ಬೆಂಗಳೂರು: ರಾತ್ರಿ ತಡವಾಗಿ ಮನೆಗೆ ಬರುತ್ತಿದ್ದುದನ್ನು ಪ್ರಶ್ನಿಸಿದ ಪತ್ನಿಯನ್ನು ಪತಿಯೇ ಕತ್ತು ಹಿಸುಕಿ ಹತ್ಯೆಗೈದಿರುವ ಘಟನೆ ಮುನಿಸ್ವಾಮಪ್ಪ ಲೇಔಟ್‌ನಲ್ಲಿ ಭಾನುವಾರ ನಡೆದಿದೆ. ಮುನಿಸ್ವಾಮಪ್ಪ ಲೇಔಟ್ ನಿವಾಸಿ ನಳಿನಾ (24) ಮೃತಪಟ್ಟವರು. ಆಕೆಯ ಪತಿ ಪ್ರತಾಪ್‌ನನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ಉಬರ್ ಕ್ಯಾಬ್ ಚಾಲಕನಾಗಿದ್ದ ಪ್ರತಾಪ್ ಮತ್ತು ನಳಿನಾ ಎರಡು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಕ್ಯಾಬ್ ಚಾಲನೆ ಮಾಡುತ್ತಿದ್ದ ಪ್ರತಾಪ್ ಮನೆಗೆ ನಿತ್ಯ ತಡವಾಗಿ ಬರ್ತುತಿದ್ದ. ಇದೇ ವಿಚಾರವಾಗಿ ಪತ್ನಿ ನಳಿನಾ ಪ್ರಶ್ನಿಸಿ ಗಲಾಟೆ ಮಾಡುತ್ತಿದ್ದಳು. ಶನಿವಾರ ತಡರಾತ್ರಿ ಕೂಡ ಇಬ್ಬರ ನಡುವೆ ಗಲಾಟೆಯಾಗಿದ್ದು, ಕೋಪಗೊಂಡ ಪ್ರತಾಪ್ ಪತ್ನಿಯ ಕತ್ತು ಹಿಸುಕಿ ಹತ್ಯೆಗೈದಿದ್ದಾನೆ. ಈ ಸಂಬಂಧ ನಳಿನಾ ಪೋಷಕರು ದಾಖಲಿಸಿದ ಪ್ರಕರಣದ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರೀತಿಸಿ ಮದುವೆಯಾಗಿದ್ದ ಜೋಡಿ: ರಾಮನಗರದ ಮಾಗಡಿ ತಾಲೂಕಿನ ಕೂದೂರಿನವರಾದ ನಳಿನಾ ಕಾಲೇಜಿನಲ್ಲಿ ಓದುವಾಗ ತೊಂಡಹಳ್ಳಿ ಗ್ರಾಮದ ಪ್ರತಾಪ್ ಪರಿಚಯವಾಗಿತ್ತು. ನಂತರ ಇಬ್ಬರ ನಡುವೆ ಪ್ರೇಮಾಂಕುರವಾಗಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಆದರೆ, ಇದಕ್ಕೆ ನಳಿನಾರ ಪೋಷಕರು ವಿರೋಧ ವ್ಯಕ್ತಪಡಿಸಿ, ಆಕೆಯ ವಿದ್ಯಾಭ್ಯಾಸ ಮೊಟಕುಗೊಳಿಸಲು ತೀರ್ಮಾನಿಸಿದ್ದರು.
ಇದರಿಂದ ನಿರಾಸೆಗೊಂಡ ಇಬ್ಬರು ಮನೆ ತೊರೆದು 2015ರಲ್ಲಿ ದೇವಸ್ಥಾನವೊಂದಲ್ಲಿ ವಿವಾಹವಾಗಿದ್ದರು. ದಂಪತಿಗೆ ಒಂದು ವರ್ಷದ ಗಂಡು ಮಗುವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯಲಹಂಕದಲ್ಲಿ ಮನೆ ಮಾಡಿದ್ದ ಪ್ರತಾಪ್ ಆರಂಭದಲ್ಲಿ ಸುಖವಾಗಿಯೇ ಜೀವನ ನಡೆಸುತ್ತಿದ್ದ. ಅಲ್ಲದೆ, ಮಗುವಾದ ಬಳಿಕ ನಳಿನಾರ ಪೋಷಕರು ಅಳಿಯನ್ನು ಒಪ್ಪಿಕೊಂಡು ಮನೆಗೆ ಕರೆದು ಪುತ್ರಿಯನ್ನು ಸುಖವಾಗಿ ನೋಡಿಕೊಳ್ಳುವಂತೆ ಹೇಳಿದ್ದರು.
ಈ ನಡುವೆ ಪ್ರತಾಪ್ ತನ್ನ ಪತ್ನಿ ಜತೆ ಮಾವನ ಮನೆಯಲ್ಲೇ ಕೆಲ ತಿಂಗಳು ಉಳಿದುಕೊಂಡಿದ್ದ. ಕೆಲಸ ಮುಗಿಸಿ ತಡರಾತ್ರಿ ಮನೆಗೆ ಬರುತ್ತಿದ್ದ. ಈ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆ ಮಾವ ಯಲಹಂಕದ ಮುನಿಸ್ವಾಮಪ್ಪ ಲೇಔಟ್‌ನಲ್ಲಿ ಬಾಡಿಗೆ ಮನೆ ಮಾಡಿಕೊಟ್ಟಿದ್ದರು. ಆದರೂ ಪ್ರತಾಪ್‌ನ ನಡವಳಿಕೆಯಲ್ಲಿ ಬದಲಾವಣೆಯಾಗಿರಲಿಲ್ಲ. ನಿತ್ಯ ತಡವಾಗಿ ಮನೆಗೆ ಬರುತ್ತಿದ್ದ. ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳವಾಗುತ್ತಿತ್ತು.
ಈ ಬಗ್ಗೆ ನಳಿನಾ ತನ್ನ ಪೋಷಕರಿಗೂ ವಿಷಯ ತಿಳಿಸಿದ್ದರಿಂದ ಅವರು ಮಧ್ಯಸ್ಥಿಕೆ ವಹಿಸಿ ಇಬ್ಬರಿಗೂ ಬುದ್ಧಿವಾದ ಹೇಳಿದ್ದರು. ಅಷ್ಟೆಲ್ಲಾ ಆದ ಬಳಿಕವೂ ಪ್ರತಾಪ್ ತನ್ನ ಚಾಳಿ ಮುಂದುವರಿಸಿದ್ದರಿಂದ ದಂಪತಿ ಮಧ್ಯೆ ಜಗಳವಾಗುತ್ತಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.