ಸಿದ್ದಾಪುರವೆಂಬ ಊರಿನಲ್ಲಿ ಅನನ್ಯ ಎಂಬ ಪುಟ್ಟ ಬಾಲಕಿಯಿದ್ದಳು. ಅವಳನ್ನು ಮನೆಯಲ್ಲಿ ಎಲ್ಲರೂ ಪ್ರೀತಿಯಿಂದ ಪುಟ್ಟಿ ಎಂದು ಕರೆಯುತ್ತಿದ್ದರು. ಅವಳಿಗೆ ನಾಯಿ ಎಂದರೆ ತುಂಬಾ ಇಷ್ಟ. ಅದಕ್ಕೇ ಅಪ್ಪ ಒಂದು ದಿನ ಒಂದು ಮುದ್ದಾದ ನಾಯಿಮರಿಯನ್ನು ಮನೆಗೆ ತಂದರು. ಪುಟ್ಟಿಗೆ ಖುಷಿಯೋ ಖುಷಿ. ಅದಕ್ಕೆ ಟಾಮಿ ಎಂದು ನಾಮಕರಣ ಮಾಡಿದಳು. ಬಹಳ ಬೇಗ ಪುಟ್ಟಿ ಮತ್ತು ಟಾಮಿಗೆ ದೋಸ್ತಿ ಬೆಳೆಯಿತು.
ಪುಟ್ಟಿ ಶಾಲೆಗೆ ಹೋಗುವಾಗ ನಾಯಿ ಅವಳನ್ನು ಒಂದಷ್ಟು ದೂರ ಹಿಂಬಾಲಿಸಿಕೊಂಡುಬರುತ್ತಿತ್ತು. ಸಂಜೆ ಅವಳು ಬರುವವರೆಗೂ ಟಾಮಿ ಕಾದು ಕುಳಿತಿರುತ್ತಿತ್ತು. ಅವಳನ್ನು ಕಂಡ ಕೂಡಲೆ ಖುಷಿ ತಡೆಯಲಾಗದೆ ಅವಳ ಮೇಲೆಲ್ಲಾ ಚಂಗನೆ ನೆಗೆದು ಕುಪ್ಪಳಿಸುತ್ತಿತ್ತು. ಪುಟ್ಟಿಗೂ ಅಷ್ಟೆ ಟಾಮಿಯನ್ನು ಬಿಟ್ಟಿರಲಾಗುತ್ತಿರಲಿಲ್ಲ. ಅವಳು ಭಾನುವಾರ ಬರುವುದನ್ನೇ ಕಾಯುತ್ತಿದ್ದಳು. ಏಕೆಂದರೆ ಪೂರ್ತಿ ದಿನವನ್ನು ಟಾಮಿ ಜತೆ ಕಳೆಯಬಹುದಲ್ಲ ಎನ್ನುವ ಕಾರಣಕ್ಕೆ.
ಒಂದು ದಿನ ಟಾಮಿ ನಾಪತ್ತೆಯಾಯಿತು. ಅಪ್ಪ ಎಷ್ಟು ಹುಡುಕಿದರೂ ನಾಯಿ ಸಿಗಲೇ ಇಲ್ಲ. ಪುಟ್ಟಿಗೆ ಅಳುವೇ ಬಂದುಬಿಟ್ಟಿತು. ಊಟ ತಿಂಡಿ ನಿದ್ದೆ ಶಾಲೆ ಯಾವುದರಲ್ಲೂ ಅವಳಿಗೆ ಆಸಕ್ತಿಯಿರಲಿಲ್ಲ. ಮೂರು ಹೊತ್ತೂ ಟಾಮಿಯದೇ ಧ್ಯಾನ. ಇವಳ ಸ್ಥಿತಿ ನೋಡಿ ಅಮ್ಮನಿಗೆ ಗಾಬರಿಯಾಯಿತು. ಪಕ್ಕದ ಬೀದಿಯವರನ್ನು ಕೇಳಿದರೂ ಟಾಮಿಯ ಸುಳಿವು ಸಿಗಲಿಲ್ಲ. ಪುಟ್ಟಿ ದಿನವೂ ದೇವರಲ್ಲಿ ಟಾಮಿಯನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸುವಂತೆ ಬೇಡಿಕೊಳ್ಳತೊಡಗಿದಳು. ಅವಳ ಪ್ರಾರ್ಥನೆ ಕೇಳಿ ಸ್ನೇಹಿತೆಯರೆಲ್ಲಾ ನಕ್ಕರು. ಅದನ್ನು ಕಂಡು ಪುಟ್ಟಿಗೆ ಕೋಪ ಬಂದಿತು. ಒಂದು ದಿನ ಅವರ ಜೊತೆ ಮಾತು ಬಿಟ್ಟಳು.
ಮರುದಿನ ಪುಟ್ಟಿ ಶಾಲೆಗೆ ಹೊರಡುವ ಹೊತ್ತಿನಲ್ಲಿ ಮನೆಯ ಮುಂದಿನಿಂದ ಅಪ್ಪ ‘ಪುಟ್ಟಿ ನೋಡು ಯಾರು ಬಂದಿದ್ದಾರೆ ಅಂತ’ ಎಂದು ಕೂಗಿದ್ದು ಕೇಳಿತು. ಅವಳು ತಿಂಡಿಯನ್ನು ಅರ್ಧಕ್ಕೇ ಬಿಟ್ಟು ಓಡಿ ಬಂದಳು. ನೋಡಿದರೆ ಟಾಮಿ ಮನೆಯ ಅಂಗಳದಲ್ಲಿ ಕುಣಿದಾಡುತ್ತಿದ್ದ. 2 ದಿನಗಳ ಹಿಂದೆ ಬೆಕ್ಕನ್ನು ಅಟ್ಟಿಸಿಕೊಂಡು ಹೋಗಿದ್ದ ಟಾಮಿಗೆ ವಾಪಸ್ ಬರಲು ಮನೆಯ ದಾರಿ ತಿಳಿಯದೇಹೋಗಿತ್ತು. ಟಾಮಿಯನ್ನು ಕಂಡೊಡನೆ ಪುಟ್ಟಿ ಅದನ್ನು ಕೈಗೆತ್ತಿಕೊಂಡು ಎದೆಗೆ ಅವುಚಿಕೊಂಡಳು.
ಅನನ್ಯಾ, ಸಿದ್ದಾಪುರ