Advertisement

ಮೈಸೂರಲ್ಲಿ ಶೀಘ್ರ ತಲೆ ಎತ್ತಲಿವೆ 20 ಇ-ಶೌಚಾಲಯಗಳು

01:04 PM Dec 06, 2017 | Team Udayavani |

ಮೈಸೂರು: ಮೈಸೂರಿಗೆ 3ನೇ ಬಾರಿಗೆ ಸ್ವಚ್ಛನಗರಿ ಕೀರ್ತಿ ತಂದುಕೊಡುವ ನಿಟ್ಟಿನಲ್ಲಿ ಸತತ ಪ್ರಯತ್ನದಲ್ಲಿರುವ ಮೈಸೂರು ಮಹಾ ನಗರಪಾಲಿಕೆ ನಗರದಲ್ಲಿನ ಸಾರ್ವಜನಿಕ ಶೌಚಾಲಯದ ಸಮಸ್ಯೆ ಹೋಗಲಾಡಿಸಲು ಶೀಘ್ರವೇ 20 ಇ-ಟಾಯ್ಲೆಟ್‌ಗಳನ್ನು ಆರಂಭಿಸಲು ಮುಂದಾಗಿದೆ.

Advertisement

ನಗರದಲ್ಲಿ ಸಾಕಷ್ಟು ಸಾರ್ವಜನಿಕ ಶೌಚಾಲಯಗಳಿದ್ದರೂ ಅವುಗಳ ನಿರ್ವಹಣೆ ಕಷ್ಟವಾಗಿದ್ದು, ಈ ಸಮಸ್ಯೆ ತಪ್ಪಿಸುವ ಉದ್ದೇಶದಿಂದ ಇ-ಟಾಯ್ಲೆಟ್‌ಗಳನ್ನು ಆರಂಭಿಸಲು ಮುಂದಾಗಿದೆ. ಮುಂದಿನ ಕೆಲವೇ ತಿಂಗಳಲ್ಲಿ ನಗರದ ನಾನಾ ಕಡೆಗಳಲ್ಲಿ 20 ಇ-ಟಾಯ್ಲೆಟ್‌ಗಳು ಕಾರ್ಯಾರಂಭ ಮಾಡಲಿವೆ.

ನಗರ ಪಾಲಿಕೆ 2016ರಿಂದ ಇ-ಟಾಯ್ಲೆಟ್‌ ಆರಂಭಿಸಿದ್ದು, ಅದರಂತೆ ಪ್ರಸ್ತುತ ನಗರದ ಡಿ.ದೇವರಾಜ ಅರಸು ರಸ್ತೆ, ಜಗನ್ಮೋಹನ ಅರಮನೆ ಸಮೀಪ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಒಟ್ಟು 5 ಇ-ಟಾಯ್ಲೆಟ್‌ಗಳು ಕಾರ್ಯನಿರ್ವಹಿಸುತ್ತಿವೆ.

ಬಳಕೆಗೆ ಹಿಂದೇಟು: ನಗರದಲ್ಲಿ ಈವರೆಗೂ ಒಟ್ಟು 39 ಸಾರ್ವಜನಿಕ ಶೌಚಾಲಯಗಳಿದ್ದು, ಇದರ ನಿರ್ವಹಣೆ ಉತ್ತಮವಾಗಿರದ ಕಾರಣ ಜನರು ಇವುಗಳ ಬಳಕೆಗೆ ಹಿಂದೇಟು ಹಾಕುತ್ತಿದ್ದಾರೆ. ಈ ಕಾರಣದಿಂದಲೂ ನಗರದಲ್ಲಿ ಇ-ಟಾಯ್ಲೆಟ್‌ಗಳನ್ನು ಆರಂಭಿಸಲು ಪಾಲಿಕೆ ಚಿಂತನೆ ನಡೆಸಿದ್ದು, ಮುಂದಿನ ಕೆಲವೇ ತಿಂಗಳಲ್ಲಿ ಎಲ್ಲಾ 20 ಇ-ಟಾಯ್ಲೆಟ್‌ಗಳು ಆರಂಭಗೊಳ್ಳಲಿದೆ. ಇದಲ್ಲದೆ ಇ-ಟಾಯ್ಲೆಟ್‌ ಆರಂಭಿಸಲು ಕಡಿಮೆ ಜಾಗದ ಅಗತ್ಯವಿದ್ದು, ಒಂದು ಇ-ಟಾಯ್ಲೆಟ್‌ ತೆರೆಯಲು ನಗರ ಪಾಲಿಕೆಗೆ 7 ರಿಂದ 7.5 ಲಕ್ಷ ವೆಚ್ಚವಾಗಲಿದೆ.

ಇ-ಟಾಯ್ಲೆಟ್‌ ಬಳಕೆ ಹೇಗೆ?: ಒಂದು ಬಾರಿಗೆ ಒಬ್ಬರು ಮಾತ್ರ ಇ-ಟಾಯ್ಲೆಟ್‌ ಅನ್ನು 2 ರೂ.(ನಾಣ್ಯ) ಬಳಿಸಿ ಉಪಯೋಗಿಸಬಹುದಾಗಿದೆ. ಇ-ಟಾಯ್ಲೆಟ್‌ ಆಧುನಿಕ ತಂತ್ರಜಾnನ ಹೊಂದಿದ್ದು, ಯಾವುದೇ ವ್ಯಕ್ತಿ ಶೌಚಾಲಯದ ಬಳಕೆ ಮಾಡಿದ ಕೂಡಲೇ ನೀರು ಸ್ವಯಂಚಾಲಿತವಾಗಿ ಪ್ಲಶ್‌ ಆಗಲಿದ್ದು, ಇದಕ್ಕಾಗಿ 2000 ಲೀಟರ್‌ ನೀರಿನ ಟ್ಯಾಂಕ್‌ ಅಳವಡಿಸಲಾಗಿದೆ. ಈ ಆಧುನಿಕ ಶೌಚಾಲಯವು ಸಂಪೂರ್ಣ ಸೆನ್ಸಾರ್‌ನಿಂದ ಕಾರ್ಯನಿರ್ವಹಿಸಲಿದ್ದು, ಹೀಗಾಗಿ ಇದನ್ನು ಡಿಜಿಟಲ್‌ ಶೌಚಾಲಯವೆಂದು ಸಹ ಕರೆಯಲಾಗುತ್ತಿದೆ.

Advertisement

ಪಬ್ಲಿಕ್‌ ಟಾಯ್ಲೆಟ್‌ ಬಂದ್‌: ಪಾಲಿಕೆ ನಿರ್ಧಾರದಂತೆ 20 ಇ-ಟಾಯ್ಲೆಟ್‌ ಆರಂಭವಾದಂತೆ ನಗರದಲ್ಲಿರುವ 39 ಸಾರ್ವಜನಿಕ ಶೌಚಾಲಯಗಳನ್ನು ಬಂದ್‌ ಮಾಡಲು ಪಾಲಿಕೆ ಚಿಂತನೆ ನಡೆಸಿದೆ. ಅಲ್ಲದೆ ಇ-ಟಾಯ್ಲೆಟ್‌ ಆರಂಭಿಸುವುದರಿಂದ ನಗರದ ಹಲವು ಭಾಗಗಳಲ್ಲಿ ಪ್ರಾರಂಭಿಸಬಹುದಾಗಿದ್ದು, ಒಂದೇ ರಸ್ತೆಯ ವಿವಿಧ ಕಡೆಗಳಲ್ಲಿ ಇದನ್ನು ತೆರೆಯಲು ಅನಕೂಲವಾಗಲಿದೆ.

ಆದರೆ, ನಿತ್ಯವೂ ನೂರಾರು ಮಂದಿ ಬಳಕೆ ಮಾಡುವ ಕಾರಣದಿಂದ ಪ್ರಮುಖ ಬಸ್‌ನಿಲ್ದಾಣಗಳಲ್ಲಿರುವ ಸಾರ್ವಜನಿಕ ಶೌಚಾಲಯಗಳನ್ನು ಬಂದ್‌ ಮಾಡದಿರಲು ಪಾಲಿಕೆ ನಿರ್ಧರಿಸಿದೆ. 20 ಇ-ಟಾಯ್ಲೆಟ್‌ ಆರಂಭಗೊಂಡ ಬಳಿಕ ಈಗಿರುವ ಪಬ್ಲಿಕ್‌ ಟಾಯ್ಲೆಟ್‌ಗಳ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸಿ ಪಾಲಿಕೆ ಕಚೇರಿ ಅಥವಾ ಇನ್ನಿತರ ಕಚೇರಿ ಆರಂಭಿಸಲು ಪಾಲಿಕೆ ಚಿಂತನೆ ನಡೆಸಿದೆ.

ನಗರದಲ್ಲಿ ಈಗಾಗಲೇ ಆರಂಭಿಸಿರುವ ಇ-ಟಾಯ್ಲೆಟ್‌ಗಳ ಬಗ್ಗೆ ಜನರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಹೊಸದಾಗಿ 20 ಇ-ಟಾಯ್ಲೆಟ್‌ ತೆರೆಯಲು ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಮುಂದಿನ ಕೆಲವೇ ತಿಂಗಳಲ್ಲಿ ನಗರದ ನಾನಾ ಭಾಗಗಳಲ್ಲಿ 20 ಇ-ಟಾಯ್ಲೆಟ್‌ಗಳು ಕಾರ್ಯಾರಂಭಗೊಳ್ಳಲಿದೆ.
-ಜಿ. ಜಗದೀಶ್‌,ಆಯುಕ್ತರು, ನಗರ ಪಾಲಿಕೆ

* ಸಿ. ದಿನೇಶ್‌

Advertisement

Udayavani is now on Telegram. Click here to join our channel and stay updated with the latest news.

Next