Advertisement

ಜೋಪಡಿಯಲ್ಲಿ ಉಳಿದ ಮಕ್ಕಳು, ಗರ್ಭಿಣಿ, ವೃದ್ಧರು

09:34 PM May 05, 2021 | Team Udayavani |

ಪುತ್ತೂರು: ಊರಿಗೆ ತೆರಳಲಾಗದೆ, ಆದಾಯ ಇಲ್ಲದೆ ಪುತ್ತೂರು ಜಾತ್ರೆ ಗದ್ದೆಯಲ್ಲಿನ ಜೋಪಡಿಯಲ್ಲಿ ಉಳಿದಿರುವ ಪುಟ್ಟ ಮಕ್ಕಳು, ಗರ್ಭಿಣಿ ಸಹಿತ  9 ಕುಟುಂಬಗಳ 60 ಜನರ ಆರೋಗ್ಯ ಸೇರಿದಂತೆ ಮೂಲ ಸೌಕರ್ಯಗಳ ಬಗ್ಗೆ ಅರಿತು ಕೊಳ್ಳಬೇಕಿದ್ದ ನಗರಸಭೆ, ತಾಲೂಕು ಆಡಳಿತ, ಆರೋಗ್ಯ ಇಲಾಖೆ ಅಧಿಕಾರಿಗಳು ಈ ತನಕ ಸ್ಥಳಕ್ಕೆ ಭೇಟಿಯೇ ನೀಡಿಲ್ಲ.

Advertisement

ಒಂದೆಡೆ ಕೋವಿಡ್‌ ಪ್ರಕರಣ ಹೆಚ್ಚಾಗುತ್ತಿದ್ದು, ಇನ್ನೊಂದೆಡೆ ಅಕಾಲಿಕ ಮಳೆ ಸುರಿಯುತ್ತಿದೆ. ಇಂತಹ ಸಂಕಷ್ಟದ ನಡುವೆ ಈ ಕುಟುಂಬಗಳು  ಜೋಪಡಿಯೊಳಗೆ ಉಳಿದುಕೊಂಡಿದ್ದು ಕನಿಷ್ಠ ಪಕ್ಷ ಸ್ಥಳಕ್ಕೆ ಭೇಟಿ ನೀಡುವಷ್ಟು ಆಡಳಿತ ವರ್ಗ ಆಸಕ್ತಿ ತೋರಿಲ್ಲ.  ಇದು ಆರೋಗ್ಯದ ಬಗ್ಗೆ ಸಭೆಗಷ್ಟೇ ಕಾಳಜಿ ತೋರಲಾಗುತ್ತಿದೆಯೇ ಎಂಬ ಅನುಮಾನ  ಹುಟ್ಟಲು ಕಾರಣವಾಗಿದೆ.

ಅಲ್ಲಿ ವಾಸಿಸುತ್ತಿರುವವ ಆರೋಗ್ಯ ವಿಚಾರಣೆ, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಸೇರಿದಂತೆ ಸರ್ವ ಇಲಾಖೆಯ ಅಧಿಕಾರಿಗಳು ಇರುವ ಕೋವಿಡ್‌ ನಿಯಂತ್ರಣ ತಂಡ ಸ್ಥಳಕ್ಕೆ ಧಾವಿಸಬೇಕಾದದ್ದು ಅವರ ಜವಾಬ್ದಾರಿ. ಉಪವಿಭಾಗ ವ್ಯಾಪ್ತಿಗೆ ಸೇರಿದ ಬಹುತೇಕ ಕಚೇರಿ ಇರುವ ತಾಲೂಕು ಆಡಳಿತದ ಅಧಿಕಾರದ ಕೇಂದ್ರ ಸ್ಥಾನದಿಂದ ಕೆಲವು ಅಂತರದಲ್ಲಿ ಇರುವ ಜೋಪಡಿ ಸ್ಥಳಕ್ಕೆ ತೆರಳಲು ಆಡಳಿತ ನಿರ್ಲಕ್ಷ್ಯ ವಹಿಸಿದೆ ಎಂದಾದರೆ ಹತ್ತಾರು ಕಿ.ಮೀ. ದೂರದಲ್ಲಿನ ಸಮಸ್ಯೆಗಳಿಗೆ ಸ್ಪಂದನೆ ನೀಡವವರು ಯಾರು ಎಂಬ ಪ್ರಶ್ನೆಯೀಗ ಸಾರ್ವಜನಿಕ ವಲಯದಲ್ಲಿ ಮೂಡಿದೆ.

9 ಕುಟುಂಬ :

ತಂಡದಲ್ಲಿ ಒಟ್ಟು 9 ಕುಟುಂಬಗಳಿವೆ. ಜಾತ್ರೆ ಗದ್ದೆಯಲ್ಲಿ ಅಳವಡಿಸಿರುವ ಬೇರೆ-ಬೇರೆ ಜೋಪಡಿಯಲ್ಲಿ ಅವರು ವಾಸಿಸುತ್ತಿದ್ದಾರೆ. ಒಟ್ಟು 50 ಮಂದಿಗೂ ಮಿಕ್ಕಿ ಇದ್ದಾರೆ. 13 ಕ್ಕೂ ಅಧಿಕ ಮಕ್ಕಳು, ತುಂಬು ಗರ್ಭಿಣಿ,   ವೃದ್ಧರು ಕೂಡ ಇಲ್ಲಿದ್ದಾರೆ. ಹೊರ ಜಿಲ್ಲೆಯವರಾಗಿರುವ ಕಾರಣ ದ.ಕ.ಜಿಲ್ಲೆಯ ಮಳೆಯ ತೀವ್ರತೆ, ಸಾಂಕ್ರಾಮಿಕ ರೋಗದ ಭೀತಿ ಬಗ್ಗೆ ಆ ಕುಟುಂಬಗಳಿಗೆ ಸಮರ್ಪಕ ಮಾಹಿತಿ ಇಲ್ಲ.

Advertisement

ತಾಲೂಕು ಆರೋಗ್ಯ, ಕಂದಾಯ, ಸ್ಥಳೀಯಾಡಳಿತ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಆರೋಗ್ಯದ ಬಗ್ಗೆ ನಿಗಾ ಇರಿಸಬೇಕಿದೆ. ಈಗಾಗಲೇ ದೇವಾಲಯದ ವತಿಯಿಂದ ಉಳಿದುಕೊಳ್ಳಲು ಸಭಾಭವನದ ಒದಗಿಸುವ ಭರವಸೆ ನೀಡಲಾಗಿದೆ. ಅಗತ್ಯವೆನಿಸಿದರೆ ತಾಲೂಕು ಆಡಳಿತ ವಾಸಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕಿದೆ. ಏಕೆಂದರೆ ಕುಟುಂಬಗಳು ಜೋಪಡಿ ಕಟ್ಟಿಕೊಂಡಿರುವ ಪ್ರದೇಶ ಮಳೆಗಾಲದಲ್ಲಿ ನೀರಿನಿಂದ ಆವೃತ್ತವಾಗುವ ಸ್ಥಳವಾಗಿದೆ.

ದೇವಾಲಯದ ಗದ್ದೆಯಲ್ಲಿ ಉಳಿದುಕೊಂಡಿರುವ ಕುಟುಂಬಗಳು ಬಗ್ಗೆ ಮಾಹಿತಿ ಪಡೆದಿದ್ದೇನೆ. ಈ ಬಗ್ಗೆ ತಾಲೂಕು ಆಡಳಿತದ ಜತೆ ಚರ್ಚಿಸಿ ಸ್ಪಂದಿಸುವ ಪ್ರಯತ್ನ ನಡೆಯುತ್ತಿದೆ. ರೂಪಾ ಶೆಟ್ಟಿ, ಪೌರಾಯುಕ್ತೆ, ನಗರಸಭೆ

ಅಲ್ಲಿ 60 ಕ್ಕೂ ಅಧಿಕ ಮಂದಿ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅವರ ಆರೋಗ್ಯ ಬಗ್ಗೆ ನಿಗಾ ಇರಿಸಲು ನಗರ ಸಮುದಾಯ ವೈದ್ಯರಿಗೆ ಸೂಚನೆ ನೀಡುತ್ತೇನೆ. ಆರೋಗ್ಯದ ಬಗ್ಗೆ  ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುವುದು.  ಡಾ| ಅಶೋಕ್‌ ಕುಮಾರ್‌ ರೈ, ತಾಲೂಕು ಆರೋಗ್ಯಧಿಕಾರಿ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next