Advertisement
ಹೆಣ್ಣುಮಕ್ಕಳ ಡ್ರೆಸ್ಸಿಂಗ್, ಉದ್ಯೋಗ ಆಯ್ಕೆ, ಸ್ವತಂತ್ರ ಬದುಕಿನ ಕುರಿತಾಗಿ ಅಸಮಾನತೆ ಎಂಬ ಪದ ಬಳಕೆಯಾದಾಗ ಎಲ್ಲ ಹೆಣ್ಣುಮಕ್ಕಳಂತೆ ನನಗೂ ಅಸಮಾಧಾನವಾಗುತ್ತದೆ. ದೇಶದೆಲ್ಲೆಡೆ ವಿವಾದ ಸೃಷ್ಟಿಸಿರುವ ಶಬರಿಮಲೆಗೆ ಮಹಿಳೆಯ ಪ್ರವೇಶ ನಿಷೇಧ ಮಾತ್ರ ಅಸಮಾನತೆ ಎಂದು ಒಮ್ಮೆಯೂ ಅನಿಸಿಲ್ಲ. ಮಹಿಳೆಗೆ ಸನ್ನಿಧಿ ಪ್ರವೇಶ ನಿಷೇಧಿಸುವುದು ತಪ್ಪು , ಇದು ಮಹಿಳಾ ವಿರೋಧಿ ಕ್ರಮ; ಎಂದೂ ಅನಿಸಿಲ್ಲ. ಶಬರಿಮಲೆ ಸನ್ನಿಧಾನದ ಕುರಿತು ತಿಳಿದಿರುವ ಯಾವ ಹೆಣ್ಣಿಗೂ ಇದೊಂದು ಅಸಮಾನತೆ ಎಂದೆನಿಸಲು ಸಾಧ್ಯವಿಲ್ಲ.
Related Articles
Advertisement
ಗಮನಿಸಲೇಬೇಕಾದ ವಿಚಾರವೇನೆಂದರೆ, ಯಾರೂ ಮಹಿಳೆಯನ್ನು ಮೈಲಿಗೆ ಎಂದಿಲ್ಲ. ಆ ರೀತಿಯಾಗಿ ಯೋಚಿಸಿರುವುದು, ಯೋಚಿಸಿದವರ ತಪ್ಪು. ರಕ್ತ ಎಂಬುದು ಮೈಲಿಗೆ ಎಂಬುದನ್ನು ಭಾರತದ ಸಂಸ್ಕೃತಿಯಲ್ಲಿ ಬಹುತೇಕ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಹೆಣ್ಣಿನ ದೇಹದಲ್ಲಾಗುವ ಸಹಜ ಪ್ರಕ್ರಿಯೆಯ ಭಾಗವಾದ ಋತುಸ್ರಾವವನ್ನು ಮೈಲಿಗೆ ಎಂದು ಪರಗಣಿಸಲಾಗುತ್ತಿದೆಯೇ ಹೊರತು ಹೆಣ್ಣನ್ನಲ್ಲ. ಪುರಾಣ ಕಥೆಗಳಲ್ಲಿ ಋಷಿಗಳ ಯಾಗ, ಯಜ್ಞವನ್ನು ಕೆಡಿಸಲು ರಾಕ್ಷಸರು ರಕ್ತ-ಮಾಂಸ ತಂದು ಸುರಿಯುವುದರ ಕುರಿತು ಓದಿರುತ್ತೇವೆ. ರಾಮಾಯಣದಲ್ಲಿಯೂ ಋಷಿಗಳ ಯಾಗ, ಯಜ್ಞವನ್ನು ಕೆಡಿಸಲು ಮಾರೀಚ ಮತ್ತು ಸುಬಾಹು ರಕ್ತಮಾಂಸ ತಂದು ಸುರಿಯುತ್ತಿದ್ದರು. ಅವರನ್ನು ರಾಮ ವಧಿಸಿದ ಎಂಬುದನ್ನು ಓದಿದ್ದೇವೆ. ರಕ್ತ ಎಂಬುದು ಹಿಂದಿನಿಂದಲೂ ಮೈಲಿಗೆಯೇ. ಅದನ್ನು ಅಪವಿತ್ರ ಎಂದೇ ಪರಿಗಣಿಸಲಾಗುತ್ತದೆ. ಹಾಗಿರುವಾಗ ಮುಟ್ಟು ಎಂದರೆ ಮೈಲಿಗೆ ಎಂಬುದನ್ನು ಒಪ್ಪಿಕೊಳ್ಳಲೇಬೇಕಲ್ಲವೆ.
ಮುಟ್ಟಿನ ದಿನಗಳಲ್ಲಿ ಸಾಮಾನ್ಯವಾಗಿಯೇ ಎಲ್ಲ ದೇವಸ್ಥಾನ ಪ್ರವೇಶಕ್ಕೆ ನಿಷೇಧವಿದೆ. ಶಬರಿಮಲೆಗೆ ವಿಶೇಷವಾಗಿ 41 ದಿನಗಳ ವ್ರತವಿರುವುದರಿಂದ ಸನ್ನಿಧಿಗೆ ಹೋಗುವುದು ಸಾಧ್ಯವಾಗುವುದಿಲ್ಲ. ಇತ್ತೀಚೆಗೆ ಮಲಯಾಳ ದೃಶ್ಯಮಾಧ್ಯಮದಲ್ಲಿ ಶಬರಿಮಲೆ ವಿವಾದ ಕುರಿತು ನಡೆದ ಚರ್ಚೆಯ ಸಣ್ಣದೊಂದು ತುಣುಕು ವೈರಲ್ ಆಯಿತು. ಶಬರಿಮಲೆಗೆ ಮಹಿಳಾ ಪ್ರವೇಶ ಬೇಕು ಎನ್ನುವಾತ ಆ ನಿಯಮ ಹೇಗೆ ಜಾರಿ ಮಾಡಬಹುದೆಂದು ವಿವರಿಸುತ್ತಿದ್ದ. “”ಈಗಾಗಲೇ 18 ಮೆಟ್ಟಿಲುಗಳಿವೆ. ಈ ಮೂಲಕ ಪುರುಷರು ಪ್ರವೇಶಿಸುತ್ತಾರೆ, ಇನ್ನು ಮಹಿಳೆಯರಿಗಾಗಿ ಪ್ರತ್ಯೇಕ ಮೆಟ್ಟಿಲುಗಳನ್ನು ಮಾಡಿ ಆ ಮೂಲಕ ಅವರಿಗೆ ಹೋಗಲು ಅನುಕೂಲ ಮಾಡಿದರಾಯಿತು” ಎಂಬುದು ಆತನ ಮಾತಿನ ತಾತ್ಪರ್ಯ. ಮಹಿಳಾ ಪ್ರವೇಶ ವಿರೋಧಿಯಾಗಿ ಮಾತನಾಡುತ್ತಿದ್ದ ವ್ಯಕ್ತಿ ಥಟ್ಟನೆ, “”ಹಾಗೇ ಅಯ್ಯಪ್ಪನ ಇನ್ನೊಂದು ವಿಗ್ರಹವನ್ನು ನಿರ್ಮಿಸಿ, ಸಾರ್ವಜನಿಕ ಪ್ರದರ್ಶನಕ್ಕಿಟ್ಟರೆ ಸಮಸ್ಯೆ ಮುಗಿಯಿತಲ್ಲ” ಎಂದು ಟಾಂಗ್ ನೀಡಿದ. ಈತನ ವ್ಯಂಗ್ಯಕ್ಕೆ ಬಹಳಷ್ಟು ಪ್ರಶಂಸೆ ವ್ಯಕ್ತವಾಯಿತು. ಕಾರಣ, ಆತ ಹೇಳಿದ ಮಾತಿನಲ್ಲಿ ವಾಸ್ತವವಿತ್ತು. ಆಧುನಿಕತೆ ಆವರಿಸಿದಂತೆಲ್ಲ ಮನುಷ್ಯ ಸಂಪ್ರದಾಯಗಳನ್ನು , ನಿಯಮಗಳನ್ನು ತನಗೆ ಅನುಕೂಲವಾಗುವಂತೆ ಬದಲಾಯಿಸಿಕೊಂಡೇ ಬಂದಿದ್ದಾನೆ. ಇಂತಹ ದೊಡ್ಡ ಮಟ್ಟಿನ ಬದಲಾವಣೆ ನೈಜ್ಯತೆಗೂ, ಸಂಪ್ರದಾಯ-ನಂಬಿಕೆಗಳ ಮೂಲ ಉದ್ದೇಶಕ್ಕೆ ಕುತ್ತು ತರುವಂತಾದರೆ ಅದು ತಪ್ಪಲ್ಲವೇ? ಅಂತಹ ಬದಲಾವಣೆಯ ಅಗತ್ಯವಿದೆಯೇ? ಇದು ಸಂಸ್ಕೃತಿ, ಸಂಪ್ರದಾಯ ಅಪಾಯದಲ್ಲಿದೆ ಎಂಬ ಎಚ್ಚರಿಕೆಯ ಕರೆಗಂಟೆಯಲ್ಲವೆ?
ಶಬರಿಮಲೆಯ ವಿಶೇಷತೆ ಇರುವುದೇ 41 ದಿನಗಳ ವ್ರತದಲ್ಲಿ. ಈ ವ್ರತವನ್ನು ಮಹಿಳೆ ಪಾಲಿಸುವುದು ಸಾಧ್ಯವಿಲ್ಲ ಎಂದಲ್ಲವೇ ಪೂರ್ವಿಕರು ಮಹಿಳೆಯರ ಪ್ರವೇಶ ನಿಷೇಧಿಸಿ ಬಾಲಕಿಯರಿಗೂ, ವೃದ್ಧೆಯರಿಗಷ್ಟೇ ಪ್ರವೇಶ ಅನುಮತಿಸಿದ್ದು. ಇದೇನನ್ನು ಅರಿಯದೆ, ಅಥವಾ ಅರಿತೂ ದುರುದ್ದೇಶದಿಂದ ಸ್ತ್ರೀ ಸಮಾನತೆ ಎಂದು ಬೊಬ್ಬಿಡುವವರ ಕುರಿತು ಏನೆನನ್ನಬೇಕು? ಅಸಂಖ್ಯಾತ ಭಕ್ತರ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಿ, ಪುರಾತನ ಸನ್ನಿಧಿಯ ನಿಯಮವನ್ನು ಮುರಿದು, ಹಕ್ಕಿನ ಹೆಸರಿನಲ್ಲಿ ಸಂಪ್ರದಾಯಗಳನ್ನು ಉಲ್ಲಂ ಸಿ ವಿಘ್ನ ಸಂತೋಷದಿಂದ ಸನ್ನಿಧಿ ಪ್ರವೇಶಿಸಲು ಹೊರಟ ಮಹಿಳೆಯರು ಗಳಿಸಿದ್ದಾದರೂ ಏನನ್ನು? ಸಾಮಾನ್ಯವಾಗಿ ಸಮಾನತೆಯ ವಿಚಾರ ಬಂದಾಗ ಮಹಿಳೆಯರು ಒಂದಾಗುತ್ತಾರೆ. ಆದರೆ, ಶಬರಿಮಲೆ ವಿಚಾರದಲ್ಲಿ ಹಾಗಾಗಲಿಲ್ಲ. ಇದರಿಂದ ಹೊರಬರುವ ಸ್ಪಷ್ಟ ಸಂದೇಶವೇನೆಂದರೆ, ಬಹುಪಾಲು ಸ್ತ್ರೀಯರು ಶಬರಿಮಲೆಗೆ ಸ್ತ್ರೀಪ್ರವೇಶ ನಿಷೇಧವನ್ನು ಅಸಮಾನತೆ ಎಂದು ಪರಿಗಣಿಸಿಯೇ ಇಲ್ಲ.
ದಿವ್ಯಾ ಪೆರ್ಲ