Advertisement

ಪುಟ್ಟಿಯ ಪಿಕ್‌ನಿಕ್‌ ಪ್ರಸಂಗ 

02:26 PM Dec 15, 2017 | |

ಎಳೆ ಕಂಗಳ ತುಂಬ, ನಾಳೆಯ ಬೆಳಗಿನ ಜಾವವನ್ನು ಎಷ್ಟು ಹೊತ್ತಿಗೆ ನೋಡುವೆ ಎಂಬ ಕಾತರದೊಂದಿಗೆ ಕನಸುಗಳು ತುಂಬಿವೆ. ಖುಷಿಗೆ ಪಾರವೇ ಇಲ್ಲ ಎಂಬುದಕ್ಕೆ ಈ ಚಿಣ್ಣರೇ ಅತ್ಯುತ್ತಮ ಉದಾಹರಣೆಗಳು. ಇಂದು ಹಗಲಿಡೀ ನಾಳೆಯ ಕನವರಿಕೆಗಳು. ಹೇಳಿಕೇಳಿ ಇದು ಇವರ ಮೊದಲ ಪ್ರವಾಸ ಅರ್ಥಾತ್‌ ಪಿಕ್‌ನಿಕ್‌. ಕೆಳಗೆ ಮನೆಯ ನೀತು ಅಕ್ಕ ಕರೆಮಾಡಿ, “”ಮಗಳನ್ನು ರಾತ್ರಿ ಮಲಗಿದಾಗ ಮಂಚಕ್ಕೆ ಕಟ್ಟಿ ಹಾಕು, ಇಲ್ಲದಿದ್ದರೆ ರಾತ್ರಿಯೇ ಎದ್ದು ಹೋಗಿಬಿಡಬಹುದು, ನನ್ನ ಮಗಳನ್ನು ಹಾಗೆಯೇ ಮಾಡಬೇಕಷ್ಟೆ” ಎಂದು ಹೇಳಿದಾಗ ಎಷ್ಟು ನಗಬೇಕೋ ತಿಳಿಯದಾಯಿತು! ಜೊತೆಗೆ ಮಕ್ಕಳ ನಾಳೆಯ ಕುತೂಹಲ ಎಷ್ಟಿರಬಹುದೆಂದು ಊಹಿಸಲು ಸಾಧ್ಯವಾಯಿತು. ಬಾಲ್ಯವೇ ಹೀಗೆ ತಾನೆ? ಹಲವಾರು ಪ್ರಥಮಗಳ ತವರೂರು ಬಾಲ್ಯ. ಇದರೊಂದಿಗೆ ಬೆರಗು, ಕುತೂಹಲಗಳ ತಲ್ಲಣಗಳು. ಪ್ರಥಮವಾಗಿ ಪಿಕ್‌ನಿಕ್‌ ಹೊರಟ ಮಗಳ ಮನಸ್ಸು ಕಂಡು ನಾನು ಅವಳಷ್ಟೆ ಉಲ್ಲಸಿತಳಾದೆ. 

Advertisement

ಈ ಮೊದಲೇ ತರಗತಿಗಳಿಂದ ಪಿಕ್‌ನಿಕ್‌ಗಳಿದ್ದರೂ ವಾಂತಿಯ ಅಭ್ಯಾಸಕ್ಕೆ ಹೆದರಿ ಹೋಗದೆ ಕುಳಿತಿದ್ದವಳು, ಮೊದಲು ಹೋದವರು ಹೇಳಿದ ಖುಷಿಯ ಸಂಗತಿಗಳನ್ನು ಕೇಳಿ ಹೊರಡಲು ಅಣಿಯಾಗಿ ನಿಂತಿದ್ದಾಳೆ. ಬೆಳಗಿನ ಐದಕ್ಕೆ ಶಾಲೆ ತಲುಪಬೇಕೆಂದು ಹೇಳಿದ್ದರಿಂದ ಬೇಗನೆ ಮಲಗಿದವಳಿಗೆ ನಾಳೆಯ ಆಟೋಟೋಪಗಳ ಕನವರಿಕೆಯಿಂದ ನಿದ್ರೆಯೇ ಬರುತ್ತಿಲ್ಲ. ಹನ್ನೆರಡು ಗಂಟೆಗೆ ಎಚ್ಚರವಾದವಳಿಗೆ ಬೆಳಗ್ಗೆ ನಾಲ್ಕಕ್ಕೆ ಏಳೂವರೆಗೆ ನಿದ್ರೆಯೇ ಬರಲಿಲ್ಲ.  ಈತನ್ಮಧ್ಯೆ ಆಕೆ ಹೋಗುವ ಬಸ್‌ನ ಗುಣಗಾನ. ಟಿವಿ ಇದೆ, ಫ್ರಿಡ್ಜ್ ಇದೆ, ಟಾಯ್ಲೆಟ್‌ ಕೂಡ ಇದ್ಯಂತೆ ಅದರಲ್ಲಿ ಎನ್ನಬೇಕೆ ! ಎಲ್ಲವನ್ನೂ ಮನಸಾರೆ ಆಲಿಸಿ ಇದ್ದರೂ “ಟಾಯ್ಲೆಟ್‌ಗೆ ಮಾತ್ರ ಬಸ್ಸಲ್ಲಿ ಹೋಗಬೇಡ’ ಎಂದು ಹೇಳಿ ಒಳಗೊಳಗೇ ನಕ್ಕು ಸುಮ್ಮನಾದೆ. ಪಿಕ್‌ನಿಕ್‌ನಿಂದ ಮಗುವಲ್ಲಿ ಆದ ಬದಲಾವಣೆ ಕಂಡು ಈ ಸ್ವಂತಿಕೆ ಪ್ರತಿದಿನ ಇರಬಾರದೆ ಎಂದೆನಿಸಿತು. ಶಾಲೆಯಿಂದ ಬರುವಾಗ ಗುರುಗಳು ಹೇಳಿ ಕಳುಹಿಸಿದ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಿಬಿಟ್ಟಳು. ದುಡ್ಡು ತರಲೇಬಾರದು ಎಂಬ ನಿಯಮ ಹೇಳಿದ್ದರಿಂದ ನಾನು ಕೊಟ್ಟ ಸಣ್ಣ ಮೊತ್ತವನ್ನು ನಿರಾಕರಿಸಿದಳು. “ಎಲಾ ಇವಳಾ’ ಅಂದುಕೊಂಡೆ. ಗುರುಗಳು ಹೇಳಿದ ವಸ್ತುಗಳನ್ನು ಮಾತ್ರ ಒಯ್ದಳು. ಎಂದೂ ನಾಲ್ಕಕ್ಕೆ ಏಳದವಳನ್ನು ಹೇಗಪ್ಪಾ ಸಿದ್ಧಪಡಿಸಿ ಕಳಿಸುವುದು ಎಂದು ಚಿಂತಿಸುತ್ತಿದ್ದ ನನಗೆ ಏನೂ ಕಷ್ಟವಾಗದ ರೀತಿಯಲ್ಲಿ ಆಕೆಯೇ ಎದ್ದು ಸಿದ್ಧವಾಗತೊಡಗಿದಳು. ಒಂದು ಪುಟ್ಟ ಪ್ರಯಾಣಕ್ಕಾಗಿ ಎನಿತು ಇಂಥ ಬದಲಾವಣೆಯ ಪವಾಡ ಎಂದು ಯೋಚಿಸಲು ನನಗೆ ಸಮಯ ಸಿಗಲಿಲ್ಲ!  ಪ್ರತಿ ಮನುಷ್ಯನ ಜೀವನದಲ್ಲಿ ಬಾಲ್ಯವೆಂಬುದು ಸುಮಧುರ ಭಾವಗೀತೆ. ಮತ್ತೆ ಮರಳಿ ಬಾರದ ಈ ಅವಿಸ್ಮರಣೀಯ ಕ್ಷಣಗಳನ್ನು ನೆನಪಲ್ಲಿ ಮಾತ್ರ ಹಿಡಿದಿಟ್ಟುಕೊಳ್ಳಬೇಕು.    

ನಮ್ಮ ಬಾಲ್ಯದಲ್ಲಿ ನಾವು ಹೋಗುತ್ತಿದ್ದ ಶಾಲೆಯಿಂದ ಐದನೇ ತರಗತಿಯ ಅನಂತರವೇ ಪ್ರವಾಸಕ್ಕೆ ಅನುಮತಿ. ಸರಕಾರಿ ಕೆಂಪು ಬಸ್ಸಿನಲ್ಲಿ ನಮ್ಮ ಪ್ರವಾಸ ಪ್ರತಿ ವರುಷ ಇರುತ್ತಿತ್ತು. ಹೆಚ್ಚಿನ ಸಲ ಮೈಸೂರು ಮಾತ್ರವೇ ಇರುತ್ತಿತ್ತು. ನಮ್ಮ ಪ್ರವಾಸಗಳೆಲ್ಲಾ ಹೆಚ್ಚು ಕಡಿಮೆ ಚಳಿಗಾಲದಲ್ಲಿ ಇರುತ್ತಿದ್ದರಿಂದ ಬೆಳಗಿನ ಜಾವದ ಥರಗುಟ್ಟುವ ಚಳಿಯಲ್ಲಿ ಅಪ್ಪನ ಕೈ ಹಿಡಿದು ಬಸ್ಸಿಗೆ ಸಾಗುತ್ತಿದ್ದ ನೆನಪು ಮಾತ್ರ ನಿನ್ನೆಯೋ ಮೊನ್ನೆಯೋ ನಡೆದಂತೆ ಬೆಚ್ಚಗಿದೆ. ನಾವು ಪ್ರವಾಸ ಹೋಗುವ ಸಂದರ್ಭದಲ್ಲಿ ನಮ್ಮ ಶಾಲೆಯ ಮಕ್ಕಳಲ್ಲಿ ಹೀಗೊಂದು ಅಭ್ಯಾಸವಿತ್ತು.ಅಂಗೈಯಗಲದಷ್ಟು ಚಿಕ್ಕದಾಗಿ ಪೇಪರ್‌ ಹರಿದು ತುಂಡು ಮಾಡಿ ನಮ್ಮ ಶಾಲೆಯ ಸಂಪೂರ್ಣ ಹೆಸರು ಬರೆದು ಇಂತಹ ಶಾಲಾ ಮಕ್ಕಳ ಪ್ರವಾಸಕ್ಕೆ ಶುಭವಾಗಲಿ ಎಂದು ಬರೆಯುತ್ತಿದ್ದೆವು. ಪ್ರವಾಸ ಇದೆ ಎಂದು ಹೇಳಿದಂದಿನಿಂದಲೇ ಬರೆದಿಡುತ್ತಿದ್ದ ನಾವು ಸುಮಾರು ಸಾವಿರಕ್ಕಿಂತಲೂ ಅಧಿಕ ಚೀಟಿ ಮಾಡಿಡುತ್ತಿದ್ದೆವು. ಪುಸ್ತಕ ಹರಿದು ಈ ರೀತಿ ಬರೆಯುವಾಗ ಅಪ್ಪ ಅಮ್ಮ ಬೈಯ್ಯುತ್ತಿದ್ದರೂ ಲೆಕ್ಕಿಸುತ್ತಿರಲಿಲ್ಲ. ಸಹಪಾಠಿಗಳೊಂದಿಗೆ ಜಾಸ್ತಿ ಬರೆಯುವ ಪೈಪೋಟಿ. ಜನ ಸಾಗುತ್ತಿದ್ದ ಕಡೆಗಳಲ್ಲಿ ಎಸೆದು ಬಿಡುತ್ತಿದ್ದೆವು. ಪ್ರವಾಸ ಹೋದ ಕಡೆ ಪ್ರೇಕ್ಷಣೀಯ ಸ್ಥಳಗಳಿರುವಲ್ಲಿ ಅಂಗಡಿ ಮುಂಗಟ್ಟುಗಳು ಹೆಚ್ಚಾಗಿ ಇರುತ್ತಿದ್ದವು. ದಟ್ಟ ಜನಸಂದಣಿಯ ನಡುವೆ ನಾವೆಲ್ಲ ಗುಂಪಿನಲ್ಲಿರುವಾಗ ಅಂಗಡಿಗಳ ಮೂಲೆಯಲ್ಲಿಟ್ಟಿರುವ ವಸ್ತುಗಳನ್ನು ಎಗರಿಸಿಬಿಡುವ, ಆಟವೆಂದೇ ಪರಿಗಣಿಸಿದ ಈ ಸಂಗತಿಯನ್ನು ಮಾಡುತ್ತಿದ್ದೆವು. ಇದನ್ನೆಲ್ಲ ಆಗ ಮನರಂಜನೆಗಾಗಿ ಮಾಡುತ್ತಿದ್ದೆವು ಹೊರತು ಕದಿಯುವ ಅಭ್ಯಾಸದಿಂದ ಮಾಡುತ್ತಿರಲಿಲ್ಲ. ಹೀಗೆ ಒಂದು ಸಲ ಎಗರಿಸುವಾಗ ಹುಡುಗಿಯೊಬ್ಬಳು ಸಿಕ್ಕಿಬಿದ್ದು, ಗುರುಗಳಿಂದ ನಾಮಾರ್ಚನೆಯಾದ ಮೇಲೆ ಮುಂದೆಂದೂ ಈ ಧೈರ್ಯ ಮಾಡಲಿಲ್ಲ. ಬಸ್ಸಿನಲ್ಲಿ ಹಾಡು ಹಾಕುವ ಪರಿಪಾಠ ಇರಲಿಲ್ಲವಾದ್ದರಿಂದ ಅಂತ್ಯಾಕ್ಷರಿ, ಒಗಟು ಇವೆಲ್ಲ ಸಾಮಾನ್ಯವಾಗಿತ್ತು. ಇವೆಲ್ಲದರ ಮಧ್ಯೆ ನಾನಿದ್ದ ಶಾಲೆಯಲ್ಲಿ ಪ್ರವಾಸ ಮುಗಿಸಿ ಬಂದ ವಾರದೊಳಗೆ ಅದರ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸುತ್ತಿದ್ದರು. ಹಾಗಾಗಿ ಪೆನ್‌, ಪುಸ್ತಕ ನಮ್ಮ ಕೈಯಲ್ಲಿ ಕಡ್ಡಾಯ ಇರುತ್ತಿತ್ತು. ಬೇಲೂರು, ಹಳೇಬೀಡು ಹೀಗೆ ಹೋದಲ್ಲಿ ಗೈಡ್‌ ಹೇಳುತ್ತಿದ್ದ ಕಥೆಯನ್ನು ಬರೆಯುವುದರೊಂದಿಗೆ, ಹೊತ್ತು ಹೊತ್ತಿಗೆ ಹೋದ ಹೊಟೇಲ್ ಹೆಸರು, ನಿಗದಿತ ಸಮಯ ಎಲ್ಲವನ್ನೂ ಚಾಚೂತಪ್ಪದೆ ಬರೆದುಕೊಳ್ಳುತ್ತಿದ್ದೆವು. ಬಂದ ಮೇಲೆ ಪ್ರಬಂಧ ಬರೆಯುವ ಉಮೇದು ಇರುತ್ತದೆ ಅಲ್ಲವೆ? ಈ ಅಭ್ಯಾಸವನ್ನು ಪ್ರತಿ ಶಾಲೆಯ ಗುರುಗಳು ಪಾಲಿಸಿದರೆ ಮಕ್ಕಳ ಪ್ರಗತಿಗೂ ಸಹಾಯವಾಗಬಹುದು.

ನನ್ನ ಮಗುವಿನ ಪಿಕ್‌ನಿಕ್‌ ವಿಚಾರಕ್ಕೂ, ನನ್ನ ಕಥನಕ್ಕೂ ಅಸಂಗತ ವ್ಯತ್ಯಾಸಗಳಿದ್ದರೂ ಮಗುವಿನ ಮನಸ್ಸಿನ ಭಾವನೆಗಳಲ್ಲಿ ಹೆಚ್ಚು ವ್ಯತ್ಯಾಸ ಇರಲಿಕ್ಕಿಲ್ಲ ಅಲ್ಲವೇ? ಭಾವನೆಗಳು ಅಂದಿಗು ಇಂದಿಗೂ ಒಂದೇ ತಾನೇ? ಯಾವಾಗ ನಾಳೆಯಾಗುವುದೋ ಎಂಬ ಕಾತರತೆ, ಎಚ್ಚರವಾಗದಿದ್ದರೆ ಎಂಬ ಅವ್ಯಕ್ತ ಭಯ, ಸಹಪಾಠಿಗಳನ್ನೆಲ್ಲಾ ಹೊರಡಿಸುವುದು, ಬೇಕಾದಂತೆ ಹರಟಬಹುದು ಎಂಬ ಆಲೋಚನೆ ಅಂದು ನನಗಿದ್ದ ಭಾವನೆಗಳೇ ಈಗ ಮಗಳಲ್ಲಿಯೂ ಹರಿದಾಡಿದ್ದು ಸುಳ್ಳಲ್ಲ. ಕಾಲ ಬದಲಾಗಿದೆ ಎಂದು ನಾವು ಪದೇ ಪದೇ ಆಡಿಕೊಂಡರೂ ಬದಲಾಗಿರುವುದು ನಾವುಗಳೇ ಅಲ್ಲವೇ! ಅಂದು ನಾವು ಚಳಿಯಲ್ಲಿ ನಡುಗಿಕೊಂಡು ನಡೆದು ಹೋದರೆ, ಇಂದು ಮಗುವಿಗೆ ಎಲ್ಲಿ ಚಳಿಯಾಗಿ ಬಿಡುವುದೋ ಎಂದು ಸಂಪೂರ್ಣ ಬಟ್ಟೆ ಧರಿಸಿ ಸ್ವಂತ ವಾಹನದಲ್ಲಿ ಕರೆದುಕೊಂಡು ಹೋಗುತ್ತೇವೆ. ಬಸ್‌ನಲ್ಲಿ ಅಂತ್ಯಾಕ್ಷರಿಗೆ ಅವಕಾಶವಿಲ್ಲ ಸಂಪೂರ್ಣ ವೀಡಿಯೋ ಕೋಚ್‌. ಇದು ಹೇಳ ಹೊರಟರೆ ಮುಗಿಯದಷ್ಟಿರುವ ವ್ಯತ್ಯಾಸಗಳ ನಡುವೆ ಪಿಕ್‌ನಿಕ್‌ ಮುಗಿಸಿ ಬಂದ ಮಗಳು ಸಂತಸದಿಂದಿದ್ದಾಳೆ. ಕುಣಿದು ಕುಪ್ಪಳಿಸಿದ ಕ್ಷಣಗಳು ಅವಳಿಗೂ ಅವಿಸ್ಮರಣೀಯ. “ಬಸ್ಸಲ್ಲಿ ಟಾಯ್ಲೆಟ್ ಹೇಗಿತ್ತು ಮಗಳೇ’ ಎಂದರೆ ಈಗ ನಗುವ ಸರದಿ ಅವಳದು.

ಫೊಟೊ : ಗಣೇಶ ಎಸ್‌. ಹೆಗ್ಡೆ
ಸಂಗೀತ ರವಿರಾಜ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next