ದುಬೈ: ವರ್ಷಾಂತ್ಯದ ದುಬೈ ಸೂಪರ್ ಸೀರೀಸ್ ಫೈನಲ್ಸ್ ಬುಧವಾರದಿಂದ ಆರಂಭವಾಗಲಿದೆ. “ಎ’ ಬಣದಲ್ಲಿರುವ ಒಲಿಂಪಿಕ್ ಬೆಳ್ಳಿ ವಿಜೇತೆ ಪಿವಿ ಸಿಂಧು ಅವರು ಚೀನದ ಹೀ ಬಿಂಗ್‌ಜಿಯಾವೊ ಅವರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ.
ವಿಶ್ವದ ಮೂರನೇ ರ್‍ಯಾಂಕಿನ ಸಿಂಧು ಸಹಿತ ಎರಡನೇ ರ್‍ಯಾಂಕಿನ ಜಪಾನಿನ ಅಕಾನೆ ಯಮಗುಚಿ, ಸಯಾಕೊ ಸಾಟೊ ಮತ್ತು ಚೀನದ ಬಿಂಗ್‌ಜಿಯಾವೊ “ಎ’ ಬಣದಲ್ಲಿದ್ದಾರೆ. ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯುವ ಈ ಹೋರಾಟದಲ್ಲಿ ಎಲ್ಲ ನಾಲ್ವರು ಆಟಗಾರ್ತಿಯರು ಪರಸ್ಪರ ಮುಖಾಮುಖೀಯಾಗಲಿದ್ದಾರೆ.
ವಿಶ್ವದ ನಂಬರ್ ವನ್ ಚೈನೀಸ್ ತೈಪೆಯ ತೈ ಟಿಝು ಯಿಂಗ್, ಕೊರಿಯದ ಸಂಗ್ ಜಿ ಹ್ಯುನ್, ಥಾçಲಂಡಿನ ರಚನಾಕ್ ಇಂತನಾನ್ ಮತ್ತು ಚೀನದ ಚೆನ್ ಯುಫೆಯಿ “ಬಿ’ ಬಣದಲ್ಲಿದ್ದಾರೆ. ಒಲಿಂಪಿಕ್ ಚಿನ್ನ ವಿಜೇತೆ ಸ್ಪೇನ್‌ನ ಕ್ಯಾರೋರಿನ್ ಮರಿನ್ ಮತ್ತು ವಿಶ್ವ ಚಾಂಪಿಯನ್ ಜಪಾನಿನ ನಜೋಮಿ ಒಕುಹಾರ ಈ ಪ್ರತಿಷ್ಠಿತ ಕೂಟದಿಂದ ಹಿಂದೆ ಸರಿದಿದ್ದಾರೆ.
ಇಂಡಿಯಾ ಓಪನ್, ಕೊರಿಯ ಓಪನ್ ಸೂಪರ್ ಸೀರೀಸ್ ಕೂಟದ ಪ್ರಶಸ್ತಿ ಗೆದ್ದಿರುವ ಸಿಂಧು ಗಾಸೊYàದಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಮತ್ತು ಹಾಂಕಾಂಗ್ ಓಪನ್ ಕೂಟದಲ್ಲಿ ರನ್ನರ್ ಅಪ್ ಪ್ರಶಸ್ತಿ ಜಯಿಸಿದ್ದರು. ಈ ಸಾಧನೆಯಿಂದ ಅವರು ಬಹಳಷ್ಟು ಆತ್ಮವಿಶ್ವಾಸದೊಂದಿಗೆ ಈ ಕೂಟದಲ್ಲಿ ಭಾಗವಹಿಸುತ್ತಿದ್ದು ಪ್ರಶಸ್ತಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ ನಾಲ್ಕನೇ ರ್‍ಯಾಂಕಿನ ಕಿದಂಬಿ ಶ್ರೀಕಾಂತ್ “ಬಿ’ ಬಣದಲ್ಲಿದ್ದು ನಂಬರ್ ವನ್ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ಅವರನ್ನು ಎದುರಿಸುವ ಮೂಲಕ ತನ್ನ ಹೋರಾಟಕ್ಕೆ ಚಾಲನೆ ನೀಡಲಿದ್ದಾರೆ.
ಚೋ ಟೀನ್ ಚೆನ್ ಮತ್ತು ಶೀ ಯುಕಿ “ಬಿ’ ಬಣದಲ್ಲಿರುವ ಇನ್ನಿಬ್ಬರು ಆಟಗಾರರಾಗಿದ್ದಾರೆ. ಶ್ರೀಕಾಂತ್ ಈ ವರ್ಷ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ವರ್ಷವೊಂದರಲ್ಲಿ ನಾಲ್ಕು ಸೂಪರ್ ಸೀರೀಸ್ ಪ್ರಶಸ್ತಿ ಗೆದ್ದ ಭಾರತದ ಮೊದಲ ಮತ್ತು ಒಟ್ಟಾರೆಯಾಗಿ ನಾಲ್ಕನೇ ಆಟಗಾರ ಎಂಬ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಚೀನ ಓಪನ್ ಮತ್ತು ಹಾಂಕಾಂಗ್ ಓಪನ್‌ನಿಂದ ಹಿಂದೆ ಸರಿಯುವ ಮೊದಲು ಶ್ರೀಕಾಂತ್ ಇಂಡೋನೇಶ್ಯ, ಆಸ್ಟ್ರೇಲಿಯ, ಡೆನ್ಮಾರ್ಕ್ ಮತ್ತು ಫ್ರೆಂಚ್ ಓಪನ್ ಕೂಟದ ಪ್ರಶಸ್ತಿ ಜಯಿಸಿದ್ದರು.