ಆದೇಶಿಸಲಾಗಿದೆ ಎಂದು ಹೇಳಿದರು.
ಜಿ.ಪಂ. ಅಧ್ಯಕ್ಷ ದಿನಕರಬಾಬು, ನಗರಸಭಾಧ್ಯಕ್ಷೆ ಮೀನಾಕ್ಷಿ ಬನ್ನಂಜೆ, ಡಾ| ಜಿ.ಶಂಕರ್ ಸರಕಾರಿ ಮ.ಪ್ರ.ದ. ಕಾಲೇಜಿನ ಪ್ರಾಂಶುಪಾಲ ಪ್ರೊ| ಜಗದೀಶ್ ರಾವ್ ಹಾಗೂ ಪರ್ಕಳ ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಯು. ಹರೀಶ್ ಉಪಸ್ಥಿತರಿದ್ದರು.
ವಿಶೇಷ ಕ್ರೀಡಾ ಸಾಧನೆಗೈದು ಉಡುಪಿ ಜಿಲ್ಲೆಯ ಹೆಸರನ್ನು ಪ್ರಸಿದ್ಧಗೊಳಿಸಿದ ಪ್ರಜ್ಞಾ ಕೆ. ಮತ್ತು ಅಫ್ರೀದ್ ಅವರನ್ನು ಇದೇ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.
ಉಡುಪಿ ಜಿಲ್ಲೆಯ ವಿವಿಧ ಕ್ರೀಡಾ ಸಂಸ್ಥೆಗಳ ಮುಖ್ಯಸ್ಥರುಗಳಾದ ಡಾ| ಕೃಷ್ಣಪ್ರಸಾದ್, ಯು. ದಾಮೋದರ್, ರಾಜೇಂದ್ರ ಸುವರ್ಣ, ಹರೀಶ್, ಉಮಾನಾಥ್, ಚಂದ್ರಶೇಖರ್, ಜಯರಾಮ್ ಸುವರ್ಣ, ದಿನೇಶ್ ಪುತ್ರನ್, ದೇವಾನಂದ್ ಮತ್ತಿತರರು ವೇದಿಕೆಯಲ್ಲಿದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.