Advertisement
ಬಹುತೇಕ ವಾರ್ಡ್‌ಗಳಲ್ಲಿ ಸ್ವತ್ಛತೆಯ ಕೊರತೆ ಜತೆಗೆ, ಸಾರ್ವಜನಿಕರು ತ್ಯಾಜ್ಯ ಹಾಕುವ ಸ್ಥಳಗಳಲ್ಲಿ ತ್ಯಾಜ್ಯ ಸಾಗಣೆ ಸಮರ್ಪಕವಾಗಿ ಆಗುತ್ತಿಲ್ಲ. ಸಾರ್ವಜನಿಕರು ತ್ಯಾಜ್ಯ ಹಾಕುವ ಜಾಗ ಸೇರಿದಂತೆ ವಿವಿಧ ಕಡೆ ಬಿಳಿ ಪೌಡರ್ ಹಾಕಬೇಕಿದ್ದು, ಇದನ್ನು ಕೈಗೊಳ್ಳುತ್ತಿಲ್ಲ.
Related Articles
Advertisement
ಮೂರು ಟ್ರಿಪ್ ಕಡ್ಡಾಯ: ಮಹಾನಗರದ ಒಟ್ಟು 67 ವಾರ್ಡ್‌ಗಳಲ್ಲಿ ಸುಮಾರು 20 ವಾರ್ಡ್ ಪೌರ ಕಾರ್ಮಿಕರು ನಿರ್ವಹಿಸುತ್ತಿದ್ದರೆ, 47 ವಾರ್ಡ್‌ಗಳನ್ನು ಗುತ್ತಿಗೆದಾರರಿಂದ ನಿರ್ವಹಿಸಲಾಗುತ್ತದೆ. ಸಂಗ್ರಹಗೊಂಡ ತ್ಯಾಜ್ಯದ ವಿಲೇವಾರಿಗೆ ಬಹುತೇಕ ಎಲ್ಲ ವಾರ್ಡ್‌ಗಳನ್ನು ಗುತ್ತಿಗೆ ನೀಡಲಾಗಿದೆ.
ತ್ಯಾಜ್ಯ ಸಾಗಣೆ ಒಡಂಬಡಿಕೆಯಲ್ಲಿ ಪ್ರತಿ ಟ್ರ್ಯಾಕ್ಟರ್ ದಿನಕ್ಕೆ ಕನಿಷ್ಠ ಮೂರು ಟ್ರಿಪ್ ತ್ಯಾಜ್ಯ ಸಾಗಿಸಬೇಕೆಂಬ ನಿಯಮ ಇದ್ದರೂ, ಒಂದು ಎರಡು ಮಾತ್ರ ಸಾಗಣೆ ಆಗುತ್ತಿದೆ. ತ್ಯಾಜ್ಯ ಸಂಗ್ರಹ ಘಟಕದಲ್ಲಿ ಹಾಕಲಾಗಿದ್ದ ಸಿ.ಸಿ.ಕ್ಯಾಮೆರಾಗಳನ್ನು ಉದ್ದೇಶಪೂರ್ವಕವಾಗಿ ಹೊಡೆದು ಹಾಕಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಇದೀಗ ಪ್ರತಿ ಟ್ರ್ಯಾಕ್ಟರ್ ಮೂರು ಟ್ರಿಪ್ ಸಾಗಣೆ ಕಡ್ಡಾಯಗೊಳಿಸಲು ಕ್ರಮ ಕೈಗೊಳ್ಳಲು ಆರೋಗ್ಯ ಸ್ಥಾಯಿ ಸಮಿತಿ ಮುಂದಾಗಿದೆ. ತ್ಯಾಜ್ಯ ಸಂಗ್ರಹ ಘಟಕದಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆ ಹಾಗೂ ಹೆಚ್ಚಳದ ಜತೆಗೆ ಪ್ರತಿ ಟ್ರಿಪ್‌ಗೆ ಟ್ರ್ಯಾಕ್ಟರ್ ನವರು ಫೋಟೋ ತೆಗೆದು ಅದನ್ನು ವಾಟ್ಸ್‌ಪ್‌ನಲ್ಲಿ ಕಳುಹಿಸುವಂತೆ ಸೂಚಿಸಲು ಯೋಜಿಸಲಾಗಿದೆ.
ಜತೆಗೆ ತ್ಯಾಜ್ಯ ಸಂಗ್ರಹ ಘಟಕದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಪಾಲಿಕೆ ಆಯುಕ್ತರ ಕಚೇರಿಯಲ್ಲಿ ಸಂಗ್ರಹ ಹಾಗೂ ವೀಕ್ಷಣೆಗೆ ಅವಕಾಶದ ವ್ಯವಸ್ಥೆ ಕೈಗೊಳ್ಳುವ ಯೋಜಿಸಲಾಗಿದೆ. ವಾರ್ಡ್ ಸ್ವತ್ಛತಾ ಗುತ್ತಿಗೆದಾರರು ಗುತ್ತಿಗೆ ಪೌರ ಕಾರ್ಮಿಕರ ವಿಚಾರವಾಗಿ ತೋರಿಸುವ ಹಾಗೂ ವಾಸ್ತವದ ಸಂಖ್ಯೆ ವ್ಯತ್ಯಾಸವಿದ್ದು, ಇಲ್ಲಿವರೆಗೆ ತಪಾಸಣೆ ವೇಳೆ ಪೌರ ಕಾರ್ಮಿಕರ ಸಂಖ್ಯೆ ಕಡಿಮೆ ಇದ್ದರೆ ಅವರಿಗೆ 1 ಸಾವಿರ ರೂ.ವರೆಗೆ ದಂಡ ಹಾಕಲಾಗುತ್ತಿತ್ತು.
ಹಲವು ಬಾರಿ ದಂಡ ಪಾವತಿಯಾಗಿದೆಯಾದರೂ, ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಮಾತ್ರ ಆಗಿಲ್ಲ. ಆದರೆ ನಿಯಮದಲ್ಲಿ ನಿಗದಿಗಿಂತ ಕಡಿಮೆ ಪ್ರಮಾಣದ ಕಾರ್ಮಿಕರಿದ್ದರೆ ಗುತ್ತಿಗೆದಾರರಿಗೆ ಮೂರು ಪಟ್ಟು ದಂಡ ವಿಧಿಸುವ ಅವಕಾಶವಿದ್ದು, ಅದನ್ನೇ ಬಳಸಿಕೊಂಡು ಒಬ್ಬ ಕಾರ್ಮಿಕ ಕಡಿಮೆ ಇದ್ದರೆ ಮೂರು ಕಾರ್ಮಿಕರ ಗೈರು ಹಾಜರಾತಿ ದಂಡ ವಿಧಿಸಲು ಸಹ ಚಿಂತಿಸಲಾಗಿದ್ದು, ಒಂದು ವಾರದೊಳಗೆ ಈ ಕ್ರಮ ಜಾರಿಗೊಳ್ಳುವ ಸಾಧ್ಯತೆ ಇದೆ.
ಅಲ್ಲದೆ ಸೂರತ್ ಮಾದರಿಯಲ್ಲಿ ಪ್ರತಿ ಅಂಗಡಿ, ವ್ಯಾಪಾರ ಮಳಿಗೆ ಮುಂದೆ ಒಂದು ಕಸದ ಬಕೆಟ್ ಇಲ್ಲವೆ ಸಣ್ಣ ತೊಟ್ಟಿ ಇರಿಸುವುದನ್ನು ಕಡ್ಡಾಯಗೊಳಿಸಲು ಚಿಂತಿಸಲಾಗಿದೆ. ಅದೇ ರೀತಿ ಮಾರುಕಟ್ಟೆಗಳನ್ನು ರಾತ್ರಿ ವೇಳೆ ಸ್ವತ್ಛಗೊಳಿಸುವ ಕಾರ್ಯಕ್ಕೂ ಚಾಲನೆ ನೀಡಲು ಆರೋಗ್ಯ ಸ್ಥಾಯಿ ಸಮಿತಿ ನಿರ್ಧರಿಸಿದೆ.
* ಅಮರೇಗೌಡ ಗೋನವಾರ