Advertisement
ಕಠಾರ ಪುತ್ತೂರು ತಾಲೂಕಿಗೆ ಸೇರಿದ ಒಂದು ಪ್ರದೇಶ. ಈ ಪ್ರದೇಶ ಎಷ್ಟು ಸುಂದರವೋ ಅಷ್ಟೇ ಅಪಾಯಕಾರಿಯೂ ಆಗಿದೆ. ನರಿಮೊಗರು, ಕೋಡಿಂಬಾಡಿ ಮತ್ತು ಹಿರೇಬಂಡಾಡಿ ಗ್ರಾಮ ಪಂಚಾಯತ್‌ನ ವ್ಯಾಪ್ತಿಯಲ್ಲಿ ಬರುವ ಈ ಪ್ರದೇಶದಲ್ಲಿ ಹರಿಯುವ ನೀರು 10 ವರ್ಷಗಳಲ್ಲಿ ಹತ್ತಾರು ಜೀವಗಳನ್ನು ಸೆಳೆದುಕೊಂಡಿದೆ. ಶಾಂತಿಗೋಡು ಗ್ರಾಮಕ್ಕೆ ಸೇರುವ ಕಠಾರ ಪ್ರದೇಶವು ಪುತ್ತೂರಿನಿಂದ 7 ಕಿ.ಮೀ. ದೂರವಿದೆ. ಪುರುಷರಕಟ್ಟೆ- ಆನಡ್ಕ ರಸ್ತೆಯಿಂದ ದಾರಿಯಿದೆ. ಬೆಳ್ಳಿಪ್ಪಾಡಿ ಗ್ರಾಮದ ದಾರಂದಕುಕ್ಕು ಕಡೆಯಿಂದಲೂ ಇಲ್ಲಿಗೆ ಬರಬಹುದು.
ಗುಂಪಾಗಿ ಮಧ್ಯಾಹ್ನ, ಸಂಜೆಯ ಸಮಯದಲ್ಲಿ ಬರುವ ಯುವಕರು ಅಪಾಯದ ಅರಿವಿದ್ದರೂ ಗಾಂಜಾ, ಅಫೀಮು ಸೇವನೆ, ಮದ್ಯಪಾನ ನಡೆಸಿ ನೀರಿನಲ್ಲಿ ಈಜಾಡುತ್ತಾರೆ. ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ನೀರಿಗೆ ಇಳಿಯದಂತೆ ಸ್ಥಳೀಯರು ಎಷ್ಟೇ ಎಚ್ಚರ ವಹಿಸುವಂತೆ ತಿಳಿಸಿದರೂ ಕಿವಿಗೊಡದೆ ಅಪಾಯ ತಂದುಕೊಳ್ಳುತ್ತಿದ್ದಾರೆ. ವಿಶಾಲವಾದ ಕಠಾರದ ಕೆಲ ಭಾಗಗಳಲ್ಲಿ ಮದ್ಯದ ಬಾಟಲಿಗಳ ರಾಶಿ, ಗುಟ್ಕಾ ಪಾಕೆಟ್ ರಾಶಿ, ಕೃತಕವಾಗಿ ಕಲ್ಲುಗಳ ಸಹಾಯದಿಂದ ತಯಾರಿಸಿದ ಒಲೆ, ಪಕ್ಕದಲ್ಲಿ ಬಿದ್ದಿರುವ ಖಾರದ ಪುಡಿ, ಉಪ್ಪಿನ ಪ್ಯಾಕೆಟ್‌ಗಳು ಇಲ್ಲಿನ ಪರಿಸ್ಥಿತಿಯನ್ನು ವಿವರಿಸುತ್ತವೆ.
Related Articles
ಬೆಳ್ಳಿಪ್ಪಾಡಿ ಗ್ರಾಮದ ಪರಿಸರದಲ್ಲಿ ಅಪಾಯದ ಎಚ್ಚರಿಕೆ ಫಲಕವನ್ನು ಅಳವಡಿಸಲಾಗಿದ್ದರೂ ಯಾವುದೇ ಬದಲಾವಣೆಗಳಾಗಿಲ್ಲ. ಯುವಕರು ಇಲ್ಲಿ ಬಂದು ತಮ್ಮ ಪಾಲಿಗೆ ತಾವು ಮೋಜು ಮಸ್ತಿಯಲ್ಲಿ ತೊಡಗಿಕೊಂಡಿರುತ್ತಾರೆ. ಪುತ್ತೂರಿನ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.
Advertisement
ಪೊಲೀಸ್ ನಿಗಾ ಅಗತ್ಯಪೊಲೀಸ್ ಇಲಾಖೆಯಿಂದಲೂ ಇಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು. ಅನೈತಿಕ ಚಟುವಟಿಕೆ ನಿಯಂತ್ರಿಸಲು ಪೊಲೀಸ್ ಸಿಬಂದಿ ಇಲ್ಲಿ ಗಸ್ತು ತಿರುಗುವ ಆವಶ್ಯಕತೆ ಇದೆ. ಇಲ್ಲಿ ಹೆಚ್ಚಿನ ಸಾವು ನಡೆದಿರುವುದರಿಂದ ಈಜು ನಿಷೇಧಿತ ಪ್ರದೇಶ’ವನ್ನಾಗಿ ಘೋಷಿಸುವುದು ಉತ್ತಮ. ಇಲ್ಲವಾದಲ್ಲಿ ಇನ್ನಷ್ಟು ಜನ ನೀರುಪಾಲಾಗುವ ಭೀತಿ ಇದೆ. ಮುಂಜಾಗ್ರತಾ ಕ್ರಮಕ್ಕೆ ಸೂಚಿಸುವೆ
ಕಠಾರದಲ್ಲಿ ಸಂಭವಿಸುತ್ತಿರುವ ದುರ್ಘಟನೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಅಪಾಯಕಾರಿ ಸ್ಥಳ ಗುರುತಿಸಿ ಆ ಪ್ರದೇಶದಲ್ಲಿ ಸಾರ್ವಜನಿಕರು ನೀರಿಗೆ ಇಳಿಯದಂತೆ ತಡೆಬೇಲಿ ಹಾಕಲು ಕ್ರಮ ಕೈಗೊಳ್ಳಲಾಗುವುದು. ಸ್ಥಳೀಯ ಗ್ರಾ.ಪಂ.ನ ಪಿಡಿಒ, ಅಧ್ಯಕ್ಷರ ಸಭೆಯನ್ನು ನಡೆಸಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಪೊಲೀಸ್ ಇಲಾಖೆಗೂ ಸೂಚನೆ ನೀಡಲಾಗುವುದು.
-ಸಂಜೀವ ಮಠಂದೂರು,
ಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರ ದುಶ್ಚಟ, ಸೆಲ್ಫೀ ಹುಚ್ಚು ಕಾರಣ
ಸ್ಥಳೀಯ ಯುವಕರು ಯಾರೂ ಇಲ್ಲಿಗೆ ಬರುವುದಿಲ್ಲ. ಪುತ್ತೂರು ಪೇಟೆ ಕಡೆಯಿಂದ ಯುವಕರ ತಂಡಗಳು ನನ್ನ ಮನೆಯ ಹತ್ತಿರದಿಂದ ನಡೆದು ಹೋಗುತ್ತವೆ. ನೀರಿಗೆ ಇಳಿಯಬೇಡಿ, ಸುಳಿ ಇರುತ್ತದೆ. ಅಪಾಯಕಾರಿಯಾದ ಸ್ಥಳ ಎಂದು ಹೇಳಿದರೂ ಕೇಳುವುದಿಲ್ಲ. ನಾವು ಇಲ್ಲಿಗೆ ಮೊದಲು ಬಂದಿರುವುದು ಅಲ್ಲ, ನಮಗೂ ಗೊತ್ತಿದೆ ಎಂದು ಹೇಳಿ ನಮ್ಮ ಮುಂದೆಯೇ ನೀರಿಗೆ ಇಳಿಯುತ್ತಾರೆ. ದುಶ್ಚಟ ಮತ್ತು ಸೆಲ್ಫೀ ಹುಚ್ಚು ಇಂತಹ ದುರ್ಘಟನೆಗಳಿಗೆ ಕಾರಣ ಎನ್ನಬಹುದು.
– ವಿಟ್ಠಲ ಶೆಟ್ಟಿ ಕಠಾರ
ಸ್ಥಳೀಯರು