Advertisement

ಬಿಎಂಟಿಸಿ ಚಾಲಕರಿಗೆ ಕ್ಯುಆರ್‌ ಕೋಡ್‌ ಸಂಕಷ್ಟ

12:27 PM Sep 13, 2020 | Suhan S |

ಬೆಂಗಳೂರು: ಕೋವಿಡ್‌ ನಿಯಂತ್ರಣದ ಭಾಗವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪರಿಚಯಿಸಿದ “ಕ್ಯುಆರ್‌ ಕೋಡ್‌’ ವ್ಯವಸ್ಥೆ ಈಗ ನಿರ್ವಾಹಕರನ್ನು ಪೇಚಿಗೆ ಸಿಲುಕಿಸುತ್ತಿದೆ.

Advertisement

ಹೊಸ ವ್ಯವಸ್ಥೆ ಅಡಿ ಕೆಲ ಪ್ರಯಾಣಿಕರು ಕ್ಯುಆರ್‌ ಕೋಡ್‌ ಮೂಲಕ ಹಣ ಪಾವತಿಸಿ, ಟಿಕೆಟ್‌ ಪಡೆದು ಪ್ರಯಾಣಿಸುತ್ತಿದ್ದಾರೆ. ಆದರೆ, ಆ ಹಣ ಕೆಲವೊಮ್ಮೆ ಬಿಎಂಟಿಸಿ ಖಾತೆಗೆ ಜಮೆ ಆಗಿರುವುದೇ ಇಲ್ಲ. ಇನ್ನುಹಲವರು ದಟ್ಟಣೆ ಮಧ್ಯೆ ನುಸುಳಿ ಹಿಂದಿನ ಪಾವತಿಯನ್ನು ತೋರಿಸಿ ಟಿಕೆಟ್‌ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದರಿಂದ ನೆಟ್‌ ಬ್ಯಾಂಕಿಂಗ್‌ (ಇಡೀ ದಿನದ ಹಣ ವರ್ಗಾವಣೆ) ಮತ್ತು ಡ್ಯಾಶ್‌ಬೋರ್ಡ್‌ (ವೈಯಕ್ತಿಕ ಹಣ ವರ್ಗಾವಣೆ) ನಲ್ಲನ ಹಣ ಪಾವತಿಗಳಲ್ಲಿವ್ಯತ್ಯಾಸ ಬರುತ್ತಿದೆ. ಇದು ನಿರ್ವಾಹಕರು ತಂತ್ರಜ್ಞಾನ ಆಧಾರಿತ ವ್ಯವಸ್ಥೆ ನಿರಾಸಕ್ತಿಗೆ ಕಾರಣವಾಗುತ್ತಿದೆ.

ಸೋಂಕು ಹಾವಳಿ ತೀವ್ರವಾದ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಚಾಲನಾ ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವಿನ ಒಡನಾಟ ಕಡಿಮೆ ಮಾಡಲು ಸ್ಪರ್ಶ ರಹಿತವಾದ ಈ ವ್ಯವಸ್ಥೆ ಪರಿಚಯಿಸಲಾಗಿದೆ. ಇದರಲ್ಲಿ ಎಲ್ಲ ಘಟಕಗಳ ವ್ಯಾಪ್ತಿಯಲ್ಲಿರುವ ಪ್ರತಿ ಬಸ್‌ ಸಂಖ್ಯೆ ಹೆಸರಲ್ಲಿ ಕ್ಯುಆರ್‌ ಕೋಡ್‌ ರೂಪಿಸಲಾಗಿದೆ. ಪ್ರಯಾಣಿಕರು ತಮ್ಮ ಮೊಬೈಲ್‌ ನಿಂದ ಸ್ಕ್ಯಾನ್‌ ಮಾಡಿ ಡಿಜಿಟಲ್‌ ಪೇಮೆಂಟ್‌ ಮಾಡಿ ಪಾವತಿ ಆಗಿರುವ ಬಗ್ಗೆ ಕಂಡಕ್ಟರ್‌ಗೆ ತೋರಿಸಿದರೆ, ಇದಕ್ಕೆ ಪ್ರತಿಯಾಗಿ ಟಿಕೆಟ್‌ ನೀಡಲಾಗುತ್ತದೆ. ಆದರೆ, ಪಾವತಿಯಾದ ಹಣ ತಕ್ಷಣಕ್ಕೆ ಜಮೆ ಆಗುತ್ತಿಲ್ಲ. ಈ ಮಧ್ಯೆ ಕರ್ತವ್ಯ ಮುಗಿಸಿಕೊಂಡು ಟಿಕೆಟ್‌ ಆಡಿಟರ್‌ (ಚೀಟಿ ಶಾಖೆ ವಿಷಯ ನಿರ್ವಾಹಕ) ಬಳಿ ವರದಿ ಸಲ್ಲಿಸಲು ತೆರಳುವ ನಿರ್ವಾಹಕರನ್ನು ಇದು ಇಕ್ಕಟ್ಟಿಗೆ ಸಿಲುಕಿಸುತ್ತಿದೆ.

ಸಮಸ್ಯೆ ಹೇಗೆ?: “ಡ್ಯುಟಿ ಮುಗಿಸಿಕೊಂಡು ಟಿಕೆಟ್‌ ಆಡಿಟರ್‌ ಬಳಿ ತೆರಳಿದಾಗ, ನಾವು ಹೇಳಿದ ಲೆಕ್ಕಕ್ಕೂ ಅಲ್ಲಿರುವ ಲೆಕ್ಕಕ್ಕೂ ತಾಳೆ ಆಗುತ್ತಿಲ್ಲ. ಉದಾಹರಣೆಗೆ ಯಾವೊಂದು ಮಾರ್ಗದಲ್ಲಿ ಹತ್ತು ರೂ. ಮೌಲ್ಯದ ನೂರು ಟಿಕೆಟ್‌ ವಿತರಣೆ ಆಗಿರುತ್ತವೆ. ಈ ಪೈಕಿ 80 ಟಿಕೆಟ್‌ಗೆ ನಗದು ಮೂಲಕ ಪಾವತಿ ಹಾಗೂ ಉಳಿದ 20 ಕ್ಯುಆರ್‌ ಕೋಡ್‌ನಿಂದ ಹಣ ಪಾವತಿ ಆಗಿರುತ್ತದೆ ಎಂದುಕೊಳ್ಳೋಣ. ಅಂದರೆ, 800 ರೂ. ನಗದು ಹಾಗೂ ಉಳಿದದ್ದು 200 ರೂ. ಕ್ಯುಆರ್‌ ಕೋಡ್‌ ನಿಂದ ಜಮೆ ಆಗಿದೆ. ಆದರೆ, ಕೆಲವೊಮ್ಮೆ ಅಲ್ಲಿ ನೂರು ರೂ. ಜಮೆ ಆಗಿರುತ್ತದೆ. ಆಗ ಉಳಿದ ಹಣ ನಾವು ಕೈಯಿಂದ ಕಟ್ಟಬೇಕಾಗುತ್ತದೆ. ಇದು ನಿರ್ವಾಹಕರ ಜೇಬಿಗೆ ಕತ್ತರಿಯಾಗಿ ಪರಿಣಮಿಸುತ್ತಿದೆ.

ಇನ್ನು ಜೀವನ ಸಹಜ ಸ್ಥಿತಿಗೆ ಮರಳಿದ ಹಿನ್ನೆಲೆಯಲ್ಲಿ ಬಸ್‌ಗಳಿಗೆ ಇದ್ದ ನಿರ್ಬಂಧಗಳನ್ನು ಸಡಿಲಗೊಳಿಸಿದ್ದು, ಬಸ್‌ ಭರ್ತಿ ಮಾಡಿಕೊಂಡು ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿ ಕೆಲವರು ಹಿಂದಿನ ಪಾವತಿಯನ್ನು ತೋರಿಸಿ, ಟಿಕೆಟ್‌ ಪಡೆಯುತ್ತಾರೆ. ದಿನಾಂಕ, ಸಮಯ ಸೇರಿದಂತೆ ಎಲ್ಲವನ್ನೂ ಖಾತ್ರಿಪಡಿಸಿಕೊಳ್ಳುವುದು ನಿರ್ವಾಹಕರಿಗೆ ಜನ ಹೆಚ್ಚಿದ್ದಾಗ ಕಷ್ಟಸಾಧ್ಯ ಎಂದು ಮತ್ತೂಬ್ಬ ನಿರ್ವಾಹಕ ಬೇಸರ ವ್ಯಕ್ತಪಡಿಸುತ್ತಾರೆ.

Advertisement

“ಸ್ಲೇಟ್‌ ತೂಗುಹಾಕಿದಂತಾಗುತ್ತೆ’: “ಇದರ ಜತೆಗೆ ಕ್ಯುಆರ್‌ ಕೋಡ್‌ ಫ‌ಲಕ ತುಂಬಾ ದೊಡ್ಡದಿದೆ. ಸ್ಲೇಟ್‌ ನಂತೆ ಕತ್ತಿಗೆ ತೂಗುಹಾಕಿಕೊಂಡು ಓಡಾಡಲು ಮುಜುಗರ ತರಿಸುತ್ತದೆ ಎಂದು ಕೆಲ ನಿರ್ವಾಹಕರು ಘಟಕಗಳ ಮುಖ್ಯಸ್ಥರ ಎದುರು ಬೇಸರ ವ್ಯಕ್ತಪಡಿಸಿದ್ದೂ ಇದೆ. ಹಾಗಾಗಿ, ಅದರ ಗಾತ್ರ ಚಿಕ್ಕದು ಮಾಡಿ, ಎಲೆಕ್ಟ್ರಾನಿಕ್‌ ಟಿಕೆಟ್‌ ಯಂತ್ರ (ಇಟಿಎಂ)ದ ಕೆಳಗೆ ಅಂಟಿಸುವಂತಾದರೆ ಹೆಚ್ಚು ಸೂಕ್ತ. ಹಾಗೂ ಯಂತ್ರದಲ್ಲೇ ಕ್ಯುಆರ್‌ ಕೋಡ್‌ ಟಿಕೆಟ್‌ ಎಂಬ ಆಯ್ಕೆ ಇದ್ದರೆ ಇನ್ನೂ ಉತ್ತಮ. ಇದಕ್ಕಾಗಿ ಯಂತ್ರಕ್ಕೆ ಒಂದು ಅಪ್ಲಿಕೇಶನ್‌ ಸೇರಿಸಿದರೆ ಸಾಕು. ಈ ಹಿಂದೆ ಹಲವು ಬಾರಿ ಯಂತ್ರಕ್ಕೆ ಅಪ್ಲಿಕೇಶನ್‌ಗಳನ್ನು ಸೇರ್ಪಡೆ ಮಾಡಿದ್ದು ಇದ್ದೇ ಇದೆ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ಪಿಒಎಸ್‌ ಮೂಲೆಗುಂಪು? :  ಮಾಸಿಕ ಪಾಸುಗಳ ವಿತರಣಾ ಕೌಂಟರ್‌ಗಳಲ್ಲಿ ಹಿಂದೆ ಪಿಒಎಸ್‌ ಯಂತ್ರಗಳನ್ನು ಅಳವಡಿಸಲಾಗಿತ್ತು. ಆದರೆ, ಈಗ ಬಹುತೇಕ ಎಲ್ಲಿಯೂ ಬಳಕೆ ಆಗದೆ ಮೂಲೆಸೇರಿವೆ. ಕೊರೊನಾ ಸೋಂಕಿನ ಸಾಧ್ಯತೆಗಳನ್ನು ತಪ್ಪಿಸಲು ಪಿಒಎಸ್‌ ಯಂತ್ರಗಳ ಅಳವಡಿಕೆ ಈಗ ಹೆಚ್ಚು ಪ್ರಸ್ತುತವಾಗಿದೆ. ಆದರೆ, ತಾಂತ್ರಿಕ ಕಾರಣಗಳಿಂದ ಎಲ್ಲ ಕಡೆ ಇವುಗಳ ಬಳಕೆ ನಿಲ್ಲಿಸಲಾಗಿದೆ. ಇತ್ತೀಚೆಗೆ ಮಾಸಿಕ ಪಾಸು ಪಡೆಯುವವರ ಸಂಖ್ಯೆ ಅಧಿಕವಾಗಿದೆ. ಹಾಗೂ ಸೋಂಕು ನಿಯಂತ್ರಣದ ಭಾಗವಾಗಿ ಪಿಒಎಸ್‌ ಅಳವಡಿಕೆ ಅಗತ್ಯವಿದೆ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ಒಂದೇ ಒಂದು ವ್ಯತ್ಯಾಸ ಇಲ್ಲ; ಅಧಿಕಾರಿ : “ಇದುವರೆಗೆ ಒಂದೇ ಒಂದು ಕ್ಯುಆರ್‌ ಕೋಡ್‌ ಮತ್ತು ನೆಟ್‌ ಬ್ಯಾಂಕಿಂಗ್‌ನಲ್ಲಿ ವ್ಯತ್ಯಾಸ ಬಂದಿಲ್ಲ. ಪಾವತಿ ಮಾಡಿದ ತಕ್ಷಣ ಜಮೆ ಆಗುತ್ತಿದೆ. ಇಷ್ಟರ ನಡುವೆಯೂ ಇದಕ್ಕಾಗಿ ಪ್ರತ್ಯೇಕ ಸರ್ವರ್‌ ಅಥವಾ ವ್ಯವಸ್ಥೆಯನ್ನು ಮತ್ತಷ್ಟು ಸ್ಪೀಡ್‌ ಅಪ್‌ ಮಾಡಿಕೊಳ್ಳುವಂತೆ ಬ್ಯಾಂಕ್‌ ಅಧಿಕಾರಿಗಳಿಗೆ ಮನವಿ ಮಾಡಲಾಗುತ್ತಿದೆ. ಇನ್ನು ಹಳೆಯ ಪಾವತಿಯನ್ನು ನೋಡಿ ಖಾತ್ರಿಪಡಿಸಿಕೊಳ್ಳದಿ ರುವುದು ನಿರ್ವಾಹಕರ ತಪ್ಪಾಗುತ್ತದೆ. ಯಾಕೆಂದರೆ, ಈಗಾಗಲೇ ಎಲ್ಲ ರೀತಿಯ ತರಬೇತಿ ಮತ್ತು ಸೂಚನೆ ಗಳನ್ನು ನೀಡಲಾಗಿದೆ’ ಎಂದು ಮುಖ್ಯ ಲೆಕ್ಕಾಧಿಕಾರಿ ಅಬ್ದುಲ್‌ ಖುದ್ದುಸ್‌ ಸ್ಪಷ್ಟಪಡಿಸುತ್ತಾರೆ.

 

ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next