Advertisement

ಪುತ್ತೂರು ಪಶು ಆಸ್ಪತ್ರೆಗೆ ಹೊಸ ಕಟ್ಟಡದ ಭಾಗ್ಯ

04:57 PM Nov 06, 2017 | |

ನಗರ: ಬ್ರಿಟಿಷ್‌ ಕಾಲದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಪಶು ಆಸ್ಪತ್ರೆಗೆ 26.83 ಲ.ರೂ. ಅನುದಾನದಡಿ ಹೊಸ ಕಟ್ಟಡದ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

Advertisement

ಕೊನೆಗೂ ಹೊಸ ಕಟ್ಟಡಕ್ಕೆ ಅನುದಾನ ಮಂಜೂರುಗೊಂಡಿದ್ದು, ಶೀಘ್ರದಲ್ಲೇ ಪಶು ಆಸ್ಪತ್ರೆ ತನ್ನ ಹಳೆಯ ಸ್ವರೂಪದ ಕಟ್ಟಡದ ಬದಲು ಹೊಸ ವಿನ್ಯಾಸದ ಕಟ್ಟಡದಲ್ಲಿ ಆರಂಭಗೊಳ್ಳಲಿದೆ.

ಪಶು ಆಸ್ಪತ್ರೆಯ ವಿವರ
ಪುತ್ತೂರು ತಾಲೂಕು ಪಶು ಆಸ್ಪತ್ರೆಯ ವ್ಯಾಪ್ತಿಯಲ್ಲಿ ಒಟ್ಟು 17 ಕೇಂದ್ರಗಳಿವೆ. ಕಡಬ, ಪುತ್ತೂರು, ಉಪ್ಪಿನಂಗಡಿ, ಪಾಣಾಜೆಯಲ್ಲಿ ಪಶು ಆಸ್ಪತ್ರೆ, ಕೌಕ್ರಾಡಿ, ನರಿಮೊಗರು, ಕೊಳ್ತಿಗೆಯಲ್ಲಿ ಪಶು ಚಿಕಿತ್ಸಾಲಯಗಳು, ಶಿರಾಡಿ, ನೆಲ್ಯಾಡಿ, ಕೋಡಿಂಬಾಡಿ, ಕುಂತೂರುಪದವು, ಕಲ್ಲುಗುಡ್ಡೆ, ಬೆಳಂದೂರು, ಬಲ್ನಾಡು, ಈಶ್ವರಮಂಗಲ, ಕೌಡಿಚ್ಚಾರು, ಕೆದಂಬಾಡಿಯಲ್ಲಿ ಪ್ರಾಥಮಿಕ ಪಶು ಪಾಲನ ಕೇಂದ್ರಗಳಿವೆ.

ನಬಾರ್ಡ್‌ನಲ್ಲಿ ಅನುದಾನ
ನಬಾರ್ಡ್‌ ಯೋಜನೆಯ ಗ್ರಾಮೀಣ ಮೂಲ ಸೌಕರ್ಯ ನಿಧಿಯಡಿ 26.83 ಲಕ್ಷ ರೂ. ಅನುದಾನ ಮಂಜೂರುಗೊಂಡಿದ್ದು, ನೂತನ ಕಟ್ಟಡ ನಿರ್ಮಾಣಕ್ಕೆ ಕೆಲವು ತಿಂಗಳ ಹಿಂದೆ ಶಿಲಾನ್ಯಾಸ ನಡೆದು ಕಾಮಗಾರಿಗೆ ಚಾಲನೆ ದೊರೆತಿದೆ.

ಕಾಮಗಾರಿಯ ಸಂಪೂರ್ಣ ಹೊಣೆಯನ್ನು ಸುರತ್ಕಲ್‌ನಲ್ಲಿ ಇರುವ ನಿರ್ಮಿತಿ ಕೇಂದ್ರ ಹೊತ್ತಿದೆ. ಇದೀಗ ಆಧುನಿಕ ಶೈಲಿಯಲ್ಲಿ ಕಟ್ಟಡ ಕಾಮಗಾರಿ ಸಾಗುತ್ತಿದ್ದು, ಗೋಡೆ ಕೆಲಸ ಪೂರ್ಣಗೊಂಡು, ಲಿಂಟಲ್‌ ತನಕ ಕೆಲಸ ಆಗಿದೆ.

Advertisement

ಆಸ್ಪತ್ರೆಯಲ್ಲಿನ ಸೌಲಭ್ಯಗಳು
ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ದನ, ನಾಯಿ, ಆಡು, ಕೋಳಿ, ಹಂದಿ ಇನ್ನಿತರ ಸಾಕು ಪ್ರಾಣಿಗಳಿಗೆ ಉಚಿತ ಚಿಕಿತ್ಸಾ ಸೌಲಭ್ಯಗಳನ್ನು ನೀಡುವುದರ ಜತೆಗೆ ಜಂತು ನಾಶಕ ಮಾತ್ರೆ, ಇನ್ನಿತರ ಆ್ಯಂಟಿ ಬಯೋಟಿಕ್‌ ಔಷಧಗಳನ್ನು ಉಚಿತವಾಗಿ ನೀಡಲಾಗುತ್ತಿದೆ.

ಉಳಿದೆಡೆ ಹೊಸ ಕಟ್ಟಡ
ತಾಲೂಕಿನಲ್ಲಿ ಪುತ್ತೂರು ಸಹಿತ ಉಪ್ಪಿನಂಗಡಿ, ಕೋಡಿಂಬಾಡಿಯಲ್ಲಿ ಪಶು ವೈದ್ಯಕೀಯ ಆಸ್ಪತ್ರೆಗಳಿದ್ದು, ಇವೆಲ್ಲವೂ ಹೊಸ ಸ್ವರೂಪವನ್ನು ಪಡೆಯಲಿವೆ. ಉಪ್ಪಿನಂಗಡಿ ಹಾಗೂ ಕೋಡಿಂಬಾಡಿಯಲ್ಲಿ ಕಟ್ಟಡದ ತಳ ಹಂತ ಕಾಮಗಾರಿ ಮುಗಿದಿದೆ.

ಪುತ್ತೂರಿನಲ್ಲಿ ಇತ್ತೀಚೆಗಷ್ಟೇ ಪುನರ್‌ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಅಂತೂ ತ್ವರಿತ, ಉತ್ತಮ ಸೇವೆ ನೀಡುವ
ನಿಟ್ಟಿನಲ್ಲಿ ಪಶು ವೈದ್ಯಕೀಯ ಆಸ್ಪತ್ರೆಗಳು ಶೀಘ್ರ ತಲೆ ಎತ್ತಲಿವೆ.

ಹಳೆ ಕಟ್ಟಡ
ಬ್ರಿಟಿಷರ ಕಾಲದ ಈ ಕಟ್ಟಡ ವಿಶೇಷ ವಿನ್ಯಾಸದೊಂದಿಗೆ ನಿರ್ಮಾಣಗೊಂಡಿದ್ದು, ಅತ್ಯಂತ ಹಳೆಯ ಕಟ್ಟಡಗಳಲ್ಲಿ ಒಂದು
ಎನ್ನಲಾಗಿದೆ. ಹೊಸ ಕಟ್ಟಡದಲ್ಲಿ ಸುಸಜ್ಜಿತ ಚಿಕಿತ್ಸಾ ವಿಭಾಗ, ಪ್ರಯೋಗಾಲಯ, ಇನ್ನಿತರ ಸೌಲಭ್ಯಗಳು ಒಳಗೊಳ್ಳಲಿವೆ.

ಹುದ್ದೆ ಖಾಲಿ
ಈಗಾಗಲೇ ಈ ಆಸ್ಪತ್ರೆಯಲ್ಲಿ 12 ಹುದ್ದೆಗಳು ಅನಿವಾರ್ಯವಿದ್ದರೂ ಸಹಾಯಕ ನಿರ್ದೇಶಕರು, ಪಶು ವೈದ್ಯಾಧಿಕಾರಿ ಸಹಿತ ಐದು ಹುದ್ದೆಗಳು ಇವೆ. ಉಳಿದಂತೆ ಏಳು ಹುದ್ದೆಗಳು ಖಾಲಿ ಇವೆ.

ಕಾಮಗಾರಿ ಪ್ರಗತಿಯಲ್ಲಿದೆ
26.83 ಲ.ರೂ ಅನುದಾನ ಬಿಡುಗಡೆಗೊಂಡಿದ್ದು, ಹಳೆ ಕಟ್ಟಡ ಬಳಿಯಲ್ಲಿ ಹೊಸ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ.
ಡಾ| ಸುರೇಶ್‌ ಭಟ್‌ ಪಿ., 
  ಸಹಾಯಕ ನಿರ್ದೇಶಕರು, ಪಶುಸಂಗೋಪನ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next