Advertisement

ಅನುಕಂಪ ಆಧಾರದ ನೇಮಕಾತಿಗೆ ವಿದ್ಯಾರ್ಹತೆ ವಿನಾಯ್ತಿ

10:44 PM Apr 28, 2019 | Lakshmi GovindaRaju |

ಬೆಂಗಳೂರು: ಗ್ರಾಮ ಪಂಚಾಯಿತಿಗಳಲ್ಲಿ ಖಾಲಿಯಿರುವ ವಾಟರ್‌ವೆುನ್‌ ಹುದ್ದೆಗಳಿಗೆ ಅನುಕಂಪದ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಎದುರಾಗಿದ್ದ ಕನಿಷ್ಠ ವಿದ್ಯಾರ್ಹತೆ ಗೊಂದಲ ಇದೀಗ ದೂರವಾಗಿದೆ.

Advertisement

ಅನುಕಂಪದ ಆಧಾರದಲ್ಲಿ ವಾಟರ್‌ವೆುನ್‌ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುವಾಗ ನಿಗದಿಯಾಗಿದ್ದ ಕನಿಷ್ಠ ವಿದ್ಯಾರ್ಹತೆಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ವಿನಾಯ್ತಿ ನೀಡಿದೆ.

ಅಲ್ಲದೆ, ವಾಟರ್‌ವೆುನ್‌ ಹುದ್ದೆಯ ಜತೆಗೆ ಖಾಲಿ ಇರುವ ಪಂಪ್‌ ಆಪರೇಟರ್‌, ಪಂಪ್‌ ಮೆಕ್ಯಾನಿಕ್‌, ಜವಾನ ಮತ್ತು ಸ್ವತ್ಛತಾಗಾರರ ಹುದ್ದೆಗಳಿಗೆ ಅನುಕಂಪದ ಆಧಾರದಲ್ಲಿ ನೇಮಕಾತಿಗಳನ್ನು ಮಾಡಿಕೊಳ್ಳುವಾಗಲೂ ಕನಿಷ್ಠ ವಿದ್ಯಾರ್ಹತೆಯನ್ನು ಪರಿಗಣಿಸಬಾರದೆಂದು ಇಲಾಖೆ ಹೇಳಿದೆ.

ಗೊಂದಲ ಏನಿತ್ತು: ಗ್ರಾಪಂ ನೌಕರರು ಸೇವೆಯಲ್ಲಿರುವಾಗಲೇ ಮರಣ ಹೊಂದಿದಲ್ಲಿ ಅವರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕವಾಗಲು ಅರ್ಹತೆ ಇದ್ದಲ್ಲಿ ಗ್ರಾಪಂಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಬೇರೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವುದು ಬೇಡ.

ಅದರ ಬದಲು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅನುಮೋದನೆ ಪಡೆದು ಮರಣ ಹೊಂದಿದ ಅವಲಂಬಿತರನ್ನು ನೇಮಕ ಮಾಡಿಕೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆ 2017ರಲ್ಲಿ ಎಲ್ಲ ಗ್ರಾಪಂಗಳಿಗೆ ನಿರ್ದೇಶನ ನೀಡಿತ್ತು.

Advertisement

ಆದರೆ, ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ನೇಮಕಾತಿ ಹಾಗೂ ವೇತನ ಶ್ರೇಣಿ ನಿಗದಿಗೆ ಸಂಬಂಧಿಸಿದ 2014ರ ಆದೇಶದ ಪ್ರಕಾರ ವಾಟರ್‌ವೆುನ್‌ ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ ಎಂದು ನಿಗದಿಪಡಿಸಲಾಗಿತ್ತು.

ಹಾಗಾಗಿ, ಅನುಕಂಪದ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವಾಗ, ಹುದ್ದೆಗೆ ಬೇಕಾದ ಕನಿಷ್ಠ ವಿದ್ಯಾರ್ಹತೆ ಇಲ್ಲದೆ ಇದ್ದಲ್ಲಿ ಅವರಿಗೆ ಯಾವ ಹುದ್ದೆ ನೀಡಬೇಕೆಂಬ ಬಗ್ಗೆ ಗೊಂದಲ ನಿರ್ಮಾಣವಾಗಿ ಈ ಬಗ್ಗೆ ಹಲವು ಜಿಲ್ಲಾ ಪಂಚಾಯಿತಿಗಳು ಇಲಾಖೆಯಿಂದ ಮಾರ್ಗದರ್ಶನ ಬಯಸಿದ್ದರು. ಆ ಗೊಂದಲವನ್ನು ಇಲಾಖೆ ಈಗ ಬಗೆಹರಿಸಿದೆ.

ಕರ್ನಾಟಕ ನಾಗರಿಕ ಸೇವೆಗಳ (ಅನುಕಂಪ ಆಧಾರದಲ್ಲಿ ನೇಮಕಾತಿ) ನಿಯಮಗಳು 1996ರ ನಿಯಮ 4(3) ಪ್ರಕಾರ ರಾಜ್ಯ ಸಿವಿಲ್‌ ಸೇವೆಗೆ ಸೇರಿದ “ಡಿ’ ಗ್ರೂಪ್‌ ಹುದ್ದೆಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಲು ಕನಿಷ್ಠ ವಿದ್ಯಾರ್ಹತೆಯಿಂದ ವಿನಾಯ್ತಿ ನೀಡಲಾಗಿದೆ.

ಅದೇ ರೀತಿ, ಗ್ರಾಪಂಗಳ ನೌಕರರು ಮರಣ ಹೊಂದಿದಾಗ ಅವರ ಅವಲಂಬಿತರನ್ನು ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಎಲ್ಲ ಗ್ರಾಪಂಗಳಿಗೆ ನಿರ್ದೇಶಿಸಲಾಗಿದೆ.

ಇಲಾಖೆ ನೀಡಿರುವ ನಿರ್ದೇಶನದಂತೆ ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಮಂಜೂರು ಆಗಿರುವ ಬಿಲ್‌ ಕಲೆಕ್ಟರ್‌, ಕ್ಲರ್ಕ್‌ ಕಂ ಡಾಟಾ ಎಂಟ್ರಿ ಆಪರೇಟರ್‌ ಹುದ್ದೆಗಳನ್ನು “ಸಿ’ ಹುದ್ದೆಗಳೆಂದು ಪರಿಗಣಿಸಿ ಅವುಗಳಿಗೆ ನಿಗದಿಪಡಿಸಿರುವ ಕನಿಷ್ಠ ವಿದ್ಯಾರ್ಹತೆಯನ್ನು ಪರಿಗಣಿಸಿ ನೇಮಕಾತಿ ಮಾಡಿಕೊಳ್ಳಬೇಕು.

ಅದೇ ರೀತಿ, ವಾಟರ್‌ವೆುನ್‌, ಪಂಪ್‌ ಆಪರೇಟರ್‌, ಪಂಪ್‌ ಮೆಕ್ಯಾನಿಕ್‌, ಜವಾನ ಮತ್ತು ಸ್ವತ್ಛತಾಗಾರರ ಹುದ್ದೆಗಳನ್ನು “ಡಿ’ ಗ್ರೂಪ್‌ ಹುದ್ದೆಗಳೆಂದು ಪರಿಗಣಿಸಿ, ಕನಿಷ್ಠ ವಿದ್ಯಾರ್ಹತೆಯನ್ನು ಪರಿಗಣಿಸದೆ ಖಾಲಿಯಿರುವ ಹುದ್ದೆಗಳಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಬೇಕೆಂದು ಇತ್ತೀಚೆಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಸುತ್ತೋಲೆ ಹೊರಡಿಸಿದೆ.

ಸರ್ಕಾರದ ಈ ತೀರ್ಮಾನದಿಂದ ಅನುಕಂಪದ ಆಧಾರದ ನೇಮಕಾತಿಗಳಿಗೆ ಬಹಳ ಅನುಕೂಲವಾಗಿದೆ. ಆದರೆ, ಬಿಲ್‌ ಕಲೆಕ್ಟರ್‌, ಕ್ಲರ್ಕ್‌ ಕಂ ಡಾಟಾ ಎಂಟ್ರಿ ಆಪರೇಟರ್‌ ಹುದ್ದೆಗಳನ್ನು ಗ್ರೂಪ್‌ “ಸಿ’ ಹುದ್ದೆ ಎಂದು ಮತ್ತು ವಾಟರ್‌ವೆುನ್‌, ಪಂಪ್‌ ಆಪರೇಟರ್‌, ಜವಾನ, ಸ್ವತ್ಛತಾಗಾರ ಹುದ್ದೆಗಳನ್ನು “ಡಿ’ ಗ್ರೂಪ್‌ ಎಂದು ಪರಿಗಣಿಸಬೇಕೆಂದು ಸರ್ಕಾರ ಹೇಳಿರುವುದು ಅನುಕಂಪದ ನೇಮಕಾತಿಗಳಿಗೆ ಮಾತ್ರ ಅನ್ವಯವಾಗುತ್ತದೆ. ಹಾಗಂತ ಈ ಹುದ್ದೆಗಳೇ “ಸಿ’ ಮತ್ತು “ಡಿ’ ವೃಂದಕ್ಕೆ ಮೇಲ್ದರ್ಜೆಗೇರಿವೆ ಎಂದರ್ಥವಲ್ಲ.
-ಮಾರುತಿ ಮಾನ್ಪಡೆ, ಅಧ್ಯಕ್ಷರು, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ.

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next