ಸಿಂಗಾಪುರ: ಶಟ್ಲರ್‌ಗಳಾದ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಮತ್ತು ಫಾರ್ಮ್ ನಲ್ಲಿರುವ ಎಚ್.ಎಸ್. ಪ್ರಣಯ್ ಅವರು ಮಂಗಳವಾರದಿಂದ ಆರಂಭವಾಗುವ ಸಿಂಗಾಪುರ ಓಪನ್ ಸೂಪರ್ 500 ಕೂಟದಲ್ಲಿ ಭಾರತದ ಸವಾಲಿನ ನೇತೃತ್ವ ವಹಿಸಲಿದ್ದಾರೆ.
ಈ ತಿಂಗಳಾಂತ್ಯದಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ಆರಂಭವಾಗುವ ಕಾಮನ್‌ವೆಲ್ತ್ ಗೇಮ್ಸ್ ಮೊದಲು ಇದು ಭಾರತೀಯ ಶಟ್ಲರ್‌ಗಳಿಗೆ ಲಭಿಸಲಿರುವ ಕೊನೆಯ ಕೂಟವಾಗಿದೆ. ಹೀಗಾಗಿ ಆಟಗಾರರೆಲ್ಲರೂ ಈ ಕೂಟದಲ್ಲಿ ಉತ್ತಮ ನಿರ್ವಹಣೆ ನೀಡುವ ನಿರೀಕ್ಷೆಯಿದೆ.
ಸಿಂಧು (3) ಮತ್ತು ಕಿದಂಬಿ ಶ್ರೀಕಾಂತ್ (7) ಈ ಕೂಟದ ಮುಖ್ಯ ಡ್ರಾದಲ್ಲಿ ಕಾಣಿಸಿಕೊಂಡ ಶ್ರೇಯಾಂಕ ಹೊಂದಿರುವ ಭಾರತದ ಆಟಗಾರರಾಗಿದ್ದಾರೆ. ವಿಶ್ವದ 7ನೇ ರ್‍ಯಾಂಕಿನ ಸಿಂಧು ಬೆಲ್ಜಿಯಂನ ಲಿಯನ್ನೆ ತಾನ್ ಅವರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಕ್ವಾರ್ಟರ್‌ಫೈನಲ್‌ನಲ್ಲಿ ಅವರು ಥಾಯ್ಲೆಂಡಿನ ಬುಸಾನನ್ ಒಂಗ್ಬಾಮೃಂಗಪನ್ ಅವರನ್ನು ಎದುರಿಸುವ ಸಾಧ್ಯತೆಯಿದೆ. ಇವರಿಬ್ಬರ ಮುಖಾಮುಖೀಯಲ್ಲಿ ಸಿಂಧು 17-1 ಜಯ ಸೋಲಿನ ದಾಖಲೆ ಹೊಂದಿದ್ದಾರೆ.
ಸೈನಾ ನೆಹ್ವಾಲ್ ತನ್ನ ದೇಶದವರೇ ಆದ ಮಾಳವಿಕಾ ಬನ್ಸೂದ್ ಅವರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ. ದ್ವಿತೀಯ ಸುತ್ತಿನಲ್ಲಿ ಅವರು ಹಿ ಬಿಂಗ್ ಜಿಯಾವೊ ಅವರನ್ನು ಎದುರಿಸುವ ಸಾಧ್ಯತೆಯಿದೆ.
ಇಂಡೋನೇಶ್ಯ ಓಪನ್ ಬಳಿಕ ಬ್ಯಾಡ್ಮಿಂಟನ್ ರಂಗಕ್ಕೆ ಮರಳಿರುವ ಶ್ರೀಕಾಂತ್ ಮೊದಲ ಸುತ್ತಿನಲ್ಲಿ ಅರ್ಹತಾ ಆಟಗಾರನನ್ನು ಎದು ರಿಸಲಿದ್ದಾರೆ.