ಪುತ್ತೂರು: ಬೆಂಗಳೂರಿನ ಹಿಂದೂ ಯುವತಿ, ಯುವಕ ಮತ್ತು ಮುಸ್ಲಿಂ ಧರ್ಮದ ಯುವಕ ಇಲ್ಲಿನ ಬೈಪಾಸ್ ರಸ್ತೆಯ ಪ್ರತಿಷ್ಟಿತ ಹೊಟೇಲೊಂದರಲ್ಲಿರುವ ಸಂದರ್ಭ ಅಲ್ಲಿಗೆ ಬಂದ ಹಿಂದೂ ಜಾಗರಣ ವೇದಿಕೆಯವರು ಹಲ್ಲೆ ನಡೆಸಿದ್ದಾರೆಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಜೂ. ೨ರಂದು ಪುತ್ತೂರು ಕೆಮ್ಮಾಯಿಯಲ್ಲಿ ಕಾರಿನಲ್ಲಿ ಬಂದ ತಂಡವೊಂದು ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ವಶದಲ್ಲಿದ್ದ ಕಾರು ಯುವತಿಯ ಹೆಸರಿನಲ್ಲಿದ್ದು, ಅದನ್ನು ಬಿಡುಗಡೆಗೊಳಿಸಲು ಯುವತಿ ಪುತ್ತೂರಿಗೆ ಬಂದಿದ್ದರೆಂದು ಹೇಳಲಾಗುತ್ತಿದೆ.
ರೆಸ್ಟೋರೆಂಟ್‌ನಲ್ಲಿ ಕಳೆದ ಮೂರು ದಿನಗಳಿಂದ ಭಿನ್ನ ಕೋಮಿನ ಯುವತಿ ಮತ್ತು ಯುವಕರು ತಂಗಿದ್ದ ಕುರಿತು ಮಾಹಿತಿ ಪಡೆದ ಸಂಘಟನೆಯೊಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬರುವ ಮೊದಲೇ ಸಂಘಟನೆಯ ಕೆಲವರು ಹೊಟೇಲ್ ಎದುರು ಜಮಾಯಿಸಿದ್ದರೆನ್ನಲಾಗಿದೆ. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವತಿ ಮತ್ತು ಯುವಕರಿಬ್ಬರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಯುವತಿ ತಾನು ಬೆಂಗಳೂರಿನ ಆನೇಕಲ್ ತಾಲೂಕಿನ ಹಳೇಪೇಟೆ ನಿವಾಸಿ ರಾಜೇಶ್ವರಿ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ದಟ್ಟ ಮಂಜು ಕವಿದ ವಾತಾವರಣ; ಉಧಾಂಪುರ್ ನಲ್ಲಿ ಸೇನಾ ಹೆಲಿಕಾಪ್ಟರ್ ಪತನ, ಪೈಲಟ್ ಪಾರು
ಆಕೆ ನೀಡಿದ ಹೇಳಿಕೆಯಂತೆ ಪ್ರಕರಣವೊಂದಕ್ಕೆ ಸಂಬಂಧಿಸಿ ಠಾಣೆಯಲ್ಲಿರುವ ತನ್ನ ಮಾಲಕತ್ವದ ಕಾರನ್ನು ಬಿಡಿಸಲು ತನ್ನ ಜೊತೆ ಕೆಲಸ ಮಾಡುತ್ತಿರುವ ಮಂಗಳೂರು ಉಳ್ಳಾಲ ನಿವಾಸಿ ಯು.ಕೆ.ಮಹಮ್ಮದ್ ಅರಾಫತ್ ಮತ್ತು ಬೆಂಗಳೂರು ಕೊಟ್ಟಿಗೇರಿ ನಿವಾಸಿ ಶಿವ ಅವರೊಂದಿಗೆ ಬಾಡಿಗೆ ವಾಹನದಲ್ಲಿ ಸೆ.18ಕ್ಕೆ ಪುತ್ತೂರಿಗೆ ಬಂದು, ಇಲ್ಲಿ ಲಾಡ್ಜ್‌ನಲ್ಲಿ ಮೂವರು ತಂಗಿದ್ದೆವು. ಸೆ.20 ರಂದು ಬೈಪಾಸ್‌ನ ರೆಸ್ಟೋರೆಂಟ್‌ನಲ್ಲಿ ನಾವು ಊಟ ಮಾಡಿಕೊಂಡಿದ್ದಾಗ ಅಲ್ಲಿಗೆ ಬಂದ ತಂಡವೊಂದು ನಮ್ಮ ಬಳಿ ಬಂದು ಹೆಸರು ಕೇಳಿ ಅವಾಚ್ಯ ಶಬ್ದಗಳಿಂದ ಬೈದು, ನನ್ನ ಜೊತೆಯಲ್ಲಿದ್ದ ಶಿವ ಎಂಬವರಿಗೆ ಹಲ್ಲೆ ನಡೆಸಿದ್ದಾರೆ ಮತ್ತು ನಮ್ಮ ಫೋಟೊ ತೆಗೆದು ಅವಮಾನ ಮಾಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ.
ಆಕೆ ನೀಡಿದ ದೂರಿನಂತೆ ಪೊಲೀಸರು ದೂರು ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿ ಹಲ್ಲೆ ಪ್ರಕರಣದಲ್ಲಿ ಭಾಗಿಯಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕಾರನ್ನು ಬಿಡಿಸಲು ಬಂದಿದ್ದ ಯುವತಿ!: ಜೂ.2 ರಂದು ಪುತ್ತೂರು ಕೆಮ್ಮಾಯಿಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯ ಆಗಿನ ಎಸ್.ಐ ಜಂಬೂರಾಜ್ ಮಹಾಜನ್ ಮತ್ತು ಸಿಬ್ಬಂದಿಗಳು ಕರ್ತವ್ಯದಲ್ಲಿದ್ದರು. ಈ ವೇಳೆ ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ ಕಾರು ತಪಾಸಣೆಗೆ ವೇಳೆ ನಿಲ್ಲಿಸದೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಹಲ್ಲೆ ನಡೆಸಿದ ಘಟನೆ ನಡೆದಿತ್ತು. ಈ ಪ್ರಕರಣದಲ್ಲಿ ಮಂಗಳೂರು ಉಳ್ಳಾಲ ಕೋಟೆಪುರದ ಮೊಹಮ್ಮದ್ ಅರಾಫತ್, ಯು.ಕೆ.ನಾಸಿರ್, ಸೋಮೇಶ್ವರದ ಮಹಮ್ಮದ್ ಆಸೀಫ್ ಅವರು ಬಂಧಿತರಾಗಿದ್ದರು. ಅವರು ಬಂದಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಈ ಕಾರು ರಾಜೇಶ್ವರಿ ಅವರ ಹೆಸರಿನಲ್ಲಿದ್ದರಿಂದ ಅವರು ಪುತ್ತೂರಿಗೆ ಬಂದಿದ್ದು, ಕಳೆದ ಮೂರು ದಿನಗಳಿಂದ ಪುತ್ತೂರಿನಲ್ಲಿ ತಂಗಿದ್ದರೆನ್ನಲಾಗಿದೆ. ಈಕೆಯ ಜೊತೆ ಬೆಂಗಳೂರು ಕೊಟ್ಟೆಗೇರಿ ನಿವಾಸಿ ಶಿವ ಮತ್ತು ಕೆಮ್ಮಾಯಿಯಲ್ಲಿ ಪೊಲೀಸ್ ಕರ್ತವ್ಯದಲ್ಲಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಉಳ್ಳಾಲ ಕೋಟೆಪುರದ ಮೊಹಮ್ಮದ್ ಅರಾಫತ್ ಜೊತೆಗಿದ್ದರು.