Advertisement

ಶಿವರಾಮ ಕಾರಂತರ ಶಾಲೆಗೆ ಪ್ರಧಾನಿ ಕಚೇರಿ ಅಭಯ!

05:43 AM Feb 14, 2019 | Team Udayavani |

ಪುತ್ತೂರು: ಇಲ್ಲಿನ ಕೆಎಸ್‌ ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ತಾಗಿಕೊಂಡೇ ಇರುವ ಡಾ| ಶಿವರಾಮ ಕಾರಂತ ಶಾಲೆಯ ಪಾರಂಪರಿಕ ಕಟ್ಟಡವನ್ನು ಉಳಿಸುವ ಪ್ರಯತ್ನಕ್ಕೆ ಮೊದಲ ಯಶಸ್ಸು ಲಭಿಸಿದೆ. ಮನವಿಗೆ ಸ್ಪಂದನೆ ನೀಡಿರುವ ಪ್ರಧಾನ ಮಂತ್ರಿಗಳ ಕಾರ್ಯಾಲಯ, ಕಟ್ಟಡದ ವಿವರ ನೀಡುವಂತೆ ದ.ಕ. ಜಿಲ್ಲಾ ಪಂಚಾಯತ್‌ಗೆ ಸೂಚಿಸಿದೆ.

Advertisement

140 ವರ್ಷ ಹಳೆಯ ನೆಲ್ಲಿಕಟ್ಟೆ ಡಾ| ಶಿವರಾಮ ಕಾರಂತರ ಶಾಲೆ ಈಗ ಪಾಳು ಬಿದ್ದಿದೆ. ಕಟ್ಟಡ ಗಟ್ಟಿಮುಟ್ಟಾಗಿದ್ದರೂ, ಮಾಡು – ಪಕ್ಕಾಸು ಕುಸಿಯುವ ಹಂತಕ್ಕೆ ತಲುಪಿದೆ. ಇದರಿಂದಾಗಿ ಈ ಕಟ್ಟಡ ಸದುಪಯೋಗ ಆಗುವ ಬದಲು, ದುರುಪಯೋಗ ಆದದ್ದೇ ಹೆಚ್ಚು.

ಎಲ್ಲದಕ್ಕಿಂತ ಹೆಚ್ಚು, ಕಡಲ ತಡಿಯ ಭಾರ್ಗವ ಡಾ| ಶಿವರಾಮ ಕಾರಂತರು ಗೆಜ್ಜೆ ಕಟ್ಟಿ ಕುಣಿದ ಶಾಲೆಯಿದು. ಇದೇ ಕಟ್ಟಡದಲ್ಲಿ ನೃತ್ಯಾಭ್ಯಾಸ ನಡೆಸುತ್ತಿದ್ದರು. ಕಾರಂತರ ನೇತೃತ್ವದಲ್ಲಿ ನಾಡಹಬ್ಬ ದಸರಾವನ್ನು ಇಲ್ಲೇ ಆಚರಿಸಲಾಗುತ್ತಿತ್ತು. ಶಾಲೆಯ ಒಳಗಿರುವ ವೇದಿಕೆ ವಿಶಿಷ್ಟ ರಚನೆಯಿಂದ ಕೂಡಿದೆ. ನಡುಭಾಗದಲ್ಲಿ ಹೊಂಡವಿದ್ದು, ಎರಡು ಬದಿಯಲ್ಲೂ ಎತ್ತರದ ರಚನೆ ಇದೆ. ಇದು ಶಿವರಾಮ ಕಾರಂತರ ಕಲ್ಪನೆಯಲ್ಲೇ ಮೂಡಿದ
ವೇದಿಕೆ. ಈ ಎಲ್ಲ ಕಾರಣಗಳಿಂದ ಕಟ್ಟಡ ಪಾರಂಪರಿಕವಾಗಿ ತಾಣವಾಗಿ ಉಳಿಸಬೇಕು ಎಂಬ ಕೂಗು ಸಾರ್ವಜನಿಕರಿಂದ ಕೇಳಿಬರುತ್ತಿತ್ತು.

ಯಕ್ಷನೃತ್ಯ ಕೇಂದ್ರ
ಈ ಪಾರಂಪರಿಕ ಕಟ್ಟಡದಲ್ಲಿ ವಿದ್ಯಾರ್ಥಿ ಗಳಿಗೆ, ಆಸಕ್ತರಿಗೆ ಯಕ್ಷ ನೃತ್ಯ ಕಲಿಸಲಾಗುತ್ತಿತ್ತು. ನಾಡಹಬ್ಬ ದಸರಾ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮ ಜರಗುತ್ತಿತ್ತು. ಆಗಾಗ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿತ್ತು. ಆಗೆಲ್ಲ ಹೊರ ಊರುಗಳಿಂದ ಬರುತ್ತಿದ್ದ ಕಲಾವಿದರು, ಇದೇ ಶಾಲೆಯಲ್ಲಿ ಕಾರ್ಯಕ್ರಮ ನೀಡಿ, ಇಲ್ಲೇ ಉಳಿದು ಕೊಳ್ಳುತ್ತಿದ್ದರು. ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು, ಈ ಹಿಂದೆ ಜಿಲ್ಲಾ ಪಂಚಾಯತ್‌ ಕಟ್ಟಡ ನವೀಕರಣಕ್ಕೆ ಯೋಜನೆ ತಯಾರಿಸಿತ್ತು. ಬಳಿಕ ಯೋಜನೆ ಹಳ್ಳ ಹಿಡಿಯಿತು.

ಮಾಹಿತಿ ಸಂಗ್ರಹಿಸಲು ನಿರ್ದೇಶನ
ಹಲವು ಸಮಯಗಳಿಂದ ಈ ನಿಟ್ಟಿನಲ್ಲಿ ಜಿ.ಪಂ. ಸಹಿತ ವಿವಿಧ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು. ಆದರೆ ಪ್ರಯೋಜನ ಆಗಿರಲಿಲ್ಲ. ಇದೀಗ ಪುತ್ತೂರಿನ ಅಮೃತ ಮಲ್ಲ ಅವರು ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದು, ಕಟ್ಟಡವನ್ನು ಪಾರಂಪರಿಕ ತಾಣವಾಗಿ ಉಳಿಸಬೇಕೆಂದು ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯ, ದ.ಕ. ಜಿ.ಪಂ.ಗೆ ಪತ್ರವೊಂದನ್ನು ಕಳುಹಿಸಿಕೊಟ್ಟಿದೆ. ಕಟ್ಟಡದ ಮಾಹಿತಿ ಪಡೆದು, ಫೂಟೋದೊಂದಿಗೆ ಕಳುಹಿಸಿಕೊಡುವಂತೆ ಸೂಚಿಸಲಾಗಿದೆ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಕಾರ್ಯಕಾರಿ ಅಭಿಯಂತರರಿಗೆ ಮಾಹಿತಿ ಸಂಗ್ರಹಿಸುವಂತೆ ನಿರ್ದೇಶನ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next