Advertisement

ಪುತ್ತೂರು ರೈಲು ನಿಲ್ದಾಣ: ಪ್ರಯಾಣಿಕರ ಪರದಾಟ

11:08 AM Jul 04, 2018 | Team Udayavani |

ಪುತ್ತೂರು: ಎಡಕುಮೇರಿನಲ್ಲಿ ಗುಡ್ಡ ಕುಸಿದು, ರೈಲು ಪ್ರಯಾಣಿಕರು ಅತಂತ್ರ ಸ್ಥಿತಿ ಅನುಭವಿಸಿದರು. ಸಂಜೆ ವೇಳೆಗೆ 9 ಕೆಎಸ್‌ ಆರ್‌ಟಿಸಿ ಬಸ್‌ ಗೊತ್ತುಪಡಿಸಿ, ಬೆಂಗಳೂರು, ಹಾಸನಕ್ಕೆ ಕಳುಹಿಸಿಕೊಡಲಾಯಿತು. ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಹಗಲು ರೈಲು ಪ್ರತಿದಿನ ಮಧ್ಯಾಹ್ನ 12.20ಕ್ಕೆ ಪುತ್ತೂರಿನಿಂದ ಹೊರಡುತ್ತದೆ. ಆದರೆ ಮಂಗಳವಾರ ಒಂದು ಗಂಟೆ ವಿಳಂಬವಾಗಿ ಅಂದರೆ 1.20ಕ್ಕೆ ಪುತ್ತೂರಿನಿಂದ ಹೊರಟಿದೆ. ರೈಲು ಸುಬ್ರಹ್ಮಣ್ಯ ದಾಟಿ, ಎಡಕುಮೇರಿಗೆ ತಲುಪುತ್ತಿದ್ದಂತೆ ಗುಡ್ಡ ಜರಿದು ಬಿದ್ದಿರುವ ಸುದ್ದಿ ತಿಳಿಯಿತು. ಕೇವಲ 15 ನಿಮಿಷಕ್ಕೆ ಮೊದಲು ಗುಡ್ಡ ಜರಿದು, ಹಳಿ ಮೇಲೆ ಬಿದ್ದಿದೆ. ರೈಲು ಅರ್ಧ ಗಂಟೆ ಮುಂಚಿತವಾಗಿ ಹೊರಡುತ್ತಿದ್ದರೂ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ. ಎಡಕುಮೇರಿನಲ್ಲಿ ಗುಡ್ಡ ಕುಸಿದಿದೆ ಎಂಬ ವಾರ್ತೆ ತಿಳಿಯುತ್ತಿದ್ದಂತೆ, ಸ್ವಲ್ಪ ಹೊತ್ತು ನಿಂತ ರೈಲು ಹಿಂದಕ್ಕೆ ಬಂದಿತು.

Advertisement

ಘಾಟಿ ಹತ್ತುವ ಉದ್ದೇಶದಿಂದ ಸುಬ್ರಹ್ಮಣ್ಯದಲ್ಲಿ ರೈಲಿಗೆ ಹೆಚ್ಚುವರಿ ಎಂಜಿನ್‌ನನ್ನು ಬೋಗಿ ಹಿಂಭಾಗದಿಂದ ಸೇರಿಸಲಾಗುತ್ತದೆ. ಮಂಗಳವಾರ ಇದರಿಂದ ಪ್ರಯೋಜನವೇ ಆಯಿತು. ಒಂದು ವೇಳೆ ಹಿಂಭಾಗದಲ್ಲಿ ಎಂಜಿನ್‌ ಇಲ್ಲದೇ ಇರುತ್ತಿದ್ದರೆ, ಮಣ್ಣು- ಬಂಡೆ ತೆರವು ಮಾಡುವವರೆಗೆ ರೈಲು ಸ್ಥಳದಲ್ಲೇ ನಿಲ್ಲಬೇಕಾಗಿತ್ತು. ಅಥವಾ ಸುಬ್ರಹ್ಮಣ್ಯ ಅಥವಾ ಮಂಗಳೂರಿನಿಂದ ಇನ್ನೊಂದು ಎಂಜಿನ್‌ ತಂದು ರೈಲನ್ನು ಹಿಂದೆ ಎಳೆಯಬೇಕಾಗಿತ್ತು.

ಸಂಜೆ ವೇಳೆಗೆ ಎಡಕುಮೇರಿನಿಂದ ಹಿಂದೆ ಹೊರಟ ರೈಲು, 5.30ಕ್ಕೆ ಪುತ್ತೂರಿಗೆ ತಲುಪಿತು. ಅಲ್ಲಿವರೆಗೆ ಪ್ರಯಾಣಿಕರು ಅತಂತ್ರರಾಗಿಯೇ ಇದ್ದರು. ಕೆಲವರು ಸುಬ್ರಹ್ಮಣ್ಯದಲ್ಲಿ ಇಳಿದು, ಬಸ್‌ನಲ್ಲಿ ಪ್ರಯಾಣ ಬೆಳೆಸಿದರು. ಅಂತಹವರು ಟಿಕೇಟ್‌ ಹಣವನ್ನು ರೀಫಂಡ್‌ಗೆ ಹಾಕಿದರು. ಪುತ್ತೂರಿನಲ್ಲಿ ಸುಮಾರು 300ರಿಂದ 400ರಷ್ಟು ಪ್ರಯಾಣಿಕರು ಇಳಿದರು.
ರೈಲು ಮಂಗಳೂರು ಕಡೆ ಸಾಗಿತು.

9 ಕೆಎಸ್‌ಆರ್‌ಟಿಸಿ ಬಸ್‌
ಸಂಜೆ 5.30ರಿಂದ ಸುಮಾರು 8 ಗಂಟೆವರೆಗೆ ಪ್ರಯಾಣಿಕರು ಪುತ್ತೂರು ರೈಲ್ವೇ ನಿಲ್ದಾಣದ ಆಸುಪಾಸು ಎಲ್ಲೆಂದರಲ್ಲಿ ಕುಳಿತಿದ್ದರು. ಸಣ್ಣ ಮಕ್ಕಳ ಅಳು, ದೊಡ್ಡವರ ಜಗಳ, ಕೆಲಸಕ್ಕೆಂದು ಹೊರಟು ನಿಂತವರ ತೊಳಲಾಟ ಎಲ್ಲವೂ ಸಾಮಾನ್ಯವಾಗಿ ಕಂಡುಬಂತು. ರೈಲ್ವೇ ಇಲಾಖೆ ವತಿಯಿಂದ ಪ್ರಯಾಣಿಕರಿಗಾಗಿ 9 ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಗೊತ್ತು ಪಡಿಸಲಾಯಿತು. ಇದರಲ್ಲಿ 2 ಬಸ್‌ ಸಕಲೇಶಪುರ – ಹಾಸನ, ಉಳಿದ ಬಸ್‌ ಗಳು ಬೆಂಗಳೂರಿಗೆ.

ಬಸ್‌ ವ್ಯವಸ್ಥೆ ಮಾಡುತ್ತಿದ್ದಂತೆ ಪ್ರಯಾಣಿಕರು ಸರತಿ ಸಾಲು ನಿಂತರು. ಆ ವಿಷಯದಲ್ಲೂ ಜಗಳ ಮಾಡಿಕೊಂಡರು. ಬಸ್‌ ಬರುತ್ತಿದ್ದಂತೆ ಜಗಳವಾಡುತ್ತಲೇ ಬಸ್‌ ಹತ್ತಿದರು. ನಗರ ಠಾಣೆ ಪೊಲೀಸರು ಹಾಗೂ ರೈಲ್ವೇ ಸಿಬಂದಿ ಪ್ರಯಾಣಿಕರನ್ನು ಸಮಾಧಾನ ಪಡಿಸುತ್ತಿದ್ದ ದೃಶ್ಯ ಕಂಡುಬಂತು.

Advertisement

ಸಿಕ್ಕಿಬಿದ್ದೆವು…
ಪುತ್ತೂರಿನಿಂದ ಬೆಂಗಳೂರಿಗೆ ಹೊರಟಿದ್ದೆ. 15 ನಿಮಿಷ ಬೇಗ ಹೋಗುತ್ತಿದ್ದರೂ ರೈಲು ಎಡಕುಮೇರಿಯಿಂದ ಮುಂದೆ
ಹೋಗಿರುತ್ತಿತ್ತು. ಈಗ ಅರ್ಧದಲ್ಲಿ ಸಿಕ್ಕಿ ಹಾಕಿಕೊಂಡಂತಾಗಿದೆ. ಗುಡ್ಡ- ಬಂಡೆ ರೈಲಿನ ಮೇಲೆ ಬಿದ್ದಿರುತ್ತಿದ್ದರೆ ದೊಡ್ಡ ದುರಂತವೇ ನಡೆಯುತ್ತಿತ್ತು. ಮಧ್ಯಾಹ್ನದ ಬಳಿಕ ಒದ್ದಾಟ ನಡೆಸುವಂತಾಗಿದೆ. ನುಸಿ ಕಚ್ಚಿಸಿಕೊಂಡು ರೈಲ್ವೇ ನಿಲ್ದಾಣದಲ್ಲಿ ಕುಳಿತುಕೊಂಡಿದ್ದೇವೆ.  
– ಸದಾಶಿವ,
ಗೋಳಿತ್ತಡಿ, ರೈಲ್ವೇ ಪ್ರಯಾಣಿಕ

Advertisement

Udayavani is now on Telegram. Click here to join our channel and stay updated with the latest news.

Next