Advertisement

ತಂತ್ರಜ್ಞಾನ-ಅಧ್ಯಾತ್ಮ ಮಿಳಿತವಾದಾಗ ಬೆಳವಣಿಗೆ

09:01 AM Jan 13, 2019 | |

ನೆಹರೂನಗರ : ಭಾರತದ ಸಂಪನ್ನತೆ, ಸಮೃದ್ಧಿ ಹಾಗೂ ಕಲ್ಯಾಣ ವೆಂದರೆ ಅದು ಪ್ರಪಂಚದ ಉನ್ನತಿಕೆ ಹಾಗೂ ಉತ್ಕೃಷ್ಟತೆ ಎನ್ನುವುದನ್ನು ಸ್ವತಃ ಆಚರಿಸಿ ತೋರಿಸಿದ ರಾಷ್ಟ್ರ ಭಾರತ. ವ್ಯಕ್ತಿಯ ವಿಕಾಸದಿಂದ ಕುಟುಂಬದ ವಿಕಾಸ, ಅದರಿಂದ ಸಮಾಜದ ಬೆಳವಣಿಗೆ ಹಾಗೂ ತನ್ಮೂಲಕ ರಾಷ್ಟ್ರದ ಬೆಳವಣಿಗೆ ಎಂದು ಮೈಸೂರು ಮಹಾರಾಣಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಹಾಗೂ ಎಬಿವಿಪಿ ರಾಷ್ಟ್ರೀಯ ಉಪಾಧ್ಯಕ್ಷ ಡಾ| ಬಿ.ವಿ. ವಸಂತ ಕುಮಾರ್‌ ಹೇಳಿದರು.

Advertisement

ವಿವೇಕಾನಂದ ವಿದ್ಯಾವರ್ಧಕ ಸಂಘ ಶನಿವಾರ ಆಯೋಜಿಸಿದ್ದ ವಿವೇಕಾನಂದ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು. ವಿವೇಕಾನಂದರು ಜಾತೀಯತೆ, ಅಸ್ಪೃಶ್ಯತೆ, ಒಡಕು ದೂರವಾಗಿಸುವ ಆಲೋಚನೆ ಹೊಂದಿದ್ದರು. ತಂತ್ರಜ್ಞಾನ, ವಿಜ್ಞಾನದೊಂದಿಗೆ ಅಧ್ಯಾತ್ಮ ಸೇರಿದಾಗ ಅದ್ಭುತ ಬೆಳವಣಿಗೆ ಸಾಧ್ಯ ಎಂದಿದ್ದರು. ಆದರೆ ಅಧ್ಯಾತ್ಮ ಹಾಗೂ ವಿಜ್ಞಾನ ಬೇರೆ ಬೇರೆ ಎನ್ನುವುದು ದುರಂತ ಎಂದರು.

ವಿವೇಕ ಶಕ್ತಿಯಿಂದ ಚೈತನ್ಯ
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ.ಎಂ. ಕೃಷ್ಣ ಭಟ್ ಮಾತನಾಡಿ, ಮೊಬೈಲ್‌ಗೆ ಹೇಗೆ ಒಂದು ಪವರ್‌ ಬ್ಯಾಂಕ್‌ ಉಪಯುಕ್ತ ಎನಿಸುತ್ತದೆಯೋ ಅದೇ ರೀತಿ ಯುವಶಕ್ತಿಗೆ ಸ್ವಾಮಿ ವಿವೇಕಾನಂದರು ಪವರ್‌. ವಿವೇಕಾನಂದ ಜಯಂತಿ ನಮ್ಮ ಶಕ್ತಿಯನ್ನು ಮತ್ತಷ್ಟು ಚೈತನ್ಯಗೊಳಿಸುತ್ತದೆ ಎಂದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರು, ವಿವೇಕಾನಂದ ಸಂಸ್ಥೆಗಳ ಆಡಳಿತ ಮಂಡಳಿ ಪ್ರಾಚಾರ್ಯರು, ಸಿಬಂದಿ, 8 ಸಾವಿರ ವಿದ್ಯಾರ್ಥಿಗಳು ಮತ್ತು 600ರಷ್ಟು ಆಹ್ವಾನಿತರು ಉಪಸ್ಥಿತರಿದ್ದರು. ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಡಾ| ಸುಧಾ ರಾವ್‌ ಸ್ವಾಗತಿಸಿ, ಕೋಶಾಧಿಕಾರಿ ಸುರೇಂದ್ರ ಕಿಣಿ ವಂದಿಸಿದರು. ಉಶಾಕಿರಣ್‌, ಗುರುಪ್ರಸಾದ್‌ ಕಾರ್ಯಕ್ರಮ ನಿರೂಪಿಸಿದರು.

ಅಧ್ಯಾತ್ಮದಿಂದ ಆತ್ಮಕಲ್ಯಾಣ
ಪ್ರತಿಯೊಬ್ಬ ಮನುಷ್ಯ ಅಧ್ಮಾತ್ಮದತ್ತ ಒಲವು ತೋರಿದಾಗ ಮಾತ್ರ ಆತ್ಮಕಲ್ಯಾಣ ಸಾಧ್ಯ ಎಂದರು. ವಿವೇಕಾನಂದರು ಕೇವಲ ಹಿಂದೂ ಧರ್ಮಕ್ಕೆ ಅಥವಾ ಭಾರತಕ್ಕೆ ಸೀಮಿತರಲ್ಲ, ಬದಲಾಗಿ ವಿಶ್ವಧರ್ಮಕ್ಕೆ ಸೇರಿದವರು. ಈ ಕಾರಣಕ್ಕಾಗಿಯೇ ವಿವೇಕಾನಂದರನ್ನು ಜಗತ್ತೇ ಆರಾಧಿಸುತ್ತದೆ. ಆದರೆ ದುರಂತವೆಂದರೆ ಇಂತಹ ಪುಣ್ಯಪುರುಷನ ಜನ್ಮಭೂಮಿಯಲ್ಲಿ ಇಂದು ಅಂಕ ಆಧಾರಿತ ಶಿಕ್ಷಣ ಹಾಗೂ ದುಡ್ಡಿನ ಆಧಾರಿತ ಉದ್ಯೋಗವನ್ನು ಪಡೆಯುವ ದಾರಿಯನ್ನು ತೋರಿಸಿಕೊಡಲಾಗುತ್ತಿದೆ ಎಂದು ಡಾ| ಬಿ.ವಿ. ವಸಂತ ಕುಮಾರ್‌ ವಿಷಾದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next