ಹಿಂದೆ ತ್ರೇತಾಯುಗದಲ್ಲಿ ಶ್ರವಣಕುಮಾರ ಎಂಬ ಮುನಿಪುತ್ರನಿದ್ದ. ಅವನು ತನ್ನ ತಂದೆತಾಯಿಗಳಿಗೆ ಮುಪ್ಪಿನಲ್ಲಿ ಜನಿಸಿದ ಮಗ. ಅವನ ತಂದೆ ತಾಯಿ ಇಬ್ಬರೂ ಹುಟ್ಟು ಕುರುಡರು ಹಾಗೂ ವಯೋವೃದ್ಧರು. ಅವರಿಗೆ ಏನೇ ಬೇಕಾದರೂ ಎಲ್ಲದಕ್ಕೂ ಅವರು ಇನ್ನೊಬ್ಬರನ್ನೇ ಅವಲಂಬಿಸಬೇಕಾದ ಪರಿಸ್ಥಿತಿ. ಶ್ರವಣಕುಮಾರನೇ ಅವರಿಬ್ಬರ ಸರ್ವಸ್ವವೂ ಆಗಿದ್ದ. ಹೀಗಾಗಿ ಶ್ರವಣಕುಮಾರ ಎಲ್ಲಿಯೂ ಹೋಗದೆ ತನ್ನ ತಂದೆತಾಯಿಗಳ ಸೇವೆಯನ್ನೇ ಮಾಡಿಕೊಂಡು ಅವರ ಬಳಿಯೇ ಇರುತ್ತಿದ್ದ. ತಂದೆತಾಯಿಗಳ ಸೇವೆಯೇ ದೇವರ ಸೇವೆ, ತನ್ನ ಬಾಳಿನ ಗುರಿ, ಪರಮಾರ್ಥ ಎಂದು ಭಾವಿಸಿದ್ದ.
ಒಮ್ಮೆ ಅವನ ತಂದೆತಾಯಿಗಳಿಗೆ ತೀರ್ಥಯಾತ್ರೆ ಮಾಡಬೇಕೆಂಬ ಹಂಬಲವಾಯಿತು. ಅವರು ತಮ್ಮಾಸೆಯನ್ನು ಮಗನಲ್ಲಿ ಹೇಳಿಕೊಂಡರು. ಮಗ ಸಮ್ಮತಿಸಿದ. ಆದರೆ ವೃದ್ಧ ತಂದೆತಾಯಿಗಳನ್ನು ಕ್ಷೇತ್ರಗಳಲ್ಲೆಲ್ಲಾ ಸುತ್ತಾಡಿಸುವುದು ಹೇಗೆ? ಶ್ರವಣಕುಮಾರ ಒಂದು ಉಪಾಯ ಮಾಡಿದ. ಒಂದು ಕಾವಡಿಯನ್ನು ತಯಾರಿಸಿದ. ಅದರ ಎರಡೂ ಬುಟ್ಟಿಗಳಲ್ಲಿ ತಂದೆ ತಾಯಿಯರನ್ನು ಕೂಡಿಸಿ ಕಾವಡಿಯನ್ನು ತನ್ನ ಹೆಗಲ ಮೇಲೆ ಹೊತ್ತು ಅವರು ನೋಡಬೇಕೆಂದ ಸ್ಥಳಗಳನ್ನೆಲ್ಲಾ ತೋರಿಸಿದ. ಆಗೆಲ್ಲಾ ಕಾಲ್ನಡಿಗೆಯಲ್ಲೇ ಓಡಾಡಬೇಕಿತ್ತು, ಹಾಗೂ ಕಾಡಿನಲ್ಲೆಲ್ಲಾ ಸಂಚರಿಸಬೇಕಿತ್ತು.
ಹೀಗೆಯೇ ಸುತ್ತಾಡುತ್ತಿರುವಾಗ ಒಂದು ಮಧ್ಯಾಹ್ನ ದಣಿವಾರಿಸಿಕೊಳ್ಳಲು ಕಾಡಿನಲ್ಲಿ ಒಂದು ಮರದಡಿ ಕಾವಡಿ ಇಳಿಸಿದ. ವೃದ್ಧ ತಂದೆತಾಯಿಗಳು ಬಹಳ ಬಾಯಾರಿಕೆಯೆಂದೂ, ನೀರು ಬೇಕೆಂದರು. ಶ್ರವಣಕುಮಾರ ಅವರನ್ನು ಅಲ್ಲಿಯೇ ನೆರಳಲ್ಲಿ ಕೂಡಿಸಿ ತಾನು ನೀರನ್ನರಸಿ ಹೊರಟ. ಸ್ವಲ್ಪ ದೂರ ನಡೆದಾಗ ಅಲ್ಲೊಂದು ತಿಳಿನೀರ ತೊರೆ ಕಾಣಿಸಿತು. ಸಂತಸದಿಂದ ಅತ್ತ ನಡೆದ ಕುಮಾರ ತಾನೂ ಅದರಲ್ಲಿ ಕೈಕಾಲು ತೊಳೆದು, ನೀರು ಕುಡಿದು ದಣಿವಾರಿಸಿಕೊಂಡು ತನ್ನ ತಂದೆತಾಯಿಗಳಿಗೆ ನೀರನ್ನು ತುಂಬಿಸಿಕೊಳ್ಳುತ್ತಿದ್ದ. ಅದೇ ಸಮಯಕ್ಕೆ ಅಯೋಧ್ಯೆಯ ರಾಜನಾದ ದಶರಥ ಬೇಟೆಗಾಗಿ ಕಾಡಿಗೆ ಬಂದಿದ್ದ. ಅವನಿಗೆ ಶಬ್ದ ಬಂದ ಕಡೆ ಬಾಣ ಬಿಡುವ ಕಲೆ(ಶಬ್ಧವೇಧಿ ವಿದ್ಯೆ) ಗೊತ್ತಿತ್ತು. ಶ್ರವಣಕುಮಾರ ನೀರು ತುಂಬಿಸುವಾಗ ಆದ ಗುಳುಗುಳು ಶಬ್ದ ದಶರಥನಿಗೆ ಪ್ರಾಣಿ ನೀರು ಕುಡಿಯುವಾಗ ಮಾಡುವ ಶಬ್ದದಂತೆ ಕೇಳಿಸಿತು. ಯಾವುದೋ ಪ್ರಾಣಿಯಿರಬೇಕೆಂದು ಉತ್ಸಾಹದಲ್ಲಿ ಶಬ್ದ ಬಂದ ಕಡೆ ಬಾಣ ಪ್ರಯೋಗಿಸಿದ. ಬಾಣವು ಶ್ರವಣಕುಮಾರನ ಎದೆಯನ್ನು ಹೊಕ್ಕಿತು. ಅಯ್ಯೋ ಎಂದು ಕೂಗಿದ ಮುನಿಪುತ್ರನ ಧ್ವನಿ ಕೇಳಿ ದಶರಥ ಅವಾಕ್ಕಾಗಿ ಕೂಗು ಕೇಳಿಬಂದ ಕಡೆ ಧಾವಿಸಿದ. ಮುನಿಕುಮಾರ ನೆಲದಲ್ಲಿ ಬಿದ್ದು ವಿಲವಿಲ ಒದ್ದಾಡುತ್ತಿದ್ದ. ಅವನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡ ದಶರಥ, ಅವನ ಪೂರ್ವೋತ್ತರಗಳನ್ನು ವಿಚಾರಿಸಿ ತಿಳಿದುಕೊಂಡ. ರಾಜನಿಗೆ ಪಶ್ಚಾತ್ತಾಪವಾಗಿತ್ತು. ಸಾಯುವ ಸ್ಥಿತಿಯಲ್ಲಿದ್ದ ಶ್ರವಣಕುಮಾರ ತನ್ನ ತಂದೆತಾಯಿಗಳ ಗತಿಯೇನೆಂದು ದುಃಖೀಸಿದ. ಅವನಿಗೆ ಸಮಾಧಾನ ಹೇಳಿದ ರಾಜ ಆ ವೃದ್ಧ ತಪಸ್ವಿಗಳನ್ನು ತಾನೇ ಪೋಷಿಸುವುದಾಗಿ ಮುನಿಪುತ್ರನಿಗೆ ಮಾತು ಕೊಟ್ಟ. ಶ್ರವಣಕುಮಾರ ನಿಶ್ಚಿಂತೆಯಿಂದ ಪ್ರಾಣಬಿಟ್ಟ.
ಇತ್ತ ಮಗ ಇನ್ನೂ ಏಕೆ ಬರಲಿಲ್ಲವೆಂದು ಕಾಯುತ್ತಿದ್ದ ವೃದ್ಧರ ಬಳಿ ದಶರಥ ತಾನೇ ನೀರನ್ನು ತೆಗೆದುಕೊಂಡು ಬಂದ. ಕಣ್ಣು ಕಾಣದ ವೃದ್ಧರು ರಾಜನನ್ನೇ ಮಗನೆಂದು ತಿಳಿದು ಮಗನೇ “ಏಕೆ ತಡಮಾಡಿದೆ? ನಿನಗೇನಾದರೂ ಅಪಾಯವಾಯಿತೇನೋ ಎಂದು ಭಯವಾಯಿತು’ ಎಂದರು. ದಶರಥನಿಗೆ ತಡೆಯಲಾಗಲಿಲ್ಲ. ಅವನು ದುಃಖೀಸುತ್ತಾ ನಡೆದ ಸಂಗತಿಯನ್ನು ತಿಳಿಸಿದ. ಮಗನ ಸಾವಿನಿಂದ ಕಂಗಾಲಾದ ವೃದ್ಧರಿಗೆ ಎದೆಯೊಡೆದಂತಾಯ್ತು. ನೆಲದಲ್ಲಿ ಬಿದ್ದು ಗೋಳಾಡುತ್ತಾ ಕೋಪದಿಂದ ರಾಜನಿಗೆ “ನಮ್ಮ ವೃದ್ಧಾಪ್ಯದಲ್ಲಿ ಆಸರೆಯಾಗಿದ್ದ ಮಗನನ್ನು ಕೊಂದೆಯಲ್ಲವೇ ನೀನು?! ನಿನ್ನ ವೃದ್ಧಾಪ್ಯದಲ್ಲೂ ಮಕ್ಕಳಿಂದ ದೂರವಾಗಿ ಸಾಯುವಂತಾಗಲಿ’ ಎಂದು ಶಾಪವಿತ್ತು ದುಃಖ ತಡೆಯಲಾರದೆ ಸತ್ತುಹೋದರು.
ಹೀಗಾಗಿ ದಶರಥನು ಸಾಯುವಾಗ ಅವನ ನಾಲ್ಕು ಮಕ್ಕಳಲ್ಲಿ ಯಾರೂ ಹತ್ತಿರವಿರಲಿಲ್ಲ. ರಾಮಲಕ್ಷ್ಮಣರು ವನವಾಸಕ್ಕೆ ಹೋಗಿದ್ದರೆ, ಭರತ ಶತೃಜ್ಞರು ತಮ್ಮ ತಾತನ ಊರಿಗೆ ಹೋಗಿದ್ದರು.
ಚಿಂತಾಮಣಿ