ಧಾರವಾಡ: ರಾಜ್ಯ ಸರಕಾರದ ಹೊಸ ನಿಯಮದಂತೆ ಮಹಾರಾಷ್ಟ್ರದಿಂದ ಬಂದವರಿಗೆ ಮಾತ್ರ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತಿದ್ದು, ಉಳಿದ ರಾಜ್ಯಗಳಿಂದ ಬರುವವರಿಗೆ ಹೋಮ್ ಕ್ವಾರಂಟೈನ್ ಮಾಡಲಾಗುತ್ತಿದೆ. ಇದರ ಜೊತೆಗೆ ರೋಗಲಕ್ಷಣ ಇರುವವರಿಗೆ ಮಾತ್ರ ಕೊರೊನಾ ಪತ್ತೆ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಡಿಸಿ ದೀಪಾ ಚೋಳನ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ಮಾರ್ಗಸೂಚಿ ಪ್ರಕಾರ ಹೋಮ್ ಕ್ವಾರಂಟೈನ್ ಆದವರ ಮನೆಗೆ ಪೋಸ್ಟರ್ ಅಂಟಿಸಿ, ಅಕ್ಕಪಕ್ಕದ ಮನೆಯವರಿಗೆ ಮಾಹಿತಿ ನೀಡಲಾಗುತ್ತಿದೆ. ಕ್ವಾರಂಟೈನ್ ಆದವರು ಪ್ರತಿದಿನ ಸೆಲ್ಪಿ ತೆಗೆದು ಅಪ್ ಲೋಡ್ ಮಾಡಬೇಕು ಎಂದು ತಿಳಿಸಿದರು.
ಜಿಲ್ಲೆಗೆ ಪ್ರತಿದಿನ ದೆಹಲಿ ಮತ್ತು ಮಹಾರಾಷ್ಟ್ರದ ಒಂದು ರೈಲು ಬರುತ್ತಿದೆ. ಅದರಲ್ಲಿ ಜಿಲ್ಲೆಗೆ ಬರುವವರನ್ನು ಸಾಂಸ್ಥಿಕ ಮತ್ತು ಹೋಮ್ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ. 5 ಹಾಸ್ಟೆಲ್‌ಗಳಲ್ಲಿ 125 ಜನ ಇದ್ದಾರೆ. 9 ಹೋಟೆಲ್‌ಗಳಲ್ಲಿ 45 ಜನ ತಮ್ಮದೇ ವೆಚ್ಚದಲ್ಲಿ ಕ್ವಾರಂಟೈನ್ ಆಗಿದ್ದಾರೆ. ಸಾರ್ವಜನಿಕರು ಹೋಮ್ ಕ್ವಾರಂಟೈನ್‌ಗೆ ಪ್ರಾಮುಖ್ಯತೆ ನೀಡಬೇಕು. ಹೋಮ್ ಕ್ವಾರಂಟೈನ್‌ನಲ್ಲಿ ಇರುವವರನ್ನು ಗ್ರಾಮ ಆರೋಗ್ಯ ಕಾರ್ಯಪಡೆ ಮುಖಾಂತರ ಮತ್ತು ಪಟ್ಟಣ, ನಗರ ಪ್ರದೇಶದಲ್ಲಿ ನಿವಾಸಿಗಳ ಸಂಘ, ಅಧಿಕಾರಿಗಳ ಮೂಲಕ ನಿರಂತರವಾಗಿ ನಿಗಾ ವಹಿಸಲಾಗುತ್ತಿದೆ ಎಂದರು.
ಹೋಮ್ ಕ್ವಾರಂಟೈನ್‌ದಲ್ಲಿರುವವರು ಹೊರಗೆ ಬಂದು ಸುತ್ತಾಡಿದರೆ ಸಾರ್ವಜನಿಕರು 1077 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ಮಾಹಿತಿ ನೀಡಿದವರ ವಿವರ ಗೌಪ್ಯವಾಗಿ ಇಡಲಾಗುವುದು. ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ 5 ಜನರ ಮೇಲೆ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. ಸಾಕಷ್ಟು ಸೂಚನೆ ನೀಡಿದರೂ ಹೋಮ್ ಕ್ವಾರಂಟೈನ್ ಮೊಹರು ಹಾಕಿರುವ ವ್ಯಕ್ತಿಗಳು ಹೊರಗೆ ಸುತ್ತಾಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಬರುವುದು ಮಾಡಿದರೆ ಅದನ್ನು ಗಂಭೀರವಾಗಿ ಪರಿಗಣಿಸಿ, ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.
ಕೆಮ್ಮು, ನೆಗಡಿ, ಜ್ವರ ಬಂದರೆ ಯಾವುದೇ ನಿರ್ಲಕ್ಞ್ಯ ಮಾಡದೇ ಸಾರ್ವಜನಿಕರು ತಕ್ಷಣ ತಮ್ಮ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿ ಆರಂಭಿಸಿರುವ ಫೀವರ್ ಕ್ಲಿನಿಕ್‌ನಲ್ಲಿ ಪರೀಕ್ಷೆಗೆ ಒಳಪಡಿಸಿಕೊಳ್ಳಬೇಕು. ಈಗ ವರದಿಯಾಗುತ್ತಿರುವ ಬಹುತೇಕ ಕೋವಿಡ್ ಪ್ರಕರಣಗಳು ಹೊರರಾಜ್ಯದಿಂದ ಬಂದವರು ಮತ್ತು ಈಗಾಗಲೇ ಕ್ವಾರಂಟೈನ್‌ದಲ್ಲಿದ್ದವರೇ ಆಗಿದ್ದಾರೆ. ಜನರು ಯಾವುದೇ ರೀತಿಯ ಭಯ, ಆತಂಕಕ್ಕೆ ಒಳಗಾಗದೇ, ಸಾಮಾಜಿಕ ಅಂತರ ಪಾಲನೆ ಮತ್ತು ಸದಾ ಮಾಸ್ಕ್ ಧಾರಣೆ ಮಾಡಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಇಲ್ಲಿವರೆಗೆ 21,112 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 121 ಕೊರೊನಾ ವೈರಸ್ ಪ್ರಕರಣಗಳು ಪತ್ತೆ ಆಗಿದ್ದು, ಇದರಲ್ಲಿ 50 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಎರಡು ಸಾವು ಸಂಭವಿಸಿವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಿಮ್ಸ್ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ, ಕಿಮ್ಸ್ ವಿವಿಧ ವಿಭಾಗಗಳ ಮುಖ್ಯಸ್ಥರಾದ ಪ್ರೊ| ಶೈಲೇಂದ್ರ, ಪ್ರೊ| ಈಶ್ವರ ಹಸಬಿ ಇದ್ದರು.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳ ಆಗುತ್ತಿದ್ದು, ಇದರಿಂದ ಜನ ಆತಂಕ ಪಡುವ ಅಗತ್ಯವಿಲ್ಲ. ಈ ಪರಿಸ್ಥಿತಿ ನಿಭಾಯಿಸಲು ಜಿಲ್ಲಾಡಳಿತ ಸಿದ್ಧವಾಗಿದೆ. ಇನ್ನೂ ಸಾರ್ವಜನಿಕರು ಅನಗತ್ಯ ತಿರುಗಾಟ, ಪ್ರವಾಸಗಳನ್ನು ನಿಲ್ಲಿಸಬೇಕು. 10 ವರ್ಷದೊಳಗಿನ ಮಕ್ಕಳು, 60 ವರ್ಷಕ್ಕಿಂತ ಹೆಚ್ಚು ವಯಸ್ಸಾದವರು, ಗರ್ಭಿಣಿಯರು ಮನೆಯಿಂದ ತೀರಾ ಅಗತ್ಯ ಸಂದರ್ಭಗಳನ್ನು ಹೊರತುಪಡಿಸಿ ಹೊರಗೆ ಬರಬಾರದು. ಪ್ರತಿಯೊಬ್ಬರು ತಮ್ಮ ವೈಯಕ್ತಿಕ ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಬೇಕು.
-ದೀಪಾ ಚೋಳನ್, ಜಿಲ್ಲಾಧಿಕಾರಿ