Advertisement

ಉಡುಪಿ: ಪ್ರತೀ ತಾಲೂಕಲ್ಲೂ ಕ್ವಾರಂಟೈನ್ ನೋಂದಣಿ ಕೇಂದ್ರ

11:45 AM May 11, 2020 | sudhir |

ಉಡುಪಿ: ಜಿಲ್ಲೆಗೆ ಹೊರರಾಜ್ಯದಿಂದ ಬರುವವರನ್ನು ಕ್ವಾರಂಟೈನ್‌ಗೆ ಒಳಪಡಿಸಲು ಎಲ್ಲ ತಾಲೂಕುಗಳಲ್ಲಿಯೂ ಕ್ವಾರಂಟೈನ್‌ ನೋಂದಣಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಬೈಂದೂರು ತಾಲೂಕಿನಲ್ಲಿರುವ ಮಿಲಿಟರಿ ಮೈದಾನ, ಕುಂದಾಪುರ ಕೋಟೇಶ್ವರದ ಕಾಳಾವರ ವರದರಾಜ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬ್ರಹ್ಮಾವರ ಬೋರ್ಡ್‌ ಹೈಸ್ಕೂಲು, ಉಡುಪಿ ಬೋರ್ಡ್‌ ಹೈಸ್ಕೂಲು, ಕಾರ್ಕಳದ ಬಂಡೀಮಠ ಮೈದಾನ, ಕಾಪು ಪುರಸಭೆ ವಠಾರ, ಹೆಬ್ರಿ ಸರಕಾರಿ ಪ.ಪೂ. ಕಾಲೇಜುಗಳಲ್ಲಿ ನೋಂದಣಿ ಕೇಂದ್ರವನ್ನು ಸ್ಥಾಪಿಸಲಾಗಿದೆ.

Advertisement

6,000 ಮಂದಿ ನೋಂದಣಿ
ಹೊರರಾಜ್ಯದಿಂದ ಬರಲು ಪ್ರಥಮ ಹಂತದಲ್ಲಿ ಸುಮಾರು 6,000 ಮಂದಿ ನೋಂದಾಯಿಸಿಕೊಂಡಿದ್ದಾರೆ. ಮೊದಲಿಗೆ ಅವರನ್ನು ಜಿಲ್ಲಾ ಗಡಿಯಲ್ಲಿ ಆರೋಗ್ಯ ತಪಾಸಣೆ ಮಾಡಿ, ಪೊಲೀಸ್‌ ಎಸ್ಕಾರ್ಟ್‌ನೊಂದಿಗೆ ಸಂಬಂಧಪಟ್ಟ ತಾಲೂಕಿನ ಕ್ವಾರಂಟೈನ್‌ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ. ಆರೋಗ್ಯ ಪರೀಕ್ಷೆಯಲ್ಲಿ ರೋಗ ಲಕ್ಷಣ ಕಂಡಲ್ಲಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಹೊಟೇಲ್‌ಗ‌ಳಲ್ಲಿ ಕ್ವಾರಂಟೈನ್‌ ಆಗಬಯಸುವವರು ವೆಚ್ಚವನ್ನು ತಾವೇ ಭರಿಸಬೇಕು. ಜಿಲ್ಲಾಡಳಿತ ವ್ಯವಸ್ಥೆ ಮಾಡುವ ಕೇಂದ್ರಗಳಲ್ಲಿ ಉತ್ತಮ ರೀತಿಯಲ್ಲಿ ಉಚಿತ ಊಟೋಪಚಾರ ಸೌಲಭ್ಯವಿರುತ್ತದೆ.

ವಿದೇಶದಿಂದ ಬರುವವರಿಗಾಗಿ ಸಿಂಗಲ್‌ ರೂಂಗಳಲ್ಲಿ ಕ್ವಾರಂಟೈನ್‌ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟಾರೆ ವಿದೇಶದಿಂದ ಮತ್ತು ಹೊರರಾಜ್ಯದಿಂದ ಜಿಲ್ಲೆಗೆ ಸುಮಾರು 20 ಸಾವಿರ ಮಂದಿ ಆಗಮಿಸುವ ನಿರೀಕ್ಷೆಯಿದೆ.

ಜನರ ಆರೋಗ್ಯಕ್ಕೆ ಆದ್ಯತೆ
ಜಿಲ್ಲೆಯಲ್ಲಿ ಲಾಕ್‌ಡೌನ್‌ ನಿರ್ಬಂಧಗಳನ್ನು ಅತ್ಯಂತ ಶಿಸ್ತಿನಿಂದ ಅತ್ಯುತ್ತಮವಾಗಿ ಪಾಲಿಸಲಾಗುತ್ತಿದೆ. ಹೊರಭಾಗದಿಂದ ಬರುವ ವ್ಯಕ್ತಿಗಳಿಂದ ಜಿಲ್ಲೆಯ ಜನರಿಗೆ ಸೋಂಕು ಹರಡದಂತೆ ಜಿಲ್ಲಾಡಳಿದ ಜನರ ಆರೋಗ್ಯಕ್ಕೆ ಆದ್ಯತೆ ನೀಡಿ ಕರ್ತವ್ಯ ನಿರ್ವಹಿಸುತ್ತಿದೆ.
-ಜಿ. ಜಗದೀಶ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next