ಕತಾರ್:ಕತಾರ್‌ನಲ್ಲಿರುವ ಗಲ್ಫಾರ್ ಅಲ್ ಮಿಸನಾದ ಸಂಸ್ಥೆಯ ಕ್ಯುಎಚ್‌ಎಸ್‌ಇ (ಗುಣಮಟ್ಟ, ಆರೋಗ್ಯ, ಸುರಕ್ಷೆ ಹಾಗೂ ಪರ್ಯಾವರಣ) ವಿಭಾಗ ಮತ್ತು ಟೋಸ್ಟ್ ಮಾಸ್ಟರ್ ಕ್ಲಬ್ ವತಿಯಿಂದ ಸಂಸ್ಥೆಯ ಉದ್ಯೋಗಿಗಳ ಮಕ್ಕಳಿಗೆ ಭಾಷಣ ಸ್ಪರ್ಧೆಯನ್ನು ಸಂಸ್ಥೆಯ ಪ್ರಧಾನ ಕಾರ್ಯಾಲಯದ ಆವರಣದಲ್ಲಿ ಜೂ.8ರಂದು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧಿಗಳು, ಅವರ ಪೋಷಕರು, ಸ್ಪರ್ಧೆಯ ತೀರ್ಪುಗಾರರು ಹಾಗೂ ಅತಿಥಿಗಳು ಆಗಮಿಸಿದ್ದರು.
ಭಾಷಣ ಸ್ಪರ್ಧೆಯನ್ನು ವಯೋಮಿತಿಯ ಆಧಾರದ ಮೇಲೆ ಎರಡು ವರ್ಗಗಳಾಗಿ ವಿಂಗಡಣೆ ಮಾಡಲಾಗಿತ್ತು. ಮೊದಲನೆಯದು 6ರಿಂದ 9 ವರ್ಷ ವಯೋಮಿತಿಯ ಮಕ್ಕಳಿಗೆ ಹಾಗೂ ಎರಡನೆಯದು 10ರಿಂದ 13 ವರ್ಷದ ಮಕ್ಕಳಿಗೆ ಮೀಸಲಾಗಿತ್ತು. ಒಟ್ಟು 17 ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು ಹಾಗೂ ತಮ್ಮ ವಾಕ್ಚಾತುರ್ಯವನ್ನು ಸಮಸ್ತ ಸಭಿಕರೆದುರಿಗೆ ಪ್ರದರ್ಶಿಸಿ ಮೆಚ್ಚುಗೆ ಪಡೆದರು.
ಕಾರ್ಯಕ್ರಮದ ನಿರ್ದೇಶಕರು ಹಾಗೂ ಸಂಸ್ಥೆಯ ಕ್ಯುಎಚ್‌ಎಸ್‌ಇ ವ್ಯವಸ್ಥಾಪಕರು ಆದ ಜಾನ್ ಹೆನ್ರಿ ಅವರು ಎಲ್ಲರನ್ನೂ ಸ್ವಾಗತಿಸಿದರು. ತಮ್ಮ ಆಕರ್ಷಕ ಭಾಷಣದಲ್ಲಿ ಅನುಭವ ಹಂಚಿಕೊಳ್ಳುತ್ತಾ, ಅತ್ಯುತ್ತಮ ಪ್ರದರ್ಶನ ನೀಡಿದರು. ಇಂತಹ ಪರಿಸರ ಪ್ರಜ್ಞಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮಹತ್ವ ಹಾಗೂ ಯುವಜನರ ಮೇಲೆ ಅದರಿಂದಾಗುವ ಸಕಾರಾತ್ಮಕ ಪ್ರಭಾವದ ಪ್ರಾಮುಖ್ಯವನ್ನು ಪುನರುಚ್ಚರಿಸಿದರು. ಗಲ್ಫಾರ್ ಅಲ್ ಮಿಸನಾದ ಸಂಸ್ಥೆಯು ಕತಾರ್‌ನಲ್ಲಿ ಇಂತಹ ಸಮಾಜ ಹಾಗೂ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಕಳೆದ 25 ವರ್ಷಗಳಿಂದ ಹಮ್ಮಿಕೊಳ್ಳುತ್ತಿರುವುದನ್ನು ಶ್ಲಾ ಸಿದರು. ಲಕ್ಷ್ಮೀ ಶಾರದಾ ಅವರು ನಾಲ್ಕು ಜನ ತೀರ್ಪುಗಾರರ ತಂಡದ ಪರಿವೀಕ್ಷಕರಾಗಿ ಉತ್ತಮ ಕಾರ್ಯ ನಿರ್ವಹಿಸಿದರು.
ಕಾರ್ಯಕ್ರಮದ ಅನಂತರ ಟೋಸ್ಟ್ ಮಾಸ್ಟರ್ ಕ್ಲಬ್‌ನ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಟಾಗಿಲು ಅವರು ಮಾತನಾಡಿ, ಈ ಕಾರ್ಯಕ್ರಮವನ್ನು ಏರ್ಪಡಿಸಲು ಕಾರಣಿಕರ್ತರಾದ ಸಂಸ್ಥೆಯ ಆಡಳಿತ ಸಮಿತಿ, ಸಂಸ್ಥಾಪಕ ನಿರ್ದೇಶಕರಾದ ಸತೀಶ್ ಜೆ.ಪಿಲೈ, ಕ್ಯುಎಚ್‌ಎಸ್‌ಇ ಮುಖ್ಯಸ್ಥರಾದ ನವನೀತ ಶೆಟ್ಟಿ ಹಾಗೂ ಎಲ್ಲ ಸ್ಪರ್ಧಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಗಲ#ರ್‌ಮಿಸ್ ನಾದ್ ಸಂಸ್ಥೆಯ ಉದ್ಯೋಗಿಗಳ ಮಕ್ಕಳಿಗೆ “ಯುವ ನಾಯಕತ್ವ ಕಾರ್ಯಕ್ರಮ’ (ಯೂತ್ ಲೀಡರ್‌ಶಿಪ್ ಪ್ರೋಗ್ರಾಂ) ಹಮ್ಮಿಕೊಳ್ಳಲಾಗುವುದೆಂದು ಇದೇ ಸಂದರ್ಭದಲ್ಲಿ ಘೋಷಿಸಿದರು. ಇದರಿಂದ ಸಂಸ್ಥೆಯು ಮಕ್ಕಳ ಪ್ರತಿಭೆಗೆ ಪ್ರೇರಣೆ ನೀಡಲು ಬದ್ಧರಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ನಿರ್ವಿಘ್ನವಾಗಿ ಹಾಗೂ ಸುಸೂತ್ರವಾಗಿ ನೆರವೇರಲು ಕಾರಣಕರ್ತರಾದವರು ಮಹಮ್ಮದ್ ಇಮ್ರಾನ್ ಹಾಗೂ ಅವರ ತಂಡದವರು, ಎರಡು ವರ್ಗದ ಭಾಷಣ ಸ್ಪರ್ಧೆಯನ್ನು ನಡೆಸಿಕೊಟ್ಟವರು ಮಹಮ್ಮದ್ ಆಶೀರ್ ಹಾಗೂ ಅಬ್ದುಲ್ ಕದಲ್, ಆಯೋಜಕರ ತಂಡವು ಕಾರ್ಯಕ್ರಮವನ್ನು ಸರಾಗವಾಗಿ ಹಾಗೂ ಸುಸಜ್ಜಿತವಾಗಿ ನೆರವೇರಲು ಕಾರಣವಾಯಿತು. ಪ್ರತಿಯೊಬ್ಬ ಸ್ಪರ್ಧಿಗೂ ಉಡುಗೊರೆ, ಪ್ರಮಾಣ ಪತ್ರ ಹಾಗೂ ಒಂದು ಸಸಿಯನ್ನು ಕೊಡುಗೆಯಾಗಿ ವಿತರಿಸಲಾಯಿತು. ಸ್ಪರ್ಧೆಯ ವಿಜೇತರಿಗೆ ಪ್ರತಿ ವರ್ಗದಲ್ಲಿ ಪದಕ, ಉಡುಗೊರೆ ಹಾಗೂ ಟ್ರೋಫಿಯನ್ನು ಪ್ರದಾನ ಮಾಡಲಾಯಿತು.