ಚಿತ್ರದುರ್ಗ: ನಗರದ ಚಳ್ಳಕೆರೆ ವೃತ್ತದಿಂದ ಗಾಂಧಿ ವೃತ್ತದವರೆಗೆ ರಸ್ತೆ ಅಗಲೀಕರಣ ಮಾಡಲು ಉದ್ದೇಶಿಸಲಾಗಿದ್ದು, ಮೂರು ದಿನಗಳೊಳಗೆ ತೆರವುಗೊಳ್ಳಲಿರುವ ಕಟ್ಟಡಗಳ ಸಂಪೂರ್ಣ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ವಸಿರೆಡ್ಡಿ ವಿಜಯ ಜ್ಯೋತ್ಸ್ನಾ, ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ಬೆಳಗ್ಗೆ ನಗರದ ಚಳ್ಳಕೆರೆ ಟೋಲ್‌ಗೇಟ್‌ನಿಂದ ಗಾಂಧಿ ವೃತ್ತವರೆಗೆ ರಸ್ತೆ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು. ಇದು ಹಳೆ ರಾಷ್ಟ್ರೀಯ ಹೆದ್ದಾರಿಯಾಗಿದ್ದು ರಸ್ತೆ ಮಧ್ಯ ಭಾಗದಿಂದ ಎರಡು ಬದಿಗಳಲ್ಲಿ 15 ಮೀಟರ್ ಅಗಲೀಕರಣ ಮಾಡಲಾಗುತ್ತದೆ. ರಾಜ್ಯ ಸರ್ಕಾರ ರಸ್ತೆ ಅಗಲೀಕರಣಕ್ಕಾಗಿ 25 ಕೋಟಿ ರೂ. ಅನುದಾನ ನೀಡಿದ್ದು, ಶೀಘ್ರದಲ್ಲೇ ರಸ್ತೆ ಅಗಲೀಕರಣಕ್ಕೆ ಚಾಲನೆ ನೀಡಲಾಗುತ್ತದೆ ಎಂದರು.
ಚಳ್ಳಕೆರೆ ಟೋಲ್‌ಗೇಟ್‌ನಿಂದ ಪ್ರವಾಸಿಮಂದಿರದವರೆಗೆ ರಸ್ತೆಯ ಎಡ ಮತ್ತು ಬಲಭಾಗದಲ್ಲಿ ಬಹುತೇಕ ಸರ್ಕಾರಿ ಕಚೇರಿಗಳು ಮತ್ತು ಸರ್ಕಾರಿ ನಿವೇಶನಗಳಿವೆ. ಹಾಗಾಗಿ ಈ ಜಾಗದಲ್ಲಿ ಪರಿಹಾರದ ಪ್ರಶ್ನೆ ಬರುವುದಿಲ್ಲ. ಆದರೆ ಪ್ರವಾಸಿ ಮಂದಿರದಿಂದ ಗಾಂಧಿ ವೃತ್ತದವರೆಗೆ ಎಡ ಭಾಗದಲ್ಲಿ 30 ಕಟ್ಟಡಗಳು, ಬಲ ಭಾಗದಲ್ಲಿ 24 ಕಟ್ಟಡಗಳು ಮತ್ತು ವಾಣಿಜ್ಯ ಸಂಕೀರ್ಣಗಳಿವೆ. ಇಲ್ಲೂ ಸಹ ರಸ್ತೆ ಮಧ್ಯದಿಂದ 15 ಮೀಟರ್ ವರೆಗೆ ಯಾವುದೇ ಪರಿಹಾರ ನೀಡುವ ಪ್ರಶ್ನೆಯೇ ಎದುರಾಗದು. ಏಕೆಂದರೆ ಈ ರಸ್ತೆ ಮೊದಲು ರಾಷ್ಟ್ರೀಯ ಹೆದ್ದಾರಿಯಾಗಿದ್ದು, ವಾಹನಗಳು ಸಂಚರಿಸುತ್ತಿದ್ದವು. 15 ಮೀಟರ್ ನಂತರದ ಆಸ್ತಿಗಳಿಗೆ ಸೂಕ್ತ ಪರಿಹಾರ ನೀಡಲಾಗುತ್ತದೆ. ರಸ್ತೆ ಅಗಲೀಕರಣಕ್ಕೂ ಮುನ್ನ ಸಾರ್ವಜನಿಕರ ಸಭೆ ಕರೆದು ಚರ್ಚಿಸುವುದಾಗಿ ತಿಳಿಸಿದರು.
ಚಳ್ಳಕೆರೆ ಟೋಲ್‌ಗೇಟ್‌ನಿಂದ ರಸ್ತೆ ಅಗಲೀಕರಣವಾಗಲಿದ್ದು, ಸರ್ಕಾರಿ ವಿಜ್ಞಾನ ಕಾಲೇಜು, ಎಲ್‌ಐಸಿ ಕಚೇರಿ, ಮೆಜೆಸ್ಟಿಕ್ ಸರ್ಕಲ್, ಪ್ರವಾಸಿಮಂದಿರ ತನಕ ಎಡ ಮತ್ತು ಬಲ ಭಾಗದಲ್ಲಿನ ಆಸ್ತಿಗಳ ಪೂರ್ಣ ಮಾಹಿತಿ ನೀಡುವಂತೆ ಸೂಚಿಸಿದರು. ಗಾಂಧಿ ವೃತ್ತ ಮತ್ತು ಪ್ರವಾಸಿಮಂದಿರದವರೆಗಿನ ರಸ್ತೆ ಅಗಲೀಕರಣ ಮಾಡಲು ಉದ್ದೇಶದಿಂದ ಈಗಾಗಲೇ ಮಾರ್ಕಿಂಗ್ ಮಾಡಲಾಗಿದೆ. ಮೊದಲ ಹಂತದಲ್ಲಿ ಪ್ರವಾಸಿ ಮಂದಿರದವರೆಗಿನ ಕಾಮಗಾರಿ ಮುಗಿಸಿ ನಂತರ ಗಾಂಧಿ ವೃತ್ತದವರೆಗಿನ ಬಿ.ಡಿ. ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಂತೇಹೊಂಡ ಸಮೀಪ ಹಾಗೂ ಗಾಂಧಿ ವೃತ್ತದಲ್ಲಿನ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲು 3.80 ಕೋಟಿ ರೂ. ಬಿಡುಗಡೆಯಾಗಿದೆ. ಕಾಮಗಾರಿ ನಿರ್ವಹಿಸಲು ಟೆಂಡರ್ ಕರೆಯಲಾಗುತ್ತದೆ. ವಾಣಿಜ್ಯ ಸಂಕೀರ್ಣದ ಪ್ಲಾನ್, ಅಂದಾಜು ಪಟ್ಟಿ ತಯಾರಿಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಸಿ. ಚಂದ್ರಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರ ಷಣ್ಮುಖಪ್ಪ, ಸಹಾಯಕ ಅಭಿಯಂತರ ಕೃಷ್ಣಮೂರ್ತಿ, ಕಂದಾಯ ಇಲಾಖೆ ಅಧಿಕಾರಿ ವಾಸಿಂ, ಕಂದಾಯ ನಿರೀಕ್ಷಕ ಜಬೀವುಲ್ಲಾ ಮತ್ತಿತರರು ಹಾಜರಿದ್ದರು.
ನಗರೋತ್ಥಾನ ಯೋಜನೆಯಡಿ ರಸ್ತೆ ದುರಸ್ತಿ
ಗಾಂಧಿ ವೃತ್ತದಿಂದ ಖಾಸಗಿ ಬಸ್ ನಿಲ್ದಾಣ ಮಾರ್ಗದ ರಸ್ತೆ ಅತ್ಯಂತ ಕಿರಿದಾಗಿದ್ದು ವಾಹನಗಳ ದಟ್ಟಣೆ ಹೆಚ್ಚಿದೆ. ಈ ರಸ್ತೆಯನ್ನು ಗಾಂಧಿ ವೃತ್ತದಿಂದ ರಾಷ್ಟ್ರೀಯ ಹೆದ್ದಾರಿ ತನಕ ಅಗಲೀಕರಣ ಮಾಡಬೇಕಿದೆ. ಈ ವಿಚಾರದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿ ತೀರ್ಮಾನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ನಗರದಲ್ಲಿ ರಸ್ತೆಗಳು ತುಂಬಾ ಹಾಳಾಗಿವೆ. ನಗರೋತ್ಥಾನ ಯೋಜನೆಯ ಅನುದಾನವನ್ನು ಬಳಸಿಕೊಂಡು ರಸ್ತೆಗಳನ್ನು ದುರಸ್ತಿ ಮಾಡಿಸಲಾಗುವುದು. ಎಸ್ಸಿಪಿ, ಟಿಎಸ್ಪಿ ಅನುದಾನ ಸೇರಿದಂತೆ ಹೆಚ್ಚಿನ ಹಣವನ್ನು ರಾಜ್ಯ ಸರ್ಕಾರ ನೀಡುವ ಸಾಧ್ಯತೆ ಇದೆ ಎಂದರು.