Advertisement

ಪುತ್ತೂರು: 4 ಪಾರ್ಕ್‌ಗಳಿಗೆ ಹೊಸ ರೂಪ; ನಗರಾಡಳಿತದ ಯೋಜನೆ

05:26 PM Jan 29, 2022 | Team Udayavani |

ಪುತ್ತೂರು: ಜಿಲ್ಲಾ ಕೇಂದ್ರ ಸ್ಥಾನವಾಗಿ ರೂಪುಗೊಳ್ಳುವ ಹಂತ ದಲ್ಲಿರುವ ನಗರದಲ್ಲಿ ನಾಲ್ಕು ಪಾರ್ಕ್‌ ಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ನಗರಾಡಳಿತ ಯೋಜನೆ ಸಿದ್ಧಪಡಿಸಿದೆ.

Advertisement

ಮೊದಲ ಹಂತವಾಗಿ ನಗರದ ಹೃದಯ ಭಾಗದಲ್ಲಿರುವ ಚಿಣ್ಣರ ಪಾರ್ಕ್‌ ಅಭಿವೃದ್ಧಿ ಗೊಂಡಿದ್ದು, ಉಳಿದ ಮೂರು ಪಾರ್ಕ್‌ ಅಭಿವೃದ್ಧಿಗೆ ಅನುದಾನ ಮೀಸಲಿಡಲಾಗಿದೆ.

ಚಿಣ್ಣರ ಪಾರ್ಕ್‌
2019-2020ನೇ ಸಾಲಿನ 14ನೇ ಹಣಕಾಸು ನಿಧಿಯಲ್ಲಿ 10 ಲಕ್ಷ ರೂ. ಮತ್ತು 2020-21ನೇ ಸಾಲಿನ 15ನೇ ಹಣಕಾಸು ನಿ ಧಿಯಲ್ಲಿ 15 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ. ಪ್ರಸ್ತುತ ಪಾರ್ಕ್‌ ಕಾಮಗಾರಿ ಪೂರ್ಣಗೊಂಡಿದೆ. ಸುಮಾರು 35 ಸೆಂಟ್ಸ್‌ ಹೊಂದಿರುವ ಚಿಣ್ಣರ ಪಾರ್ಕ್‌ ಮಕ್ಕಳಿಗಾಗಿಯೇ 13 ವರ್ಷಗಳ ಹಿಂದೆ ನಿರ್ಮಾಣಗೊಂಡ ಉದ್ಯಾನವಿದು.

ನಿರ್ವಹಣೆಯ ಕೊರತೆಯಿಂದಾಗಿ ಕೆಲವು ವರ್ಷಗಳ ಕಾಲ ಪಾರ್ಕ್‌ ನಿರುಪುಯುಕ್ತ ಸ್ಥಿತಿಯಲ್ಲಿತ್ತು. ಇದೀಗ ಈ ಪಾರ್ಕ್‌ಗೆ 25 ಲಕ್ಷ ರೂ. ವೆಚ್ಚದಲ್ಲಿ ಹೊಸ ರೂಪ ನೀಡಲಾಗಿದೆ.

ಇಡೀ ಉದ್ಯಾನದ ನೆಲಕ್ಕೆ ಹೊಸದಾಗಿ ಕೆಂಪು ಮಣ್ಣು ಹರಡಿ ಅದರ ಮೇಲೆ ಹುಲ್ಲಿನ ಲಾನ್‌ ನಿರ್ಮಿಸಲಾಗಿದೆ. ಆಯಕಟ್ಟಿನ ಜಾಗದಲ್ಲಿ ಆಲಂಕಾರಿಕ ಗಿಡಗಳನ್ನು ನೆಡಲಾಗಿದೆ. ಉದ್ಯಾನದಲ್ಲಿ 3 ಕಾರಂಜಿಗಳನ್ನು ಅಳವಡಿಸಲಾಗಿದೆ. ಉದ್ಯಾನದ ಆವರಣ ಗೋಡೆಗೆ ಬಣ್ಣ ಬಳಿದು, ಆಕರ್ಷಕ ದೀಪಾಲಂಕಾರ, ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಸ್ತುತ ಉದ್ಯಾನದಲ್ಲಿರುವ ಬಯಲು ರಂಗ ಮಂದಿರವನ್ನು ಒಂದಷ್ಟು ಸುಂದರಗೊಳಿಸಿ ಯಥಾಪ್ರಕಾರ ಉಳಿಸಿಕೊಳ್ಳಲಾಗಿದೆ. ರಾತ್ರಿ ಹೊತ್ತು ದೀಪ ಕಾರಂಜಿಯ ಟಚ್‌ ನೀಡಲು ಉದ್ದೇಶಿಸಲಾಗಿದೆ.

Advertisement

ನೆಲ್ಲಿಕಟ್ಟೆ ಪಾರ್ಕ್‌ ಯೋಜನೆ
ಮಹಾಲಿಂಗೇಶ್ವರ ದೇಗುಲದ ದೇವರಮಾರು ಗದ್ದೆಯ ಕೊನೆಯಲ್ಲಿ ನಾಗಸಾನ್ನಿಧ್ಯದ ಪಕ್ಕದಲ್ಲಿರುವ ಪಾರ್ಕ್‌ 9.28 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸುವ ಯೋಜನೆ ಮಂಜೂರಾಗಿದೆ. ವಿಶಾಲ ಮೈದಾನದ ಕೊನೆಯಲ್ಲಿರುವ ಪ್ರಶಾಂತ ಪಾರ್ಕ್‌ ಇದಾಗಿದ್ದು, ಕಂಬಳ ಕರೆ ಪಕ್ಕ ಈ ಪಾರ್ಕ್‌ ಇದೆ. ಹೀಗಾಗಿ ಜನರನ್ನು ಸೆಳೆಯ ಬಲ್ಲದು ಎನ್ನುವುದು ನಗರ ಆಡಳಿತದ ಲೆಕ್ಕಚಾರ.

ನೆಲಪ್ಪಾಲು ಪಾರ್ಕ್‌
ನಗರಸಭೆ ವ್ಯಾಪ್ತಿಯ ನೆಲಪ್ಪಾಲು ವಿನಲ್ಲಿರುವ ಪಾರ್ಕ್‌ ಅಭಿವೃದ್ಧಿಗೆ 25 ಲಕ್ಷ ರೂ. ಮಂಜೂರಾಗಿದೆ. ಮೊದಲ ಹಂತದ ಕೆಲಸ ನಡೆದಿದ್ದು ಆವರಣ ಗೋಡೆ, ತಡೆಬೇಲಿ ಆಗಿದೆ. 2ನೇ ಹಂತದಲ್ಲಿ ಲಾನ್‌, ವಾಕಿಂಗ್‌ ಟ್ರಾÂಕ್‌, ಗಿಡಗಳು, ದೀಪಾಲಂಕಾರ ಇತ್ಯಾದಿ ಕಾಮಗಾರಿ ನಡೆಸಲು ಉದ್ದೇಶಲಾಗಿದೆ.

ಸಾಮೆತ್ತಡ್ಕ ಪಾರ್ಕ್‌
1 ಎಕರೆಯಷ್ಟು ವಿಶಾಲ ಪ್ರದೇಶ ದಲ್ಲಿರುವ ಸಾಮೆತ್ತಡ್ಕ ಪಾರ್ಕ್‌ ಅಭಿವೃದ್ಧಿ ಯೋಜನೆ ಜಾರಿಯಲ್ಲಿದೆ. ನಗರೋತ್ಥಾನ ಯೋಜನೆಯಲ್ಲಿ ಈಗಾಗಲೇ ಸಿವಿಲ್‌ ಕೆಲಸಗಳನ್ನು ಮುಗಿಸಲಾಗಿದೆ. ಮುಂದಿನ ಅಭಿವೃದ್ಧಿಗೆ 18 ಲಕ್ಷ ರೂ. ಇಡಲಾಗಿದ್ದು, ಕಾಮಗಾರಿ ನಡೆಯಲಿದೆ. ಇದರಲ್ಲಿ ಅರ್ಧ ಭಾಗದಷ್ಟು ಅಭಿವೃದ್ಧಿ ನಡೆಯಲಿದೆ. ಹಂತ ಹಂತವಾಗಿ ಈ ಪಾರ್ಕ್‌ ನವೀಕರಿಸಲಾಗುತ್ತದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಚ್ಛ- ಸುಂದರ ನಗರ
ನಗರದ ನಾಲ್ಕು ಪಾರ್ಕ್‌ಗಳನ್ನು ಸ್ವಚ್ಛ ಮತ್ತು ಜನಾಕರ್ಷಣೆಯ ನೆಲೆಯಾಗಿ ರೂಪಿಸುವುದು ನಮ್ಮ ಉದ್ದೇಶ. ಇದಕ್ಕೆ ಬೇಕಾದ ಎಲ್ಲ ಯೋಜನೆ ಸಿದ್ಧಪಡಿಸಿ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ನಗರದ ಹೃದಯ ಭಾಗದಲ್ಲಿರುವ ಚಿಣ್ಣರ ಪಾರ್ಕ್‌ ಅಭಿವೃದ್ಧಿ ಕೆಲಸ ಪೂರ್ಣಗೊಂಡಿದೆ.
-ಮಧು ಎಸ್‌. ಮನೋಹರ್‌,
ನಗರಸಭೆ ಪೌರಾಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next