ಟೋಕಿಯೊ: ಬಂಗಾರದ ಪದಕದ ನಿರೀಕ್ಷೆ ಮೂಡಿಸಿದ್ದ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಸೆಮಿ ಫೈನಲ್ ನಲ್ಲಿ ಮುಗ್ಗರಿಸಿದರು. ಚೈನೀಸ್ ತೈಪೆಯ ತೈ ಜು ಯಿಂಗ್ ವಿರುದ್ಧ 21-18, 21-12 ನೇರ ಸೆಟ್ ಗಳಲ್ಲಿ ಸಿಂಧು ಸೋಲನುಭವಿಸಿದರು.
ಮುಸಾಶಿನೋ ಫಾರೆಸ್ಟ್ ಸ್ಪೋರ್ಟ್ ಪ್ಲಾಜಾದಲ್ಲಿ ನಡೆದ ಪಂದ್ಯದಲ್ಲಿ ವಿಶ್ವದ ವಿಶ್ವದ ನಂಬರ್ 1 ಆಟಗಾರ್ತಿ ತೈ ಜು ಯಿಂಗ್ ಆಕ್ರಮಣಕಾರಿಯಾಗಿ ಆಡಿದರು. ಮೊದಲ ಸೆಟ್ ನ ಆರಂಭದಲ್ಲಿ ಸಿಂಧು ಮುನ್ನಡೆ ಸಾಧಿಸಿದ್ದರೂ ನಂತರ ತೈ ಜು ಯಿಂಗ್ ಪಂದ್ಯದಲ್ಲಿ ಸಂಪೂರ್ಣ ತನ್ನ ಹಿಡಿತ ಸಾಧಿಸಿದರು.
ಈ ಗೆಲುವಿನೊಂದಿಗೆ ತೈ ಜು ಯಿಂಗ್ ಫೈನಲ್ ಗೆ ಪ್ರವೇಶ ಪಡೆದರು. ಪಿ.ವಿ.ಸಿಂಧು ಅವರು ಕಂಚಿನ ಪದಕಕ್ಕಾಗಿ ಸ್ಪರ್ಧೆ ನಡೆಸಲಿದ್ದಾರೆ.
ಇದನ್ನೂ ಓದಿ:ಪದಕವಿಲ್ಲದೆ ಟೋಕಿಯೊ ಒಲಿಂಪಿಕ್ಸ್ ಪಯಣ ಅಂತ್ಯಗೊಳಿಸಿದ ನೊವಾಕ್ ಜೊಕೊವಿಕ್
ಸಿಂಧು ವಿರುದ್ಧ ತೈ ಜು ಯಿಂಗ್ ಈ ಮೊದಲು 13-7 ಗೆಲುವಿನ ದಾಖಲೆ ಹೊಂದಿದ್ದರು. ಕಳೆದ 3 ಪಂದ್ಯಗಳಲ್ಲಿ ಸಿಂಧುಗೆ ಸೋಲುಣಿಸಿದ್ದಾರೆ. ಆದರೆ ಕಳೆದ ರಿಯೋ ಒಲಿಂಪಿಕ್ಸ್, 2018ರ ವರ್ಲ್ಡ್ ಟೂರ್ ಫೈನಲ್ಸ್, 2019ರ ವಿಶ್ವ ಚಾಂಪಿಯನ್‌ಶಿಪ್ ಮೊದಲಾದ ದೊಡ್ಡ ಕೂಟಗಳಲ್ಲಿ ತೈಪೆ ಆಟಗಾರ್ತಿಗೆ ಸಿಂಧು ಸೋಲಿನ ರುಚಿ ತೋರಿಸಿದ್ದರು.