Advertisement

Puttur:”ಸಾಯಿ’ ಎನ್ನುತ್ತಾ ಪುತ್ರನನ್ನು ಕೊಂದಳಾ ತಾಯಿ?

10:10 AM May 12, 2024 | Team Udayavani |

ಪುತ್ತೂರು: ಕುಡಿದ ಮತ್ತಿನಲ್ಲಿ ಅಕ್ಕಪಕ್ಕದ ಮನೆಗಳಿಗೆ ಹೋಗಿ ಗಲಾಟೆ ಮಾಡುತ್ತಿದ್ದ ಪುತ್ರನ ಕಿರುಕುಳವನ್ನು ಸಹಿಸಲಾಗದೇ “ಸಾಯಿ’ ಎನ್ನುತ್ತಾ ಸಂಕೋಲೆ ಬಿಗಿದು ತಾಯಿಯೇ ಕೊಂದು ಬಿಟ್ಟಳಾ ಅನ್ನುವ ಅನುಮಾನಕ್ಕೆ ಕೊಲೆ ಆರೋಪದಲ್ಲಿ ಬಂಧಿತ ಆರೋಪಿ ತಾಯಿ ನೀಡಿದ ಹೇಳಿಕೆ ಪುಷ್ಟಿ ನೀಡಿದೆ.

Advertisement

ಬೆಟ್ಟಂಪಾಡಿ ಕಾನುಮೂಲೆ ನಿವಾಸಿ ದಿ| ಕೊರಗಪ್ಪ ಶೆಟ್ಟರ ಪುತ್ರ ಚೇತನ್‌(33) ಅವರನ್ನು ಕೊಲೆ ಮಾಡಿರುವ ಆರೋಪದಲ್ಲಿ ಯುವಕನ ತಾಯಿ ಉಮಾವತಿ ಶೆಟ್ಟಿ ಹಾಗೂ ನೆರೆಮನೆಯ ಯೂಸುಫ್‌ನನ್ನು ಬಂಧಿಸಲಾಗಿದೆ. ಮೇ 10ರಂದು ಮುಂಜಾನೆ ಘಟನೆ ಸಂಭವಿಸಿದ್ದು, ಬಂಧಿತರಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಉಸಿರುಗಟ್ಟಿ ಸಾವು?
ಮದ್ಯವ್ಯಸನಿಯಾಗಿದ್ದ ಚೇತನ್‌ ಮೇ 9ರಂದು ತಡರಾತ್ರಿ ನೆರೆಮನೆಯ ಯೂಸುಫ್ ಅವರ ಮನೆಗೆ ಹೋಗಿದ್ದು, ಮೇ 10 ರಂದು ಮುಂಜಾನೆ 5 ಗಂಟೆಗೆ ಯೂಸುಫ್‌ ಅವರು ಚೇತನ್‌ನ ತಾಯಿಗೆ ಕರೆ ಮಾಡಿ, ಚೇತನ್‌ ಗಲಾಟೆ ಮಾಡುತ್ತಿದ್ದ ಬಗ್ಗೆ ತಿಳಿಸಿದ್ದರು. ಉಮಾವತಿ ಅವರು ಯೂಸುಫ್‌ನ ಸಹಾಯ ಪಡೆದು ಸಂಕೋಲೆ ಬಿಗಿದು ಚೇತನ್‌ನನ್ನು ಎಳೆದುಕೊಂಡು ಬಂದಿದ್ದು, ಈ ವೇಳೆ ಉಸಿರುಗಟ್ಟಿ ಆತ ಮೃತಪಟ್ಟಿದ್ದಾನೆ ಎಂದು ಅನುಮಾನಿಸಲಾಗಿತ್ತು.

ಸಂಕೋಲೆ ಬಿಗಿದು ಕೊಂದರಾ?
ಪ್ರಕರಣ ಬಗ್ಗೆ ಪೊಲೀಸರ ವಿಚಾರಣೆ ವೇಳೆ ಉಮಾವತಿ ಶೆಟ್ಟಿ ನೀಡಿದ ಹೇಳಿಕೆಯನ್ನು ಗಮನಿಸಿದರೆ ಆತನ ಕಿರುಕುಳ ಸಹಿಸಲಾಗದೆ ಉದ್ದೇಶಪೂರ್ವಕವಾಗಿ ಕೊಲೆ ಮಾಡಲಾಗಿದೆ ಎಂಬ ಅನುಮಾನ ಮೂಡುತ್ತಿದೆ. ಯೂಸುಫ್‌ ಅವರ ಮನೆಯಿಂದ ಚೇತನ್‌ನನ್ನು ಸಂಕೋಲೆ ಬಿಗಿದು ಎಳೆದುಕೊಂಡು ಮನೆಗೆ ತಂದ ಬಳಿಕ ಕೊಲೆ ನಡೆಸಲಾಗಿದೆ ಎನ್ನಲಾಗಿದೆ. “ನೀನು ನನಗೆ ಎಷ್ಟು ತೊಂದರೆ ನೀಡುತ್ತೀಯಾ, ನಿನ್ನಿಂದ ಅಕ್ಕಪಕ್ಕದ ಮನೆಯವರಿಗೂ ತೊಂದರೆ ಆಗುತ್ತಿದೆ. ನೀನು ಬದುಕಿದರೆ ನನಗೆ ಕಷ್ಟ, ನೀನು ಸಾಯಿ’ ಎಂದು ಉಮಾವತಿ ಸರಪಳಿಯನ್ನು ಯೂಸುಫ್‌ ಕೈಗಿತ್ತು ಚೇತನ್‌ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ ವೇಳೆ ಯೂಸುಫ್‌ ಸರಪಳಿಯನ್ನು ಆತನ ಕುತ್ತಿಗೆಗೆ ಹಾಕಿ ಜೋರಾಗಿ ಎಳೆದ ಕಾರಣ ಆತ ಮೃತಪಟ್ಟಿದ್ದಾನೆ. ಕೊಲೆ ಮಾಡಿರುವುದು ಬೇರೆಯವರಿಗೆ ತಿಳಿಯು ವುದು ಬೇಡ ಎಂದು ನೆರೆಮನೆಯವರನ್ನು ಕರೆದು ಅವರಲ್ಲಿ ಸುಳ್ಳು ಹೇಳಿ ಆ್ಯಂಬುಲೆನ್ಸ್‌ ತರಿಸಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆತ್ಮಹತ್ಯೆ ಎಂದು ಬಿಂಬಿಸಲು ಸುಳ್ಳು ದೂರು ನೀಡಿದ್ದೆ ಎಂದು ಉಮಾವತಿ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ.

ಆತ್ಮಹತ್ಯೆ ಸುಳ್ಳು ಎಂದ ಗಾಯ!
ಚೇತನ್‌ ಸರಪಳಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆರಂಭದಲ್ಲಿ ಮೃತನ ತಾಯಿ ಉಮಾವತಿ ಪೊಲೀಸರಿಗೆ ದೂರು ನೀಡಿದ್ದರು. ಚೇತನ್‌ 5 ವರ್ಷಗಳಿಂದ ವಿಪರೀತ ಮದ್ಯ ಸೇವಿಸುತ್ತಿದ್ದ. ಸೆಂಟ್ರಿಂಗ್‌ ಕೆಲಸಕ್ಕೆ ಹೋಗುತ್ತಿದ್ದ ಆತ ಮೇ 9ರಂದು ವಿಪರೀತ ಮದ್ಯ ಸೇವಿಸಿ ಮನೆಗೆ ಬಂದಿದ್ದ. ಗಲಾಟೆ ಮಾಡುತ್ತಿದ್ದ ಆತನಿಗೆ ಬುದ್ದಿ ಹೇಳಿ ನಾವು ಮಲಗಿದ್ದೆವು. ಮೇ 10ರಂದು ಬೆಳಗ್ಗೆ 5 ಗಂಟೆಗೆ ಮನೆಯ ಕೊಟ್ಟಿಗೆ ಬಳಿ ಶಬ್ದ ಬಂದುದರಿಂದ ಹೋಗಿ ನೋಡಿದಾಗ ನಾಯಿಗೆ ಕಟ್ಟುವ ಸರಪಳಿಯನ್ನು ಚೇತನ್‌ ಕುತ್ತಿಗೆಗೆ ಸುತ್ತಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಕಂಡು ಬಂದಿದೆ. ದೇಹದಲ್ಲಿ ಯಾವುದೇ ಚಲನವಲನಗಳು ಇಲ್ಲದೇ ಇದ್ದ ಕಾರಣ ನೆರೆಮನೆಯವರ ಸಹಕಾರದಿಂದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಜೀವನದಲ್ಲಿ ಜುಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಆತನ ಸಾವಿನಲ್ಲಿ ಯಾವುದೇ ಸಂಶಯವಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದರು.

Advertisement

ಉಮಾವತಿ ನೀಡಿದ್ದ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಬಳಿಕದ ಪ್ರಕ್ರಿಯೆಗಳನ್ನು ನಡೆಸುತ್ತಿದ್ದ ಪೊಲೀಸರಿಗೆ ಚೇತನ್‌ ಮೃತದೇಹದ ಕುತ್ತಿಗೆ, ಬೆನ್ನು,ಸೊಂಟ, ಎಡಕಾಲು ಮತ್ತು ತೋಳು, ಬಲ ಭುಜದ ಮೇಲೆ ಗಾಯಗಳು ಇರುವುದು ಕಂಡು ಬಂತು. ಅನುಮಾನ ಬಂದು ತಾಯಿಯನ್ನು ತೀವ್ರ ರೀತಿಯಲ್ಲಿ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next