ಇಂಡೋ ಪೆಸಿಫಿಕ್ ವಲಯದಲ್ಲಿ ಯಾವುದೇ ದೇಶದ ಆಕ್ರಮಣಕಾರಿತ್ವವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂಬ ದಿಟ್ಟ ನಿಲುವಿನೊಂದಿಗೆ ಕ್ವಾಡ್ ಶೃಂಗ ಮುಕ್ತಾಯವಾಗಿದ್ದು, ಈ ಮೂಲಕ ಚೀನಗೆ ನೇರ ಎಚ್ಚರಿಕೆ ನೀಡುವಲ್ಲಿ ಇದು ಯಶಸ್ವಿಯಾಗಿದೆ. ಉಕ್ರೇನ್ ಮೇಲಿನ ರಷ್ಯಾ ಆಕ್ರಮಣದ ನಡುವೆಯೇ ಈ ಶೃಂಗ ನಡೆದಿದ್ದು, ಜಗತ್ತಿನ ಶಾಂತಿಯ ಬಗ್ಗೆ ವಿಸ್ತೃತ ಚರ್ಚೆಯಾಗಿದೆ. ಹಾಗೆಯೇ ಅಮೆರಿಕ, ಭಾರತ, ಆಸ್ಟ್ರೇಲಿಯ ಮತ್ತು ಜಪಾನ್ ದೇಶಗಳು ಪರಸ್ಪರ ಸಹಕಾರದಿಂದ ಮುಂದಡಿ ಇಡಲು ನಿರ್ಧರಿಸಿದ್ದು ಇದೂ ಜಾಗತಿಕವಾಗಿ ನೋಡಿದರೆ ಉತ್ತಮ ಬೆಳವಣಿಗೆಯೇ.
ಇಂಡೋ ಪೆಸಿಫಿಕ್ ವಲಯದಲ್ಲಿ ಚೀನದ ಪಾರಮ್ಯ ಹೆಚ್ಚಾಗುತ್ತಿದೆ ಎಂಬುದನ್ನು ಮನಗಂಡೇ ಈ ಕ್ವಾಡ್ ಒಕ್ಕೂಟವನ್ನು ರಚಿಸಲಾಗಿದೆ ಎಂಬುದು ಸತ್ಯ. ಒಂದು ತನ್ನ ಶಸ್ತ್ರಾಸ್ತ್ರ, ಮಗದೊಂದು ಸಾಲ ನೀಡುವ ಭರದಲ್ಲಿ ದೇಶಗಳ ಆಂತರಿಕ ಭದ್ರತೆಗೆ ಮಾರಕವಾಗುವಂಥ ನಡೆಗಳನ್ನು ಚೀನ ಅನುಸರಿಸಿಕೊಂಡು ಬರುತ್ತಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆಯೇ ಭಾರತದ ನೆರೆ-ಹೊರೆಯಲ್ಲಿರುವ ದೇಶಗಳು. ಸಾಲ ಕೊಟ್ಟಂತೆ ಮಾಡಿ ಅವುಗಳ ಮೇಲೆ ಹಿಡಿತ ಸಾಧಿಸುವುದು ಚೀನದ ಹೊಸ ವಸಾಹತುಶಾಹಿ ನೀತಿ. ಆದರೆ ಇಂದಿಗೂ ಅದೆಷ್ಟೋ ರಾಷ್ಟ್ರಗಳು ಚೀನದ ಈ ಮುಷ್ಠಿತ್ವದ ಬಗ್ಗೆ ಅರಿವಿಲ್ಲದೆ ಆ ದೇಶ ನೀಡುವ ಹಣದತ್ತ ಕೈಚಾಚುವುದು ದುರದೃಷ್ಟಕರ.
ಇದರ ಜತೆಯಲ್ಲೇ ಚೀನದ ಸನಿಹದಲ್ಲೇ ಇರುವ ತನ್ನದೇ ಭಾಗ ಎಂದು ಹೇಳಿಕೊಳ್ಳುತ್ತಿರುವ ತೈವಾನ್ ವಿಚಾರವಾಗಿಯೂ ಕ್ವಾಡ್‌ನಲ್ಲಿ ಪ್ರಸ್ತಾವವಾಗಿದೆ. ಸದ್ಯದಲ್ಲೇ ಚೀನ ಈ ದೇಶದ ಮೇಲೆ ಯುದ್ಧ ಸಾರುವ ಎಲ್ಲ ಸಾಧ್ಯತೆಗಳೂ ಇವೆ. ಹೀಗಾಗಿಯೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಸೋಮವಾರವೇ ತೈವಾನ್ ಪರ ನಿಲ್ಲುವುದಾಗಿ ಘೋಷಿಸಿದ್ದಾರೆ. ಒಂದು ವೇಳೆ ತೈವಾನ್ ಏನಾದರೂ ಚೀನ ವಶಕ್ಕೆ ಹೋದರೆ ಜಗತ್ತಿಗೆ ಆರ್ಥಿಕವಾಗಿ ಮತ್ತು ರಕ್ಷಣಾತ್ಮಕವಾಗಿಯೂ ದೊಡ್ಡ ಪೆಟ್ಟು ಎಂಬ ವಿಶ್ಲೇಷಣೆಯೂ ಇದೆ.
ಅತ್ತ ರಷ್ಯಾ ಕೂಡ ಉಕ್ರೇನ್ ಮೇಲಿನ ದಾಳಿ ನಿಲ್ಲಿಸುತ್ತಿಲ್ಲ. ಇದಾದ ಮೇಲೆಯೂ ಕ್ವಾಡ್ ಶೃಂಗ ನಡೆಯುವ ಹೊತ್ತಿಗೇ ಜಪಾನ್ ಸಮುದ್ರದ ಮೇಲೆ ಚೀನ ಮತ್ತು ರಷ್ಯಾದ ಯುದ್ಧ ವಿಮಾನಗಳು ಹಾರಾಟ ನಡೆಸಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಇಡೀ ಜಗತ್ತೇ ಶಾಂತಿಗಾಗಿ ಅಪೇಕ್ಷೆ ಮಾಡುತ್ತಿರುವಾಗ ಇಂಥ ಘಟನೆಗಳು ಅಡ್ಡಗಾಲು ಇಡುವುದು ಖಂಡಿತ.
ಆದರೆ ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದಂತೆಯೇ ಚೀನ ಕೂಡ ತೈವಾನ್ ಮೇಲೆ ದಾಳಿ ಮಾಡುವ ಸಂಭವವಿದೆ. ಒಂದು ವೇಳೆ ದಾಳಿ ನಡೆಸಿದರೆ ಮುಂದೇನಾಗುತ್ತದೆ ಎಂಬುದು ಊಹಿಸುವುದೂ ಅಸಾಧ್ಯ. ಇಂಥ ಸನ್ನಿವೇಶದಲ್ಲಿ ಜಪಾನ್ ಸಮುದ್ರದಲ್ಲಿ ರಷ್ಯಾ ಮತ್ತು ಚೀನ ದೇಶಗಳ ಯುದ್ಧ ವಿಮಾನ ಹಾರಾಟ ಸಮರ್ಥನೀಯ ಅಲ್ಲವೇ ಅಲ್ಲ. ಈ ಕ್ವಾಡ್ ಶೃಂಗ ಭಾರತದ ಪಾಲಿಗೂ ಪ್ರಮುಖವಾದದ್ದು. ಚೀನದ ಆಕ್ರಮಣಕಾರಿ ಧೋರಣೆಯನ್ನು ಎದುರಿಸಬೇಕಾದರೆ ಇಂಥ ಗಟ್ಟಿಯಾದ ಒಕ್ಕೂಟ ಇರಲೇಬೇಕು. ಇದರ ಜತೆಗೆ ಚೀನ ಪ್ರಾಬಲ್ಯ ತಡೆಗಾಗಿ ಇಂಡೋ ಪೆಸಿಫಿಕ್ಸ್ ಎಕನಾಮಿಕ್ ಫ್ರೆಮ್‌ವರ್ಕ್‌ಗೆ ಚಾಲನೆ ನೀಡಿರುವುದು ಸ್ವಾಗತಾರ್ಹ. ಕೇವಲ ರಕ್ಷಣಾತ್ಮಕವಾಗಿಯಲ್ಲದೇ ಆರ್ಥಿಕವಾಗಿಯೂ ಸದೃಢರಾದರೆ ಚೀನವನ್ನು ದಿಟ್ಟವಾಗಿಯೇ ಎದುರಿಸಬಹುದು.