Advertisement

70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ; ನಿರ್ವಹಣೆಯಿಲ್ಲದೆ ಸೊರಗಿದ ಮಲ್ಲಿಕಟ್ಟೆ ಪಾರ್ಕ್‌

02:36 PM May 02, 2024 | Team Udayavani |

ಮಹಾನಗರ: ಸಾರ್ವಜನಿಕರ ಉಪಯೋಗಕ್ಕೆಂದು ಸುಮಾರು ನಾಲ್ಕು ತಿಂಗಳ ಹಿಂದೆ ಮಲ್ಲಿಕಟ್ಟೆಯಲ್ಲಿ ಉದ್ಘಾಟನೆಗೊಂಡ ಹೈಟೆಕ್‌ ಪಾರ್ಕ್‌ ಸದ್ಯ ನಿರ್ವಹಣೆಯಿಲ್ಲದೆ ಸೊರಗಿದೆ. ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ಪಾರ್ಕ್‌ನ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆದಿತ್ತು. ಪಾರ್ಕ್‌ನ ಒಳಭಾಗದಲ್ಲಿರುವ ಗಿಡ ಗಳು ಸದ್ಯ ಬಿಸಿಲಿನ ತಾಪಕ್ಕೆ ಬಾಡಿ ಹೋಗಿದೆ. ಪಾರ್ಕ್‌ ಸುಂದರ ಕಾಣಲು ಹೂದೋಟ ನಿರ್ಮಾಣಗೊಂಡಿದ್ದು, ನೀರು ಹಾಯಿಸಲು ಸ್ಪಿಂಕ್ಲರ್‌ ವ್ಯವಸ್ಥೆಯಿದೆ.

Advertisement

ನಿರ್ವಹಣೆಯಿಲ್ಲದೆ ಬಹುತೇಕ ಗಿಡಗಳು ಒಣಗಿ ಹೋಗಿದೆ. ಗಿಡಗಳಲ್ಲಿ ಹಸಿರು ಮಾಯವಾಗಿದ್ದು, ಕಸ, ಪ್ಲಾಸ್ಟಿಕ್‌ ಬಾಲ್‌, ಚೀಲಗಳು, ಮರಗಳ ಎಲೆಗಳು ಬಿದ್ದು, ಪಾರ್ಕ್‌ನಲ್ಲಿ ವಾಕಿಂಗ್‌ ಮಾಡುವುದು ಕಷ್ಟವಾಗಿದೆ. ಪಾರ್ಕ್‌ಗೆ ಆಗಮಿಸಿದವರಿಗೆಂದು ಕುಳಿತು ಕೊಳ್ಳಲು ಆಸನ ಮತ್ತು ಕುಟೀರ ರೀತಿಯ ಜಾಗವನ್ನು ನಿರ್ಮಿಸಲಾಗಿದೆ. ಇವುಗಳು ಧೂಳಿನಿಂದ ಕೂಡಿದೆ. ಹಕ್ಕಿಗಳ ಹಿಕ್ಕೆ ಈ ಆಸನಗಳ ಮೇಲೆಯೇ ಬಿದ್ದಿದ್ದು ಸ್ವತ್ಛಗೊಳಿಸದಿರುವುದರಿಂದ, ಇಲ್ಲಿ ಕುಳಿತುಕೊಳ್ಳಲು ಅಸಾಧ್ಯವಾದ ಪರಿಸ್ಥಿತಿ ಇದೆ. ಕೆಲವು ಬಾರಿ ಕುಡುಕರು ಕೂಡ ಇಲ್ಲೇ ಮಲಗುತ್ತಾರೆ. ಈ ಹಿನ್ನೆಲೆಯಲ್ಲಿ ಇಷ್ಟೊಂದು ಖರ್ಚು ಮಾಡಿದ ಪಾರ್ಕ್‌ ನಿರ್ವಹಣೆಗೆ ಮಾಡಬೇಕು ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.

“ಕದ್ರಿ ಗೋಪಾಲನಾಥ್‌’ ಹೆಸರು ನಾಮಕರಣ
ಮಲ್ಲಿಕಟ್ಟೆ ಪಾರ್ಕ್‌ಗೆ ಕದ್ರಿ ಗೋಪಾಲನಾಥ್‌ ಅವರ ಹೆಸರು ಇಡಬೇಕೆಂದು ರಾಜ್ಯ ಸರಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಅಂತಿಮ ಆದೇಶದ ಬಳಿಕ ಆ ಹೆಸರು ನಾಮಕರಣಗೊಳ್ಳಲಿದೆ. ಹುಲ್ಲುಹಾಸು, ಹೂವಿನ ಗಿಡ, ಕುಳಿತುಕೊಳ್ಳಲು ಆಸನ, ಕಮಾನುಗಳ ರಚನೆ, ನೀರಿನ ಹರಿಯುವಿಕೆಯ, ಮಕ್ಕಳ ಪ್ಲೇ ಏರಿಯಾ ಮೊದಲಾದವುಗಳನ್ನು ಪಾರ್ಕ್‌ ಹೊಂದಿದೆ. ವಿದ್ಯುತ್‌ ದೀಪದ ವ್ಯವಸ್ಥೆಯನ್ನು ಮಾಡುವ ಮೂಲಕ ರಾತ್ರಿ ವೇಳೆಯಲ್ಲಿ ಪಾರ್ಕ್‌ ಸುಂದರವಾಗಿ ಕಾಣುವಂತೆ ಮಾಡಲಾಗಿದೆ. ಕದ್ರಿ ಗೋಪಾಲನಾಥ್‌ ಅವರ ಫೋಟೋ, ಸ್ಯಾಕ್ಸೋಫೋನ್‌ ಅಳವಡಿಸಲಾಗಿದೆ.

ಬೆಳಗ್ಗೆ 7.30ರಿಂದ ರಾತ್ರಿ ವರೆಗೆ ಕದ್ರಿ ಗೋಪಾಲನಾಥ ಅವರ ಸ್ಯಾಕ್ಸೋಫೋನ್‌ ಕೇಳಲು ಅವಕಾಶ ಇದೆ. ಪಾರ್ಕ್‌ ಒಳಗೆ ಇರುವ ನಗರ ಕೇಂದ್ರ ಗ್ರಂಥಾಲಯದ ಶಾಖೆಗೆ ಪೈಂಟಿಂಗ್‌ ಮಾಡುವ ಕೆಲಸವೂ ನಡೆದಿದೆ. ನೂತನ ಪಾರ್ಕ್‌ನಲ್ಲಿ ಮುಂದಿನ ದಿನಗಳಲ್ಲಿ ಆಕ್ಯುಪಂಕ್ಚರ್‌ ಟ್ರಾಕ್‌ ನಿರ್ಮಾಣಗೊಳ್ಳಲಿದೆ. ಆದರೆ, ಈಗಿರುವ ಪಾರ್ಕ್‌ನ ನಿರ್ವಹಣೆ ಸರಿಯಾದರೆ ಸಾರ್ವಜನಿಕರಿಗೆ ಮತ್ತಷ್ಟು ಅನುಕೂಲವಾದೀತು.

Advertisement

ನಿರ್ಲಕ್ಷಕ್ಕೆ ಒಳಗಾದ ಪಾರ್ಕ್‌ ಗೆ ಹೊಸ ರೂಪ !
ಮಲ್ಲಿಕಟ್ಟೆ ಪಾರ್ಕ್‌ ಈ ಹಿಂದೆ ನಿರ್ಲಕ್ಷಕ್ಕೆ ಒಳಗಾಗಿತ್ತು. ಈ ಪಾರ್ಕ್‌ ಒಳಗಡೆಯ ಗ್ರಂಥಾಲಯ ಆಕರ್ಷಣೆ ಪಡೆದಿತ್ತು. ಆದರೆ ಇಲ್ಲಿನ ಪರಿಸ್ಥಿತಿಯಿಂದಾಗಿ ಸಾರ್ವಜನಿಕರು ಗ್ರಂಥಾಲಯ ಪ್ರವೇಶಕ್ಕೆ ಹಿಂಜರಿಯುತ್ತಿದ್ದರು. ಸುತ್ತಮುತ್ತಲೂ ಗಿಡ-ಗಂಟಿ ಬೆಳೆದಿತ್ತು. ಕಲ್ಲು ಬೆಂಚುಗಳು ಮುರಿದು ಅನಾಥ ಸ್ಥಿತಿಯಲ್ಲಿತ್ತು. ಪಾರ್ಕ್‌ ಸುತ್ತಮುತ್ತಲೂ ಮದ್ಯದ ಬಾಟಲ್‌ಗ‌ಳು ಬಿದ್ದಿತ್ತು. ಭಿಕ್ಷುಕರು ಕೂಡ ಇಲ್ಲೇ ಮಲಗುತ್ತಿದ್ದರು. ಬೀದಿ ನಾಯಿಗಳಿಗೆ ಕೂಡ ಇದೇ ಆವಾಸಸ್ಥಾನವಾಗಿತ್ತು. ಮಲ್ಲಿಕಟ್ಟೆ ಸುತ್ತಮುತ್ತ ಯಾವುದೇ ಪಾರ್ಕ್‌ ಇಲ್ಲದ ಕಾರಣ, ಮಲ್ಲಿಕಟ್ಟೆ ಪಾರ್ಕ್‌ ಸಾರ್ವಜನಿಕರ ವಾಯುವಿಹಾರಕ್ಕೆ ಅನುಕೂಲವಾಗಿತ್ತು. ಇದೀಗ ಮಲ್ಲಿಕಟ್ಟೆ ಪಾರ್ಕ್‌ ಕಾಯಕಲ್ಪದ ಹಾದಿಯಲ್ಲಿದ್ದು ಆಕರ್ಷಣೆ ಪಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next