Advertisement

Puttur ಹಾಲು ಸಂಸ್ಕರಣೆ, ಪ್ಯಾಕಿಂಗ್‌ ಘಟಕ: ಜಾಗ ಮಂಜೂರಿಗೆ ಸರಕಾರದ ಅನುಮತಿ

11:26 PM Dec 08, 2023 | Team Udayavani |

ಪುತ್ತೂರು: ಬಹು ನಿರೀಕ್ಷಿತ ಅತ್ಯಾಧುನಿಕ ಹಾಲು ಸಂಸ್ಕರಣೆ ಮತ್ತು ಪ್ಯಾಕಿಂಗ್‌ ಘಟಕ ಸ್ಥಾಪನೆಗೆ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟ ನಿಯಮಿತಕ್ಕೆ ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮ ದಲ್ಲಿ 9.20 ಎಕರೆ ಮಂಜೂರು ಮಾಡಲು ಸರಕಾರ ಅನುಮತಿ ನೀಡಿದೆ.

Advertisement

ದ.ಕ.ದಲ್ಲಿ ಸಂಗ್ರಹ ಗೊಳ್ಳುವ ಹಾಲನ್ನು ಪ್ರಸ್ತುತ ಮಂಗಳೂರಿನ ಕುಲಶೇಖರ ಡೈರಿಯಲ್ಲಿ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಂಗ್ರಹಗೊಂಡ ಹಾಲನ್ನು ಉಪ್ಪೂರಿನ ಡೈರಿಯಲ್ಲಿ ಸಂಸ್ಕರಿಸಿ ಪ್ಯಾಕಿಂಗ್‌ ಮಾಡಿ ಸರಬರಾಜು ಮಾಡಲಾಗುತ್ತಿದೆ. ಪುತ್ತೂರಿನಲ್ಲಿ ಡೈರಿ ತೆರೆದು ಪ್ರತೀ ದಿನ 1.5 ಲಕ್ಷ ಲೀಟರ್‌ ಹಾಲು ಸಂಸ್ಕರಣೆ ಮತ್ತು ಪ್ಯಾಕಿಂಗ್‌ ಕಾರ್ಯ ನಡೆಸಲು ಉದ್ದೇಶಿಸಲಾಗಿದೆ.

ಉದ್ಯೋಗ ಸೃಷ್ಟಿ ,
ಖರ್ಚು ಉಳಿತಾಯ
ಪುತ್ತೂರು, ಸುಳ್ಯ, ಕಡಬ, ವಿಟ್ಲ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಸಂಗ್ರಹವಾಗುವ ಹಾಲನ್ನು ಕುಲಶೇಖರ ಡೈರಿಗೆ ಒಯ್ಯಲು ಪ್ರತೀ ದಿನ ಕಿ.ಮೀ. ಒಂದಕ್ಕೆ 1 ರೂ. ಸಾಗಾಟ ವೆಚ್ಚ ತಗಲುತ್ತದೆ. ಪ್ಯಾಕೆಟ್‌ ಹಾಲನ್ನು ಮರಳಿ ತರಲು ಪ್ರತೀ ದಿನ ಪ್ರತೀ ಲೀಟರ್‌ಗೆ 85 ಪೈಸೆ ವೆಚ್ಚವಾಗುತ್ತದೆ. ಪುತ್ತೂರಿನಲ್ಲಿ ಡೈರಿ ನಿರ್ಮಿಸಿದರೆ ಸಾಗಾಟ ವೆಚ್ಚ ಉಳಿಯಲಿದೆ. ದ.ಕ. ಜಿಲ್ಲೆಯಲ್ಲಿನ 75 ಹಾಲಿನ ಸೊಸೈಟಿಗಳ ಪೈಕಿ ಪ್ರಸ್ತುತ ಪುತ್ತೂರು ಉಪವಿಭಾಗ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಹಾಲು ಉತ್ಪತ್ತಿಯಾಗುತ್ತಿದೆ. ಪುತ್ತೂರಿನಲ್ಲಿ ಡೈರಿ ನಿರ್ಮಾಣದಿಂದ 750 ಜನರಿಗೆ ಉದ್ಯೋಗ ಸಿಗಲಿದೆ.

60 ಕೋ.ರೂ. ಯೋಜನೆ
ಜಾಗದ ಪಹಣಿ ಆದ ಅನಂತರದ 2 ವರ್ಷಗಳಲ್ಲಿ ಅತ್ಯಾಧುನಿಕ ಸಂಸ್ಕರಣ ಮತ್ತು ಪ್ಯಾಕಿಂಗ್‌ ಘಟಕ ನಿರ್ಮಿಸುವ ಗುರಿ ಇದೆ. ಇದಕ್ಕೆ 50ರಿಂದ 60 ಕೋಟಿ ರೂ. ಅಗತ್ಯ ಇದೆ. ಪುತ್ತೂರು ನಗರದ ಆಸುಪಾಸಿನಲ್ಲೇ 15 ಎಕರೆ ಸರಕಾರಿ ಜಾಗವನ್ನು ದ.ಕ. ಸಹಕಾರಿ ಹಾಲು ಒಕ್ಕೂಟ ನಿಯಮಿತ (ಡಿಕೆಎಂಯುಎಲ್‌)ಕ್ಕೆ ಮಂಜೂರು ಮಾಡುವ ಪ್ರಯತ್ನ ನಡೆದಿತ್ತು. ಶಾಸಕರು ಈ ಸಂಬಂಧ ಎರಡು ಬಾರಿ ಕಂದಾಯ ಇಲಾಖೆ ಮತ್ತು ಹಾಲು ಒಕ್ಕೂಟದ ಆಡಳಿತ ಮಂಡಳಿಯ ಜತೆ ಸಭೆ ನಡೆಸಿದ್ದರು. ಪ್ರಸ್ತುತ 15 ಎಕರೆಯಲ್ಲಿ 9.20 ಎಕರೆ ಮಂಜೂರಿಗೆ ಸಮ್ಮತಿ ಸಿಕ್ಕಿದ್ದು ಉಳಿದ 4 ಎಕರೆಯನ್ನು ಮಾರುಕಟ್ಟೆ ಮೌಲ್ಯ ನೀಡಿ ಖರೀದಿಸಲಾಗುವುದು.

ಅರ್ಧ ಮೊತ್ತ ಪಾವತಿ
ಮಂಜೂರಾಗಿರುವ ಜಮೀನು ಕುಮ್ಕಿ ಆಗಿದ್ದು ಕುಮ್ಕಿಹಕ್ಕು ವಿರಹಿತಗೊಳಿಸಿದ ಅನಂತರ ಮಾರುಕಟ್ಟೆ ಮೌಲ್ಯದ ಶೇ. 50ರಷ್ಟನ್ನು ಸರಕಾರಕ್ಕೆ ಪಾವತಿಸುವಂತೆ ಡಿಕೆಎಂಯುಎಲ್‌ಗೆ ಸೂಚಿಸಲಾಗಿದೆ.

Advertisement

ಹಾಲು ಸಂಸ್ಕರಣೆ ಮತ್ತು ಪ್ಯಾಕಿಂಗ್‌ ಘಟಕ ಸ್ಥಾಪನೆಗೆ ಜಾಗ ಒದಗಿಸುವಂತೆ ದ.ಕ. ಸಹಕಾರಿ ಹಾಲು ಒಕ್ಕೂಟ ನಿಯಮಿತ ಮನವಿ ಮಾಡಿತ್ತು. ಪೂರಕ ಪ್ರಕ್ರಿಯೆಗಳ ಬಳಿಕ ಇದೀಗ ಸರಕಾರದ ಹಂತದಲ್ಲಿ ಮಂಜೂರಾತಿ ಸಿಕ್ಕಿದೆ. ಇದರಿಂದ ಪುತ್ತೂರಿನಲ್ಲಿ ಉದ್ಯೋಗ ಸೃಷ್ಟಿಗೆ ಅವಕಾಶ ಸಿಗಲಿದೆ.
– ಅಶೋಕ್‌ ಕುಮಾರ್‌ ರೈ,
ಶಾಸಕ, ಪುತ್ತೂರು

 

Advertisement

Udayavani is now on Telegram. Click here to join our channel and stay updated with the latest news.

Next