Advertisement

ಪುತ್ತೂರು: ಮಹಾಲಿಂಗೇಶ್ವರ ದೇವಾಲಯ ತಂತ್ರಿಗಳ ಬದಲಾವಣೆ

03:33 PM Mar 25, 2017 | |

ಪುತ್ತೂರು: ಆಡಳಿತ ಮಂಡಳಿ ತೀರ್ಮಾನದಂತೆ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇ ಶ್ವರ ದೇವಸ್ಥಾನದ ತಂತ್ರಿಗಳನ್ನು ಬದಲಾಯಿಸಲಾಗಿದೆ.

Advertisement

ಕುಂಟಾರು ರವೀಶ್‌ ತಂತ್ರಿ ಅವರ ಬದಲು ಕೆಮ್ಮಿಂಜೆ ನಾಗೇಶ ತಂತ್ರಿ ಅವರನ್ನು ಆ ಸ್ಥಾನಕ್ಕೆ ನೇಮಿಸಿ, ಜಾತ್ರೆ ಆಮಂತ್ರಣ ನೀಡಿ ಆಹ್ವಾನಿಸಲಾಗಿದೆ. ದೇವಸ್ಥಾನದಲ್ಲಿ ನೀಲೇಶ್ವರ, ಕುಕ್ಕಾಡಿ ಪುತ್ತೂರಾಯ, ಕುಡುಪು, ವರ್ಕಾಡಿ, ಕಲ್ಲೂರಾಯ, ಕುಡುಪು ಸಹಿತ ಹಲವು ತಂತ್ರಿಗಳು ಬೇರೆ-ಬೇರೆ ಅವಧಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಎನ್‌.ಕೆ. ಜಗನ್ನಿವಾಸ ರಾವ್‌ ಆಡಳಿತ ಅವಧಿಯಲ್ಲಿ ಕುಡುಪು ತಂತ್ರಿ ಅವರ ಅನಂತರ ಕುಂಟಾರು ರವೀಶ್‌ ತಂತ್ರಿಗಳನ್ನು ನೇಮಿಸಲಾಗಿತ್ತು. 16 ವರ್ಷಗಳಿಂದ ಇವರುಶ್ರೀ ಕ್ಷೇತ್ರದ ತಂತ್ರಿಗಳಾಗಿದ್ದರು.

ಕೆಲ ವರ್ಷದ ಹಿಂದೆ ಜೀರ್ಣೋದ್ಧಾರದ ಸಂದರ್ಭದಲ್ಲಿ ನಡೆದ ಅಷ್ಟಮಂಗಲ ಚಿಂತನೆಯಲ್ಲಿ ಮೂಲ ತಂತ್ರಿ ಗಳನ್ನು ಮುಂದುವರಿಸಬೇಕೆಂಬ ಅಂಶ ಕೇಳಿಬಂದಿತ್ತು. ಆಗ ಕಾರ್ಯ ನಿರ್ವಹಿಸುತ್ತಿದ್ದ ರವೀಶ್‌ ತಂತ್ರಿಗಳನ್ನೇ ಮುಂದುವರಿಸಲೂ ಒಪ್ಪಿಗೆ ದೊರೆತಿತ್ತು. ಅದರಂತೆ ಅವರ ನೇತೃತ್ವದಲ್ಲೇ ಬ್ರಹ್ಮಕಲಶ ನಡೆದಿತ್ತು. 

ಬದಲಾವಣೆಗೆ ನೊಟೀಸ್‌
ಕಳೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ರವೀಶ್‌ ತಂತ್ರಿ ಅವರಿಗೆ, ದೇವಸ್ಥಾನದದ ಕಾರ್ಯ ನಿರ್ವಹಣಾಧಿಕಾರಿ ರಾಜಕೀಯ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಿದ್ದರಿಂದ ಯಾಕೆ ನಿಮ್ಮನ್ನು ಬದಲಾಯಿಸಬಾರದು ಎಂದು ನೊಟೀಸ್‌ ಜಾರಿ ಮಾಡಿದ್ದರು. ಇದಕ್ಕೆ ರವೀಶ್‌ ತಂತ್ರಿ ಉತ್ತರ ನೀಡಿದ್ದರು. ಆ ವಿಚಾರ ತಣ್ಣಗಾಗಿ ಉತ್ಸವಗಳಲ್ಲಿ ಕುಂಟಾರು ತಂತ್ರಿಗಳ ಹೆಸರೇ ಆಮಂತ್ರಣ ಪತ್ರದಲ್ಲಿ ಮುದ್ರಣಗೊಂಡಿತ್ತು.

ಕೆಲ ತಿಂಗಳ ಹಿಂದೆ ನೂತನ ವ್ಯವಸ್ಥಾಪನ ಸಮಿತಿ ನೇಮಕಗೊಂಡು, ಪೂಕರೆ ಉತ್ಸವ, ಶಿವರಾತ್ರಿ ಉತ್ಸವಕ್ಕೆ ಕುಂಟಾರು ತಂತ್ರಿ ಅವರಿಗೆ ಆಮಂತ್ರಣ ನೀಡಲಾಗಿತ್ತು. ಆಮಂತ್ರಣದಲ್ಲಿ ಅವರ ಹೆಸರಿದ್ದರೂ, ಉತ್ಸವಾದಿಗಳಿಗೆ ಅವರ ಸಹೋದರ ಶ್ರೀಧರ ತಂತ್ರಿ ಬರುತ್ತಿದ್ದರು. ಈ ಹಿನ್ನೆಲೆಯಲ್ಲಿ ಬದಲಾವಣೆ ಕೈಗೊಂಡಿದ್ದು, ಮೂಲ ತಂತ್ರಿಗಳಾದ ಕೆಮ್ಮಿಂಜೆ ತಂತ್ರಿಗಳನ್ನು ನೇಮಿಸಿ, ಆಮಂತ್ರಣ ನೀಡಲಾಗಿದೆ ಎಂಬ ಮಾಹಿತಿ ವ್ಯಕ್ತವಾಗಿದೆ.

Advertisement

ಜಿಲ್ಲಾಧಿಕಾರಿ ಹೆಸರಿನ ಗೊಂದಲ
ಕಳೆದ ಬಾರಿಯ ಜಾತ್ರೆಯಲ್ಲೂ ಆಮಂತ್ರಣ ಪತ್ರಿಕೆ ದೊಡ್ಡ ವಿವಾದವೇ ಸೃಷ್ಟಿಯಾಗಿತ್ತು. ಜಿಲ್ಲಾಧಿಕಾರಿ ಯಾಗಿದ್ದ ಇಬ್ರಾಹಿಂ ಹೆಸರನ್ನು ನಮೂದಿಸಿದ್ದನ್ನು ಭಕ್ತ ವರ್ಗ ಆಕ್ಷೇಪಿಸಿತ್ತು. ಕೊನೆಗೆ ಹೆಸರು ಬದಲಾಯಿಸಿ, ಆಮಂತ್ರಣ ಪತ್ರಿಕೆ ಮರು ಮುದ್ರಿಸಲಾಗಿತ್ತು.

ಆಡಳಿತ ಮಂಡಳಿ ತೀರ್ಮಾನ 
ಆಡಳಿತ ಮಂಡಳಿ ತೀರ್ಮಾನದಂತೆ ಕೆಮ್ಮಿಂಜೆ ತಂತ್ರಿಗಳಿಗೆ ಜಾತ್ರೆಯ ಆಮಂತ್ರಣ ಪತ್ರಿಕೆ ನೀಡಲಾಗಿದೆ. ಈ ಹಿಂದೆ ಉತ್ಸವಗಳಿಗೂ ಕುಂಟಾರು ತಂತ್ರಿಗಳ ಹೆಸರಿನಲ್ಲಿ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿ ನೀಡಲಾಗಿತ್ತು. ಆದರೆ ಅವರು ಬಾರದೇ ಬೇರೆಯವರನ್ನು ಕಳುಹಿಸಿದ್ದರು. ಹಾಗಾಗಿ ಆಡಳಿತ ಮಂಡಳಿಗೆ ಇಂತಹ ತೀರ್ಮಾನ ಕೈಗೊಳ್ಳುವುದು ಅನಿವಾರ್ಯವಾಗಿತ್ತು.

-ಎನ್‌. ಸುಧಾಕರ ಶೆಟ್ಟಿ,  ಅಧ್ಯಕ್ಷ, ವ್ಯವಸ್ಥಾಪನ ಸಮಿತಿ, ಶ್ರೀ ಕ್ಷೇತ್ರ ಪುತ್ತೂರು

ಮಹಾಲಿಂಗೇಶ್ವರನೇ ತೀರ್ಮಾನಿಸಲಿ
ತಂತ್ರಿಗಳ ಬದಲಾವಣೆಯ ಸಂದರ್ಭದಲ್ಲಿ ಪೂರ್ವ ಪರಂಪರೆಯ ಶಿಷ್ಟಚಾರ ಅನುಸರಿಸಬೇಕು. ಅದನ್ನು ಪಾಲಿ ಸಿಲ್ಲ. ಆಡಳಿತ ಮಂಡಳಿಯಾಗಲಿ, ಆಚಾರ್ಯ ಪರಂಪರೆ ಹಿನ್ನೆಲೆಯ ಕೆಮ್ಮಿಂಜೆ ತಂತ್ರಿಗಳಾಗಲಿ ಈ ಕುರಿತು ನನ್ನಲ್ಲಿ ಮಾತನಾಡಿಲ್ಲ. ಮಹಾಲಿಂಗೇಶ್ವರನ ನೆಲದಲ್ಲಿ ನಾನು ಯಾರ ವಿರುದ್ಧವೂ ಹೋಗುವುದಿಲ್ಲ. ಜಾತ್ರೆಯ ಧ್ವಜಾ ರೋಹಣಕ್ಕೆ ಮುನ್ನ ದೇವಾಲಯಕ್ಕೆ ಬಂದು ಪ್ರಾರ್ಥನೆ ಸಲ್ಲಿಸುವೆ. ನ್ಯಾಯ ತೀರ್ಮಾನವನ್ನು ದೇವರೇ ಮಾಡಲಿ.
-ಕುಂಟಾರು ರವೀಶ್‌ ತಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next