ಸಕಲೇಶಪುರ: ಗುಣಮಟ್ಟದ ಸೇವೆ ನೀಡುವ ವಿಭಾಗದಲ್ಲಿ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆ ಉತ್ತಮ ರ್‍ಯಾಂಕ್ ಪಡೆಯುವತ್ತ ದಾಪುಗಾಲಿಟ್ಟಿದ್ದು , ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳ ಜೊತೆ ಮೊದಲ ಸ್ಥಾನ ಪಡೆಯಲು ಪೈಪೋಟಿ ನಡೆಸುತ್ತಿದೆ.
ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡ ಕ್ರಾಫರ್ಡ್ ಆಸ್ಪತ್ರೆ ವಿಶಿಷ್ಟ ವಾಸ್ತು ಶೈಲಿ ಹೊಂದಿದ್ದು, ಕಳೆದ 3ವರ್ಷಗಳ ಹಿಂದಷ್ಟೆ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆಯ ನವೀಕರಣ ಮಾಡಲಾಗಿತ್ತು. ಕಳೆದ ಒಂದು ವರ್ಷದ ಹಿಂದೆ ಶಾಸಕರು ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಪ್ರಯತ್ನದಿಂದ ಆಸ್ಪತ್ರೆಗೆ ಐಸಿಯು, ಡಯಾಲಿಸಿಸ್, ರಕ್ತನಿಧಿ, ಡಿಜಿಟಲ್ ಎಕ್ಸ್‌ರೇ ಸೇರಿದಂತೆ ಇನ್ನು ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು.
ಸ್ವಚ್ಛತೆ ಬಗ್ಗೆ ತೀವ್ರ ನಿಗಾ: ಆಸ್ಪತ್ರೆಯಲ್ಲಿ ಸ್ವಚ್ಛತೆಯನ್ನು ಉತ್ತಮವಾಗಿ ಕಾಪಾಡಿಕೊಂಡು ಬರಲಾಗಿದ್ದು, ಬಹುತೇಕ ತಾಲೂಕು ಆಸ್ಪತ್ರೆಗಳು ಜಿಪಂ ಅಡಿಯಲ್ಲಿ ಬಂದರೆ ಈ ಆಸ್ಪತ್ರೆ ಕರ್ನಾಟಕ ಆರೋಗ್ಯ ಇಲಾಖೆಯಡಿ ಬರುತ್ತದೆ. ಆಸ್ಪತ್ರೆಯಲ್ಲಿ ವೈದ್ಯರ ತೀವ್ರ ಕೊರತೆ ಬಿಟ್ಟರೆ ಬೇರೆ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದಿಂದ ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟದ ಕುರಿತು ಅಳೆಯುವ ಸ್ಪರ್ಧೆಯಲ್ಲಿ ಸಕಲೇಶಪುರ ತಾಲೂಕು ಆಸ್ಪತ್ರೆ ಅರ್ಜಿ ಸಲ್ಲಿಸಿದ್ದು ಈಗಾಗಲೇ ಎರಡು ತಂಡಗಳು ಬಂದು ಪರಿಶೀಲಿಸಿದ್ದು ಮತ್ತೂಂದು ತಂಡ ಫೆಬ್ರವರಿಯಲ್ಲಿ ಆಗಮಿಸಿ ಗುಣಮಟ್ಟದ ಪರೀಕ್ಷೆ ಮತ್ತೂಮ್ಮೆ ನಡೆಸಲಿದೆ.
ಮೌಲ್ಯ ಮಾಪನ ತಂಡದಿಂದ ಶ್ಲಾಘನೆ: ರಾಷ್ಟ್ರೀಯ ಗುಣಮಟ್ಟ ಖಾತ್ರಿ ವಿಭಾಗದಿಂದ ಪಟ್ಟಣಕ್ಕೆ ಆಗಮಿಸಿದ ಜಿಲ್ಲಾ ಸಮಿತಿ ಸದಸ್ಯರಾದ ಡಾ.ಸಂಧ್ಯಾ ಹಾಗೂ ಡಾ.ಹರೀಶ್ ನೇತೃತ್ವದ ತಂಡ ಕ್ರಾಫರ್ಡ್ ಆಸ್ಪತ್ರೆಯ ಮೌಲ್ಯಮಾಪನ ನಡೆಸಿತು. ಆಸ್ಪತ್ರೆಯನ್ನು ಒಟ್ಟು 8 ವಿಭಾಗಗಳನ್ನಾಗಿ ಮಾಡಿ ಪ್ರತಿ ವಿಭಾಗಕ್ಕೆ ನಾಲ್ಕುನೂರು ಪ್ರಶ್ನೆಗಳನ್ನು ಮುಂದಿಟ್ಟು ಮಾಲ್ಯಮಾಪನ ನಡೆಸಿದ ತಂಡ ಆಸ್ಪತ್ರೆ ನಿರ್ವಹಣೆಯ ಬಗ್ಗೆ ಮೆಚ್ಚುಗೆ ಸೂಚಿಸಿದೆ.
ಪ್ರತಿವರ್ಷ ಆಸ್ಪತ್ರೆಗಳ ಮೌಲ್ಯಮಾಪನ ನಡೆಸಲಾಗುತ್ತಿದೆ. ಆದರೆ ಇದೆ ಮೊದಲ ಬಾರಿಗೆ ಕ್ರಾಫರ್ಡ್ ಆಸ್ಪತ್ರೆ ತಾಲೂಕು ಮಟ್ಟದಲ್ಲಿ ಮೊದಲ ರ್‍ಯಾಂಕ್‌ಗಾಗಿ ಪೈಪೊಟಿ ನಡೆಸುತ್ತಿದ್ದು ಮೊದಲ ರ್‍ಯಾಂಕ್ ಪಡೆದ ಆಸ್ಪತ್ರೆಗಳಿಗೆ ಕೇಂದ್ರದ ಅನುದಾನ ನೇರವಾಗಿ ಆಸ್ಪತ್ರೆಗೆ ಬರಲಿರುವುದರಿಂದ ಆಸ್ಪತ್ರೆ ಅಭಿವೃದ್ಧಿಗೆ ಸಹಾಯಕವಾಗಲಿದೆ.
-ಡಾ.ಮಹೇಶ್, ತಾಲೂಕು ಆರೋಗ್ಯಾಧಿಕಾರಿ
ಕ್ರಾಫರ್ಡ್ ಆಸ್ಪತೆಗೆ ಎಲ್ಲಾ ಸೌಲಭ್ಯ ಒದಗಿಸಲಾಗಿದೆ. ಇಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂದಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರ ಕೂಡಲೇ ವೈದ್ಯರನ್ನು ನೇಮಿಸಲು ಮುಂದಾಗಬೇಕು.
-ಎಚ್.ಕೆ.ಕುಮಾರಸ್ವಾಮಿ, ಶಾಸಕರು
* ಸುಧೀರ್ ಎಸ್.ಎಲ್