Advertisement
“ಪೊಲೀಸ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ’ದಲ್ಲಿ ಬಂಧನಕ್ಕೊಳಪಟ್ಟ ಸೋಮಪ್ಪ ಮೇಲಿನಮನಿ ಬಿಎಂಟಿಸಿ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಎಂಬ ಅಂಶ ಬೆಳಕಿಗೆ ಬಂದ ಬೆನ್ನಲ್ಲೇ ನಿಗಮವು ಆಂತರಿಕ ತನಿಖೆ ನಡೆಸಿದ್ದು, ಜತೆಗೆ ಸಿಸಿಬಿ ನೀಡುವ ವರದಿಯನ್ನೂ ಎದುರು ನೋಡುತ್ತಿದೆ. ಆ ವರದಿಯ ಫಲಿತಾಂಶಗಳನ್ನು ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲು ಬಿಎಂಟಿಸಿ ಉದ್ದೇಶಿಸಿದೆ. ಹಾಗಾಗಿ, ಹೊಸದಾಗಿ ನೇಮಕಗೊಂಡವರ ಭವಿಷ್ಯ ಡೋಲಾಯಮಾನ ಆಗಿದೆ.
Related Articles
Advertisement
ಅದೇ ರೀತಿ, ಬಂಧನಕ್ಕೊಳಗಾದ ಆರೋಪಿ ಸೋಮಪ್ಪ ಮೇಲಿನಮನಿ ನೇಮಕಾತಿ ವೇಳೆ ಸಲ್ಲಿಸಿದ ದಾಖಲಾತಿಗಳನ್ನೂ ಪರಿಶೀಲನೆಗೊಳಪಡಿಸಿದ್ದು, ಆತ ಪಿಯುಸಿಯಲ್ಲಿ 440ಕ್ಕೂ ಹೆಚ್ಚು ಅಂಕ ಪಡೆದಿದ್ದ ಎಂದು ನಿಗಮದ ಮೂಲಗಳು ತಿಳಿಸಿವೆ. ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಅತ್ಯಂತ ಕಡಿಮೆ ಅಂಕದಲ್ಲಿ ನೌಕರಿಯಿಂದ ವಂಚಿತರಾದ ಅಭ್ಯರ್ಥಿಗಳಿಂದ ಪರೀಕ್ಷಾ ಪ್ರಕ್ರಿಯೆ ವಿರುದ್ಧ ಕೂಗು ಕೇಳಿಬರುತ್ತಿದೆ.
ಸಾಧ್ಯವಾದರೆ ಇದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರುವ ಎಚ್ಚರಿಕೆಯನ್ನೂ ಅವರು ನೀಡುತ್ತಿದ್ದಾರೆ. ಆದರೆ, ಪ್ರಕರಣದ ವರದಿಯನ್ನು ಬಿಎಂಟಿಸಿಗೆ ಸಲ್ಲಿಸಿದ ನಂತರ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವುದಾಗಿ ಹೆಸರು ಹೇಳಲಿಚ್ಛಿಸದ ಅಭ್ಯರ್ಥಿಗಳು ಸ್ಪಷ್ಟಪಡಿಸಿದ್ದಾರೆ. ಮತ್ತೂಂದೆಡೆ ಹೊಸದಾಗಿ ನೌಕರಿ ಸೇರಿರುವ ಅಭ್ಯರ್ಥಿಗಳಿಗೂ ಈ ಪ್ರಕರಣ ಅಭದ್ರತೆಯ ಆತಂಕ ಸೃಷ್ಟಿಸಿದೆ.
ಆರೋಪಿ ಅಮಾನತು: ಈ ಮಧ್ಯೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಡಿ ಬಂಧನಕ್ಕೊಳಗಾದ ಬಿಎಂಟಿಸಿ ಚಾಲಕ ಸೋಮಪ್ಪ ಮೇಲಿನಮನಿ ಅಮಾನತುಗೊಂಡಿದ್ದಾರೆ ಎಂದು ಬಿಎಂಟಿಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 48 ಗಂಟೆಗಳಿಗಿಂತ ಹೆಚ್ಚು ಅವಧಿ ನಿಗಮದ ಯಾವುದೇ ನೌಕರ ಜೈಲಿನಲ್ಲಿದ್ದರೆ, ಅಟೋಮೆಟಿಕ್ ಆಗಿ ಆತ ಅಮಾನತುಗೊಳ್ಳುತ್ತಾನೆ. ಸೋಮಪ್ಪ ವಿಚಾರದಲ್ಲೂ ಈ ನಿಯಮ ಅನ್ವಯ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಇಲಾಖಾ ತನಿಖೆ ನಡೆಸುವುದರ ಜತೆಗೆ ಸಿಸಿಬಿ ಪೊಲೀಸರಿಂದಲೂ ನಮಗೆ ತನಿಖಾ ವರದಿ ಸಲ್ಲಿಕೆ ಆಗಲಿದೆ. ಅದರಿಂದ ಯಾವ ಮಟ್ಟದ ಅಕ್ರಮ ನಡೆದಿದೆ ಎಂಬುದು ತಿಳಿಯಲಿದ್ದು, ಅದನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. -ಅನುಪಮ್ ಅಗರವಾಲ್, ನಿರ್ದೇಶಕರು, ಬಿಎಂಟಿಸಿ. * ವಿಜಯಕುಮಾರ ಚಂದರಗಿ