Advertisement

Mangaluru: ರಕ್ಷಣೆಗಿರುವ ‘ರೈಲ್ವೇ ಗೇಟ್‌’ನಿಂದಲೇ ಪ್ರಯಾಣಿಕರಿಗೆ ಅಪಾಯ!

02:29 PM Sep 12, 2024 | Team Udayavani |

ಮಹಾನಗರ: ರೈಲ್ವೇ ಇಲಾಖೆ ಹೊಸತನಗಳ ಮೂಲಕ ಸುಧಾರಣೆಯನ್ನು ಕಂಡುಕೊಳ್ಳುತ್ತಿದ್ದು, ಈಗ ‘ವಂದೇಭಾರತ್‌’ ಸಹಿತ ವಿನೂತನ ಆವಿಷ್ಕಾರಗಳು ಲಭ್ಯವಾಗುತ್ತಿದೆ. ಆದರೂ ರೈಲ್ವೇ ಇಲಾಖೆಯ ಕೆಲವೊಂದು ವ್ಯವಸ್ಥೆಗಳು ಮಾತ್ರ ಇನ್ನೂ ಓಬಿರಾಯನ ಕಾಲದಲ್ಲೇ ಇದೆ. ಅವು ಸುಧಾರಣೆ ಹಂತಕ್ಕೆ ಬಂದಿಲ್ಲ-ಬರುವುದೂ ಇಲ್ಲ ಎಂಬಂತಾಗಿದೆ. ಈ ಪೈಕಿ, ಮಂಗಳೂರು ನಗರ ವ್ಯಾಪ್ತಿಯ ಕೆಲವು ಕಡೆಗಳಲ್ಲಿರುವ ರೈಲ್ವೇ ಗೇಟ್‌ಗಳೇ ನಿದರ್ಶನ!

Advertisement

ಪಾಂಡೇಶ್ವರ, ಹೊಗೆಬಜಾರ್‌, ಮಹಾಕಾಳಿಪಡ್ಪು, ಜೋಕಟ್ಟೆ, ಸೋಮೇಶ್ವರ, ಉಚ್ಚಿಲ, ವಳಚ್ಚಿಲ್‌, ಅರ್ಕಳ ಸಹಿತ ವಿವಿಧ ಕಡೆಗಳಲ್ಲಿರುವ ರೈಲ್ವೇ ಗೇಟ್‌ಗಳು ಒಂದೊಂದು ರೀತಿಯ ಸಮಸ್ಯೆ ಎದುರಿಸುತ್ತಿವೆ.

ಅದರಲ್ಲಿಯೂ ಬಹು ವಿಚಾರದಲ್ಲಿ ಚರ್ಚಿತ ಪಾಂಡೇಶ್ವರದ ರೈಲ್ವೇ ಗೇಟ್‌ 2 ದಿನದ ಹಿಂದೆ ಕಳಚಿ ಬೀಳುವ ಮೂಲಕ ರೈಲ್ವೇ ಗೇಟ್‌ನ ವಾಸ್ತವ ಸ್ಥಿತಿಯನ್ನು ತೆರೆದಿಟ್ಟಂತಾಗಿದೆ. ಇಲ್ಲಿನ ರೈಲ್ವೇ ಗೇಟ್‌ ಅಪಾಯಕಾರಿ ಸ್ವರೂಪದಲ್ಲೇ ಇತ್ತು. ಇದರಲ್ಲಿನ ಸರಳು ಕೂಡ ಬಹುತೇಕ ಬಿದ್ದು ಹೋಗಿ, ಇನ್ನು ಉಳಿದವು ಬೀಳುವ ಹಂತದಲ್ಲಿತ್ತು. ಇದರ ಮಧ್ಯೆಯೇ ‘ಸರ್ಕಸ್‌’ ಮಾಡಿ ಕೆಲವರು ಗೇಟ್‌ ದಾಟುವ ಹರಸಾಹಸವನ್ನೂ ಮಾಡುತ್ತಿದ್ದರು. ಗೇಟ್‌ ಹಾಕಿದ ಅನಂತರವೂ ಈ ಸರಳಿನ ಮಧ್ಯೆಯೇ ನುಸುಳಿಕೊಂಡು ದ್ವಿಚಕ್ರ ವಾಹನವನ್ನೂ ಕೊಂಡೊಯ್ದವರೂ ಇದ್ದಾರೆ. ವಾಹನ ತಾಗಿದ ಕಾರಣದಿಂದ ಈ ಗೇಟ್‌ ಬಿದ್ದಿದೆ ಎಂಬ ದೂರು ಇದೆ. ಅಂತೂ, ರೈಲ್ವೇ ಗೇಟ್‌ಗಳು ಈಗಿನ ಜಮಾನಕ್ಕೆ ಒಗ್ಗಿಕೊಳ್ಳುವ ಹಾಗೆ ಸುಧಾರಿತ ಕ್ರಮದಲ್ಲಿರಬೇಕು ಎಂಬುವುದಕ್ಕೆ ಈ ಘಟನೆ ಉದಾಹರಣೆಯಾಗಿದೆ.

ರಸ್ತೆ ಮಧ್ಯೆ ಹಳಿ ಇರುವಲ್ಲೇ ಇಕ್ಕಟ್ಟು!
ಮುಖ್ಯ ರಸ್ತೆಯ ಮಧ್ಯೆ ರೈಲು ಹಳಿ ಇದ್ದು ಗೇಟ್‌ ಹಾಕುವ ಜಾಗ ಇರುವಲ್ಲಿ ರೈಲ್ವೇ ಮತ್ತು ಸ್ಥಳೀಯಾಡಳಿತದ ಸಂವಹನ ಕೊರತೆಯಿಂದ ಸಮಸ್ಯೆಗಳಿಗೆ ಪರಿಹಾರವೇ ಸಿಗುತ್ತಿಲ್ಲ.

ಉದಾಹರಣೆಗೆ ಶ್ರೀ ಮಂಗಳಾದೇವಿ ಕ್ಷೇತ್ರದಿಂದ ನೆಕ್ಸಸ್‌ ಮಾಲ್‌ ಸಮೀಪದ ಎ.ಬಿ. ಶೆಟ್ಟಿ ವೃತ್ತದವರೆಗೆ ಚತುಷ್ಪಥ ರಸ್ತೆ ಆಗಿದ್ದರೂ ಪಾಂಡೇಶ್ವರ ರೈಲ್ವೇ ಕ್ರಾಸಿಂಗ್‌ನ ಎರಡೂ ಬದಿಯಲ್ಲಿ ವಿಸ್ತರಣೆ ಆಗಿಲ್ಲ. ರೈಲು ಹಳಿ ಇರುವ ವ್ಯಾಪ್ತಿಯ ಜಾಗವು ರೈಲ್ವೇ ಇಲಾಖೆಗೆ ಸೇರಿದ್ದಾಗಿರುವುದರಿಂದ ಇಲ್ಲಿ ರಸ್ತೆ ಅಗಲ ಮಾಡಲು ರೈಲ್ವೆಯವರೇ ಗಮನಹರಿಸ ಬೇಕಿದೆ. ರೈಲ್ವೇ ಮಾತ್ರ ಇದನ್ನು ನಗಣ್ಯ ಮಾಡಿದಂತಿದೆ. ಸದ್ಯ ಈ ಭಾಗದಲ್ಲಿ ಹೊಂಡ ಗುಂಡಿ ಆಗಿ ಇಕ್ಕಟ್ಟಿನ ರಸ್ತೆಯಲ್ಲಿ ಸಂಚರಿಸುವ ಪರಿಸ್ಥಿತಿ.

Advertisement

ದಂಡ ವಸೂಲಿಯಾದರೂ, ಹೊಸ ಗೇಟ್‌ ಇಲ್ಲ!
ರೈಲ್ವೇ ಗೇಟ್‌ಗೆ ವಾಹನದವರು ಹಾನಿ ಮಾಡಿದರೆ ಅಂತಹವರ ಮೇಲೆ ರೈಲ್ವೇ ಇಲಾಖೆ ದಂಡ ಪ್ರಯೋಗ ಮಾಡುತ್ತದೆ. ನಗರದ ವಿವಿಧ ಕಡೆಯಲ್ಲಿ ಇಂತಹ ಘಟನೆ ನಡೆದಿದೆ. ಹೆಚ್ಚಾ ಕಡಿಮೆ ಲಕ್ಷಾಂತರ ರೂ. ಇದೇ ರೀತಿ ರೈಲ್ವೇ ಇಲಾಖೆ ದಂಡ ಸಂಗ್ರಹಿಸುತ್ತದೆ. ಆ ಹಣವನ್ನೇ ಉಪಯೋಗಿಸಿ ಹೊಸ ಗೇಟ್‌ ಅಳವಡಿಸಬಹುದು. ಆದರೆ ಹೊಸತು ತರುವ ಬದಲು ಹಳೆಯದನ್ನೇ ಜೋಪಾನ ಮಾಡಲಾಗುತ್ತಿದೆ!

ತುಕ್ಕು ಹಿಡಿದ ಗೇಟ್‌!
ವಳಚ್ಚಿಲ್‌ ಹಾಗೂ ಅರ್ಕುಳದಲ್ಲಿರುವ ರೈಲ್ವೇ ಗೇಟ್‌ಗಳು ಕಾಣಲು ಚಂದವಾಗಿ ಕಂಡರೂ ತುಂಬ ಹಳೆಯದಾಗಿದ್ದು, ತುಕ್ಕು ಹಿಡಿದಿದೆ. ಇದಕ್ಕೆ ಬಣ್ಣ ಬಳಿದು ಹೊಸ ರೂಪ ನೀಡಲಾಗಿದೆ. ಕೆಲವು ಸಲ ಗೇಟ್‌ ಹಾಕುವಾಗ ಅಥವಾ ತೆಗೆಯುವಾಗ ಅರ್ಧದಲ್ಲೇ ಗೇಟ್‌ ಬಾಕಿಯಾದ ಉದಾಹರಣೆಯೂ ಇಲ್ಲಿದೆ. ಕೊಂಚ ಹೊತ್ತು ಮಾನವ ಶ್ರಮವಹಿಸಿ ಈ ಗೇಟ್‌ಗಳನ್ನು ನಿರ್ವಹಣೆ ಮಾಡಬೇಕಿದೆ.

ರೈಲ್ವೇ ಇಲಾಖೆಯ ಗಮನಕ್ಕೆ ತರಲಾಗುವುದು
ಮಂಗಳೂರು ನಗರ ವ್ಯಾಪ್ತಿಯಲ್ಲಿರುವ ರೈಲ್ವೇ ಗೇಟ್‌ಗಳ ಸಮಸ್ಯೆ ಬಗ್ಗೆ ದೂರು ಬಂದಿದೆ. ಮುಂಬರುವ ರೈಲ್ವೇ ಇಲಾಖೆಯ ಸಂಬಂಧಿತ ಸಭೆಯಲ್ಲಿ ಅಧಿಕಾರಿಗಳ ಜತೆಗೆ ಇದನ್ನು ಪ್ರಸ್ತಾವಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗುವುದು. ರೈಲ್ವೇ ಇಲಾಖೆಯ ಗಮನಕ್ಕೆ ಇದನ್ನು ಪಾಲಿಕೆ ಅಧಿಕಾರಿಗಳ ಮೂಲಕ ತರಲಾಗುವುದು.
-ಸುಧೀರ್‌ ಶೆಟ್ಟಿ ಕಣ್ಣೂರು, ಮೇಯರ್‌, ಪಾಲಿಕೆ

ಹಳೆ ಗೇಟ್‌ ಹಾಗೆಯೇ ಇದೆ!
ಜಪ್ಪು ಮಹಾಕಾಳಿಪಡ್ಪು ಸಹಿತ ಹಲವು ಕಡೆಯಲ್ಲಿ ರೈಲ್ವೇ ಗೇಟ್‌ ಹಳೆಯ ಕಾಲದ್ದನ್ನೇ ದುರಸ್ತಿ ಮಾಡಿ ಮತ್ತೆ ಮತ್ತೆ ಬಳಕೆ ಮಾಡಲಾಗುತ್ತಿದೆ. ಇಲ್ಲಿ ರೈಲ್ವೆಯಿಂದ ಬೇರೆ ಬೇರೆ ಕೆಲಸ ಆಗಿದ್ದರೂ ಗೇಟ್‌ ಮಾತ್ರ ಪೂರ್ಣವಾಗಿ ಬದಲಾಗಿಲ್ಲ. ಕೊಂಚ ಬದಲಾದರೂ ಆಧುನಿಕ ಸ್ವರೂಪದಲ್ಲಿ ಅವು ಇಲ್ಲ. ಗೇಟ್‌ನಲ್ಲಿರುವ ಕಬ್ಬಿಣದ ಸರಳು ಆಗಲೋ-ಈಗಲೋ ಬೀಳುವ ಸ್ಥಿತಿಯಲ್ಲಿದೆ.

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next