Advertisement

New Train: ಶೀಘ್ರವೇ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್‌ ರೈಲು: ಕೇಂದ್ರ ಸಚಿವ ಸೋಮಣ್ಣ

03:45 AM Sep 14, 2024 | Team Udayavani |

ಮೈಸೂರು: ಶೀಘ್ರದಲ್ಲಿಯೇ ದೇಶಾದ್ಯಂತ ಹೊಸದಾಗಿ 13 ವಂದೇ ಭಾರತ್‌ ರೈಲುಗಳ ಸಂಚಾರ ಆರಂಭಿಸಲಾಗುತ್ತದೆ. ಮುಂದಿನ ಮೂರು ತಿಂಗಳಲ್ಲಿ ಕರ್ನಾಟಕಕ್ಕೆ ಮತ್ತೊಂದುವಂದೇ ಭಾರತ್‌ ರೈಲು ಸಿಗುವ ಸಾಧ್ಯತೆ ಇದೆ ಎಂದು ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರು ಹೊರತಾದ ನಗರಗಳ ರೈಲ್ವೆ ಸೇತುವೆ ನಿರ್ಮಾಣಕ್ಕೆ 11 ಸಾವಿರ ಕೋಟಿ ರೂ. ಬಿಡುಗಡೆಯಾಗಿದೆ. ತುಮಕೂರಿನಲ್ಲಿ 8 ಕಡೆ 800 ಕೋಟಿ ರೂ.ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗುತ್ತಿದೆ ಎಂದರು.

ಮೂರು ಮೆಮು ರೈಲು:
ತುಮಕೂರು, ಮೈಸೂರು, ಚಾಮರಾಜನಗರದ ಶ್ರೀಸಾಮಾನ್ಯರಿಗೂ ಅನುಕೂಲವಾಗುವಂತಹ ಮೂರು ಹೊಸ ಮೆಮು ರೈಲು ಸೇವೆ ಆರಂಭಿಸಲಾಗುವುದು. ಸೆ.27 ರಂದು ತುಮಕೂರು-ಬೆಂಗಳೂರು ನಡುವೆ ಸಂಚರಿಸುವ ಮೆಮು ರೈಲಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಹೆಚ್ಚುವರಿ ಬೋಗಿ ಅಳವಡಿಕೆ:
ಮುಂದಿನ ಎರಡು ತಿಂಗಳಲ್ಲಿ ಪ್ರತಿ ರೈಲುಗಳಿಗೂ ಹೆಚ್ಚುವರಿಯಾಗಿ ಎರಡು ಸಾಮಾನ್ಯ (ಜನರಲ್‌) ಬೋಗಿಗಳನ್ನು ಅಳವಡಿಸಲಾಗುವುದು. ಅಲ್ಲದೇ ರಕ್ಷಣೆ ದೃಷ್ಟಿಯಿಂದ ಮಹಿಳಾ ಬೋಗಿಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲು ಚಿಂತನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು. ಸರಕು ಸಾಗಣೆ ಸೇವೆಗೆ ಉತ್ತೇಜನ ನೀಡಲು ಸಕ್ಯುಲೇಟಿಂಗ್‌ ರೈಲ್ವೆ ಸೇವೆಗೆ 80 ಸಾವಿರ ಕೋಟಿ ರೂ. ವಿನಿಯೋಗಿಸಲು ಚಿಂತನೆ ನಡೆಸಲಾಗಿದೆ ಎಂದರು.

Advertisement

ಹೆಜ್ಜಾಲ-ಚಾ.ನಗರ ರೈಲು ಯೋಜನೆ ಕಾಮಗಾರಿ ಶೀಘ್ರ ಆರಂಭ: ಸೋಮಣ್ಣ
ಮೈಸೂರು ಭಾಗದ ಜನತೆಗೆ ಉಪಯೋಗವಾಗುವ ಯೋಜನೆಗಳಾದ ಮೈಸೂರು-ಕುಶಾಲನಗರ, ಹೆಜ್ಜಾಲ-ಚಾಮರಾಜನಗರ ರೈಲು ಯೋಜನೆ ಸೇರಿದಂತೆ ಇತರೆ ಯೋಜನೆಗಳ ಅನುಷ್ಠಾನ ಕಾರ್ಯವನ್ನು ಚುರುಕುಗೊಳಿಸಿ, ಶೀಘ್ರದಲ್ಲೇ ಕಾಮಗಾರಿ ಆರಂಭಿಸುವ ವಿಶ್ವಾಸವನ್ನು ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ವ್ಯಕ್ತಪಡಿಸಿದರು.

ಮೈಸೂರಿನ ವಿಭಾಗೀಯ ರೈಲು ವ್ಯವಸ್ಥಾಪಕರ ಕಚೇರಿಯ ಸಭಾಂಗಣದಲ್ಲಿ ರೈಲ್ವೆ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಬೆಂಗಳೂರಿನಂತೆ ಮೈಸೂರು ಭಾಗಕ್ಕೂ ರೈಲ್ವೆ ಸೌಲಭ್ಯಗಳು ದೊರೆಯಬೇಕಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಹೊಸ ಯೋಜನೆಗಳ ಅನುಷ್ಠಾನಕ್ಕೆ ಬದಲಾಗಿ ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಮರು ಜೀವ ನೀಡಲು ಆದ್ಯತೆ ನೀಡಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.