Advertisement

ಬೆಂವಿವಿ ವಾಣಿಜ್ಯ ವಿಭಾಗಕ್ಕೆ ಶೀಘ್ರ ನಾಲ್ಕು ಹೊಸ ಕೋರ್ಸ್‌ ಸೇರ್ಪಡೆ?

11:14 AM Jun 30, 2017 | Team Udayavani |

ಬೆಂಗಳೂರು: ವಾಣಿಜ್ಯ ವಿಭಾಗಕ್ಕೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಮತ್ತು ವಿದ್ಯಾರ್ಥಿಗಳಿಗೆ ರಾಷ್ಟ್ರ ಹಾಗೂ ಜಾಗತಿಕ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಮಾಡಲು ಬೆಂಗಳೂರು ವಿಶ್ವವಿದ್ಯಾಲಯವು ನಾಲ್ಕು ಹೊಸ ಕೋರ್ಸ್‌ಗಳನ್ನು ಪ್ರಸ್ತಕ ಸಾಲಿನಿಂದಲೇ ಆರಂಭಿಸಲಿದೆ.

Advertisement

ಕಳೆದ ಸಾಲಿಗೆ ಹೋಲಿಸಿದರೆ 2017-18ನೇ ಸಾಲಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಶೇ.35ರಿಂದ 40ರಷ್ಟು ಏರಿಕೆಯಾಗಿದ್ದು ಬಹುತೇಕ ಕಾಲೇಜುಗಳಲ್ಲಿ ವಿಜ್ಞಾನದ ಜತೆಗೆ ವಾಣಿಜ್ಯ ವಿಭಾಗ ತೆರೆಯಲಾಗಿದೆ. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ ಬಹುಪಾಲು ವಾಣಿಜ್ಯ ವಿಭಾಗದ ಆಯ್ಕೆಗೆ ಮುಂದಾಗುತ್ತಿದ್ದಾರೆ.

ಇದರ ಜತೆಗೆ, ವಾಣಿಜ್ಯ ವಿಭಾಗದಿಂದ ಪದವಿ ಪಡೆದವರು ರಾಜ್ಯದಲ್ಲಿ ಮಾತ್ರವಲ್ಲದೇ ದೇಶ, ವಿದೇಶಗಳಲ್ಲೂ ಉದ್ಯೋಗ ಪಡೆಯಲು ಪೂರಕವಾಗುವಂತೆ ಬೆಂಗಳೂರು ವಿಶ್ವವಿದ್ಯಾಲಯವು ಈ ಶೈಕ್ಷಣಿಕ ವರ್ಷದಿಂದ ನಾಲ್ಕು ಹೊಸ ಕೋರ್ಸ್‌ಗಳನ್ನು ಪರಿಚಯಿಸಲು ನಿರ್ಧರಿಸಲಾಗಿದೆ.

ಹೊಸ ಕೋರ್ಸ್‌ಗಳು: ಬಿ.ಕಾಂ ಇನ್‌ ಇನ್ಸೂರೆನ್ಸ್‌ ಮತ್ತು ಅಕ್ಯುರಿಯಲ್‌ ಸ್ಟಡೀಸ್‌, ಬಿ.ಕಾಂ.ಇನ್‌ ಲಾಜೆಸ್ಟಿಕ್ಸ್‌ ಆ್ಯಂಡ್‌ ಸಪ್ಲೆ„ ಚೈನ್‌ ಮ್ಯಾನೇಜಮೆಂಟ್‌, ಬಿ.ಕಾಂ ಹಾನರ್‌ ಮತ್ತು ಬಿಬಿಎ ಇನ್‌ ಆವಿಯೇಷನ್‌ ಮ್ಯಾನೇಜಮೆಂಟ್‌(ವಾಯುಯಾನ ನಿರ್ವಹಣೆ) ಎಂಬ ನಾಲ್ಕು ಹೊಸ ಕೋರ್ಸ್‌ ಆರಂಭಿಸಲು ಬೆಂವಿವಿ ವಿದ್ಯಾವಿಷಯಕ ಪರಿಷತ್‌ ಸಭೆ ಒಪ್ಪಿಗೆ ಸೂಚಿಸಿದೆ.

ರಾಜ್ಯದ ಬೇರ್ಯಾವ ವಿಶ್ವವಿದ್ಯಾಲಯದಲ್ಲೂ ಈ ಕೋರ್ಸ್‌ ಇಲ್ಲ. ವಾಣಿಜ್ಯ ವಿಭಾಗದಲ್ಲಿ ಅತಿ ಬೇಡಿಕೆಯ ವಿಷಯವಾಗಿರುವ ಇನ್ಸೂರೇನ್ಸ್‌ ಹಾಗೂ ಅಕ್ಯುರಿಯಲ್‌ ಸ್ಟಡೀಸ್‌ ಮತ್ತು ಲಾಜೆಸ್ಟಿಕ್‌ ಆ್ಯಂಡ್‌ ಸಪ್ಲೆ„ ಚೈನ್‌ ಮ್ಯಾನೇಜಮೆಂಟ್‌ ಕೋರ್ಸ್‌ಗಳು ವಿದ್ಯಾರ್ಥಿಗಳು ವಿದೇಶದಲ್ಲಿ ಉದ್ಯೋಗ ಪಡೆಯಲು ಸಹಕಾರಿಯಾಗಲಿದೆ.

Advertisement

ಹೊರ ರಾಜ್ಯದ ಕೆಲವೊಂದು ವಿವಿಯಲ್ಲಿ ಹಾಗೂ ಡೀಮ್ಡ್ ವಿಶ್ವವಿದ್ಯಾಲಯ ಮತ್ತು ಖಾಸಗಿ ವಾಣಿಜ್ಯ ಕಾಲೇಜಿನಲ್ಲಿ ಬಿ.ಕಾಂ ಹಾನರ್‌ ಪದವಿ ಇದೆ. ಆದರೆ, ರಾಜ್ಯದ ಯಾವ ವಿಶ್ವವಿದ್ಯಾಲಯದಲ್ಲೂ ಈ ಕೋರ್ಸ್‌ ಇಲ್ಲ. ಇದಕ್ಕೂ ಮೂರು ವರ್ಷದ ಪಠ್ಯಕ್ರಮ ಸಿದ್ಧವಾಗಿದೆ ಎಂದು ವಾಣಿಜ್ಯ ವಿಭಾಗದ ಹಿರಿಯ ಪ್ರಾಧ್ಯಾಪಕರೊಬ್ಬರು ಮಾಹಿತಿ ನೀಡಿದರು.

ಸರ್ಕಾರದ ಅನುಮತಿ ಅಗತ್ಯ: ಬೆಂವಿವಿ ವಿದ್ಯಾವಿಷಯಕ ಪರಿಷತ್‌ ಒಪ್ಪಿಗೆ ನೀಡಿರುವ ನಾಲ್ಕು ಹೊಸ ಕೋರ್ಸ್‌ಗೆ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಅನುಮತಿ ಅಗತ್ಯವಿದೆ. ಈ ವರ್ಷವೇ ಅನುಮತಿ ನೀಡುವಂತೆ ಬೆಂವಿವಿ ವಾಣಿಜ್ಯ ವಿಭಾಗದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಇನ್ನು ಯಾವುದೇ ತೀರ್ಮಾನವಾಗಿಲ್ಲ. 

ವಾಣಿಜ್ಯ ವಿಭಾಗದಲ್ಲಿ ಬೇಡಿಕೆ ಹೆಚ್ಚಾದ ಹಿನ್ನೆಯಲ್ಲಿ ಮತ್ತು ವಿದ್ಯಾರ್ಥಿಗಳಿಗೆ ಜಾಗತಿ ಮಟ್ಟದಲ್ಲಿ ಉದ್ಯೋಗಾವಕಾಶ ಕಲ್ಪಿಸಲು ವಾಣಿಜ್ಯದಲ್ಲಿ ನಾಲ್ಕು ಹೊಸ ಕೋರ್ಸ್‌ ಆರಂಭಿಸುತ್ತಿದ್ದೇವೆ. ಕಾಲೇಜುಗಳ ಬೇಡಿಕೆಯನ್ನು ಪರಿಶೀಲಿಸಿ, ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ.
-ಡಾ.ಎಂ.ಮುನಿರಾಜು, ಬೆಂವಿವಿ ಹಂಗಾಮಿ ಕುಲಪತಿ

ಬೆಂವಿವಿ ಆರಂಭಿಸುತ್ತಿರುವ ನಾಲ್ಕು ಕೋರ್ಸ್‌ಗಳು ರಾಜ್ಯದ ಬೇರೆಲ್ಲೂ ಇಲ್ಲ. ಬಿ.ಕಾಂ. ಹಾನರ್‌ ಪದವಿ ಕೆಲವು ಖಾಸಗಿ ಕಾಲೇಜು ಹಾಗೂ ಹೊರ ರಾಜ್ಯದ ಕೆಲವು ವಿವಿಗಳಲ್ಲಿದೆ. ವಿದ್ಯಾರ್ಥಿಗಳಿಗೆ ವಾಣಿಜ್ಯ ವಿಭಾಗಲ್ಲಿ ಕೋರ್ಸ್‌ ಆಯ್ಕೆ ಹೆಚ್ಚಾಗುವುದು ಒಂದೆಡೆಯಾದರೆ, ಇನ್ಸೂರೇನ್ಸ್‌ ಹಾಗೂ ಲಾಜೆಸ್ಟಿಕ್‌ ವಿಭಾಗದಲ್ಲಿ ಉದ್ಯೋಗ ಪಡೆಯಲು ಸಹಾಯವೂ ಆಗಲಿದೆ. 
-ಪ್ರೊ. ಎಂ.ರಾಮಚಂದ್ರಗೌಡ, ವಾಣಿಜ್ಯ ವಿಭಾಗದ ಮುಖ್ಯಸ್ಥ, ಬೆಂವಿವಿ 

*  ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next