Advertisement

ಕೋಟಿ -ಚೆನ್ನಯ ಜೋಡುಕರೆ ಕಂಬಳ: ಭರದಿಂದ ಸಿದ್ಧಗೊಳ್ಳುತ್ತಿದೆ ಕಣ

06:24 AM Jan 05, 2019 | Team Udayavani |

ನಗರ : ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ಜ. 19ರಂದು ನಡೆಯುವ 26ನೇ ವರ್ಷದ ಹೊನಲು ಬೆಳಕಿನ ಕೋಟಿ -ಚೆನ್ನಯ ಜೋಡುಕರೆ ಕಂಬಳ ಕೂಟಕ್ಕೆ ಕರೆ ನಿರ್ಮಾಣ ಕಾರ್ಯ ಭಾಗಶ: ಪೂರ್ಣಗೊಂಡಿದೆ.

Advertisement

ಕಂಬಳ ಕರೆಗಳನ್ನು ಹದಗೊಳಿಸಿ ಸಮಗೊಳಿಸಲಾಗಿದೆ. ಕರೆಗಳಲ್ಲಿ ನೀರು ನಿಲ್ಲಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಜೋಡುಕರೆಗಳನ್ನು ಇನ್ನಷ್ಟು ಪಕ್ವಗೊಳ್ಳುವ ನಿಟ್ಟಿನಲ್ಲಿ ಕಂಬಳ ಪೂರ್ವವಾಗಿ ಓಟದ ಕೋಣಗಳನ್ನು ಕರೆಗಳಲ್ಲಿ ಓಡಿಸುವ ಕುದಿ ಕಂಬಳವನ್ನು ನಡೆಸಲಾಗುತ್ತದೆ. ಇದನ್ನು ಜನಪದ ತುಳು ಭಾಷೆಯಲ್ಲಿ ಕಂಬುಳೊದ ಕುದಿ ಗಿಡಪುನ ಎಂದು ಕರೆಯಲಾಗುತ್ತದೆ.

ಜಿಲ್ಲೆಯಲ್ಲಿ ನಡೆಯುವ ಕಂಬಳಗಳಲ್ಲಿ ಪುತ್ತೂರಿನ ಕಂಬಳಕ್ಕೆ ವಿಶೇಷ ಗೌರವವಿದೆ. ಸುಮಾರು 25 ಲಕ್ಷ ರೂ. ವೆಚ್ಚ ನಿರ್ವಹಣೆಯೊಂದಿಗೆ ಲಕ್ಷಕ್ಕೂ ಮಿಕ್ಕಿ ಕಂಬಳ ಪ್ರೇಮಿಗಳು ಕೋಟಿ -ಚೆನ್ನಯ ಕಂಬಳ ಕೂಟದಲ್ಲಿ ಭಾಗವಹಿಸುತ್ತಾರೆ. ಸುಮಾರು 150ಕ್ಕೂ ಹೆಚ್ಚು ಜತೆ ಓಟದ ಕೋಣಗಳು ಪಾಲ್ಗೊಳ್ಳುವ ನಿರೀಕ್ಷೆ ಇರುವುದು ಇಲ್ಲಿನ ವಿಶೇಷ. ಹೊನಲು ಬೆಳಕಿನ ಕಂಬಳ ಕೂಟವನ್ನು ವೀಕ್ಷಿಸಲು ದೇಶ -ವಿದೇಶಗಳಿಂದಲೂ ಕಂಬಳಾಭಿಮಾನಿಗಳು ಪಾಲ್ಗೊಳ್ಳುತ್ತಾರೆ.

ಗಣ್ಯರ ಆಗಮನದ ನಿರೀಕ್ಷೆ
ಆರಂಭದ ದಿನ ರಾತ್ರಿ ಸಭಾ ಕಾರ್ಯಕ್ರಮವು ವಿಶೇಷ ಗಣ್ಯರೊಂದಿಗೆ ನಡೆಯುವುದು ಇಲ್ಲಿನ ವಿಶೇಷ. ಈ ಬಾರಿ ರಾಜ್ಯದ ಮುಖ್ಯಮಂತ್ರಿಗಳು ಕಂಬಳ ಕೂಟದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯೂ ಕುತೂಹಲತೆಯನ್ನು ಹೆಚ್ಚಿಸಿದೆ. ಜತೆಗೆ ಪ್ರಸಿದ್ಧ ಚಲನಚಿತ್ರ ನಟ, ನಟಿಯರು, ರಾಜಕಾರಣಿಗಳು ವರ್ಷಂಪ್ರತಿಯಂತೆ ಪಾಲ್ಗೊಳ್ಳಲಿದ್ದಾರೆ ಎಂದು ಕಂಬಳ ಸಮಿತಿಯ ಕಾರ್ಯದರ್ಶಿ ದಿನೇಶ್‌ ಪಿ.ವಿ. ತಿಳಿಸಿದ್ದಾರೆ.

ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ, ಉದ್ಯಮಿ ಎನ್‌. ಮುತ್ತಪ್ಪ ರೈ ಅವರ ನೇತೃತ್ವದಲ್ಲಿ ನಡೆಯುವ ಕೋಟಿ -ಚೆನ್ನಯ ಜೋಡುಕರೆ ಕಂಬಳ ಕೂಟ ಸಮಿತಿಯ ಗೌರವಾಧ್ಯಕ್ಷರಾಗಿ ಮಾಜಿ ಸಚಿವ ವಿನಯಕುಮಾರ್‌ ಸೊರಕೆ, ಅಧ್ಯಕ್ಷರಾಗಿ ಚಂದ್ರಹಾಸ ಶೆಟ್ಟಿ, ಸಂಚಾಲಕರಾಗಿ ಎನ್‌. ಸುಧಾಕರ ಶೆಟ್ಟಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next