Advertisement

ಚರಂಡಿ ಒತ್ತುವರಿ ತೆರವಿಗೆ ಶೀಘ್ರ ಕ್ರಮ: ಮೇಯರ್‌ ಭಾಸ್ಕರ್‌

11:28 AM May 31, 2018 | Team Udayavani |

ಮಹಾಮಳೆಯ ಅವಾಂತರಕ್ಕೆ ಇಡೀ ನಗರವೇ ಬೆಚ್ಚಿ ಬಿದ್ದಿದೆ. ಸಂಕಷ್ಟ ಎದುರಿಸಿದ ಪ್ರತಿಯೊಬ್ಬರೂ ಅವಾಂತರಕ್ಕೆ ಮಹಾನಗರ ಪಾಲಿಕೆಯೇ ಕಾರಣ ಎಂದು ಬೊಟ್ಟು ಮಾಡಿ ಹೇಳಿದರೂ ಪಾಲಿಕೆಯ ಅಧಿಕಾರಿಗಳು ಹಾಗೂ ಮೇಯರ್‌ ಸೇರಿದಂತೆ ಎಲ್ಲರೂ ಶಕ್ತಿ ಮೀರಿ ಶ್ರಮಿಸಿದ್ದಾಗಿ ಹೇಳುತ್ತಿದ್ದಾರೆ. ಈ ಕುರಿತು ಮೇಯರ್‌ ಭಾಸ್ಕರ್‌ ಕೆ. ಅವರೊಂದಿಗೆ ನಡೆಸಿದ ಕಿರು ಸಂದರ್ಶನವಿದು. 

Advertisement

ಮಳೆಯ ಅವಾಂತರಗಳಿಗೆ ಮಹಾನಗರ ಪಾಲಿಕೆ ಕಾಲುವೆ ಹಾಗೂ ತೋಡುಗಳ ಹೂಳೆತ್ತದಿರುವುದೇ ಕಾರಣ ಎಂದು ಎಲ್ಲರೂ ಬೊಟ್ಟು ಮಾಡಿ ತೋರಿಸುತ್ತಿದ್ದಾರಲ್ಲಾ?
ಇದು ಸರಿಯಲ್ಲ. ಬಹುತೇಕ ಎಲ್ಲ ತೋಡು ಹಾಗೂ ರಾಜ ಕಾಲುವೆಗಳ ಹೂಳೆತ್ತುವ ಕಾರ್ಯಗಳನ್ನು ಮಾಡಲಾಗಿದೆ. ಹಾಗಿದ್ದರೂ, ಏಕಾಏಕಿ ಅವಿರತವಾಗಿ ಮಳೆಯಾದ ಕಾರಣ ಕೃತಕ ನೆರೆಯಾಗಿ ಸಮಸ್ಯೆಗಳಾಗಿವೆ. ಜನರು ಸಮಸ್ಯೆಯಲ್ಲಿದ್ದಾಗ ನಗರ ಪಾಲಿಕೆ ಕೈಕಟ್ಟಿ ಕುಳಿತಿದೆ ಎನ್ನುವುದು ತಪ್ಪು. ನಾನೂ ಸೇರಿದಂತೆ ನಗರ ಪಾಲಿಕೆಯ ಸದಸ್ಯರು, ಆಯುಕ್ತರು, ಸದಸ್ಯರು ಹಾಗೂ ಎಲ್ಲ ಅಧಿಕಾರಿಗಳು ಹೊತ್ತಿನ ಪರಿವೆಯೇ ಇಲ್ಲದೆ ರಕ್ಷಣಾ ಕಾರ್ಯಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಮೇಯರ್‌ ಜನರ ಬಳಿ ಹೋಗಿಲ್ಲ ಎಂಬ ದೂರಿದೆ. ಏನೆನ್ನುತ್ತೀರಿ?
ಪ್ರತಿ ವಾರ್ಡ್‌ಗೂ ಹೋಗಿ ಅಲ್ಲಿನ ಜನರ ಸಂಕಷ್ಟ ಆಲಿಸುವುದು ಕಷ್ಟ. ಮಳೆ ವಿಪರೀತವಾಗಿ ಸುರಿದು ಅವಾಂತರಗಳು ಸೃಷ್ಟಿಯಾಗುತ್ತದೆ ಎಂಬ ಅರಿವಾದಾಗ ಸಾಧ್ಯವಾದಷ್ಟು ಕಡೆಗಳಿಗೆಲ್ಲ ಹೋಗಿ ಸೂಕ್ತ ಸಲಹೆ, ಸೂಚನೆಗಳನ್ನು ನೀಡಿ ರಕ್ಷಣಾ ಕಾರ್ಯಗಳು ಸುಸೂತ್ರವಾಗಿ ನಡೆಯುವಂತೆ ನೋಡಿಕೊಂಡಿದ್ದೇನೆ. ಮಂಗಳವಾರ ಬೆಳಗ್ಗೆ 10 ಗಂಟೆಗೆ ಮಳೆ ಬಿರುಸುಗೊಳ್ಳಲು ಪ್ರಾರಂಭಗೊಂಡ ಕ್ಷಣದಿಂದ ಅಲ್ಲಲ್ಲಿ ಸುತ್ತಾಡಿ, ಬಳಿಕ ನಡುರಾತ್ರಿ ಸುಮಾರು 1 ಗಂಟೆಯ ವೇಳೆಗಷ್ಟೇ ಮನೆಗೆ ಹೋದೆ. 

 ಮುಂದೆ ಇಂತಹ ಸಮಸ್ಯೆ ಎದುರಾಗದಂತೆ ಏನು ಸಿದ್ಧತೆ ಮಾಡುತ್ತೀರಿ?
ಸಮಸ್ಯೆ ಉಂಟಾಗಬಹುದಾದ ಎಲ್ಲಾ ಸ್ಥಳಗಳಿಗೂ ಪಾಲಿಕೆಯ ಇಂಜಿನಿಯರ್‌ಗಳನ್ನು ಹಾಗೂ ನಗರ ಯೋಜನಾ ಅಧಿಕಾರಿಗಳನ್ನು ಕಳುಹಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಎಲ್ಲರ ಸಲಹೆ ಸೂಚನೆಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿ ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಅಕ್ರಮ ಕಟ್ಟಡಗಳ ಬಗ್ಗೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತೀರಿ?
ಸದ್ಯದಲ್ಲಿಯೇ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಸಭೆ ನಡೆಸಲಾಗುವುದು. ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವಾಗ ಕಟ್ಟುನಿಟ್ಟಾಗಿ ಮಾರ್ಗಸೂಚಿಗಳನ್ನು ಅಳವಡಿಸುವಂತೆ ಮಾಡಲಾಗುವುದು ಹಾಗೂ ಅಕ್ರಮ ಕಟ್ಟಡಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. 

Advertisement
Advertisement

Udayavani is now on Telegram. Click here to join our channel and stay updated with the latest news.

Next