Advertisement

ಪುತ್ತೂರು: ಸಂಚಾರ ಸುವ್ಯವಸ್ಥೆಗೆ ಪ್ರಾಯೋಗಿಕ ಮುನ್ನುಡಿ

10:33 AM Jul 30, 2018 | |

ಪುತ್ತೂರು: ಸಂಚಾರ ನಿಯಂತ್ರಣ, ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಜನರಿಂದ ಸಂಗ್ರಹಿಸಿದ ಅಭಿಪ್ರಾಯಕ್ಕೆ ಪೂರಕವಾಗಿ ಪೊಲೀಸ್‌ ಇಲಾಖೆ ಪುತ್ತೂರು ನಗರದ ಹೃದಯ ಭಾಗದಲ್ಲಿ ವಾಹನಗಳ ಸಂಚಾರಕ್ಕೆ ಸಂಬಂಧಿಸಿ ಕೆಲವು ಬದಲಾವಣೆಗೆ ಪ್ರಾಯೋಗಿಕ ಮುನ್ನಡಿ ಇಟ್ಟಿದೆ. ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ರವಿವಾರದಿಂದಲೇ ಕಾರ್ಯರೂಪಕ್ಕೆ ಇಳಿಸಲಾಗಿದೆ. ವ್ಯತ್ಯಾಸ ಮಾಡಿದಲ್ಲಿ ಸಂಚಾರ ಪೊಲೀಸರನ್ನು ನಿಯೋಜಿಸಿ, ಸವಾರರಿಗೆ ಮಾಹಿತಿ ನೀಡಲಾಗುತ್ತಿದೆ. ಮುಂದೆ ಸೂಚನ ಫಲಕ ಅಳವಡಿಸಲಾಗುತ್ತದೆ. ಸೋಮವಾರ ವಾಹನಗಳ ಸಂಚಾರ ಜಾಸ್ತಿ ಇರುವ ಕಾರಣ ಬದಲಾದ ವ್ಯವಸ್ಥೆಯ ಅರಿವು ಮೂಡಿಸುವ ಸವಾಲು ಸಂಚಾರ ಪೊಲೀಸರಿಗಿದೆ.

Advertisement

ಸಪ್ತಾಹದ ಅಭಿಪ್ರಾಯ
ಪುತ್ತೂರಿನ ಸಂಚಾರ ಅವ್ಯವಸ್ಥೆಯ ಕುರಿತು ಸಾರ್ವಜನಿಕ ವಲಯದಿಂದ ಆರೋಪ, ಅಸಮಾಧಾನಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ನಗರ ಠಾಣೆ ಹಾಗೂ ಸಂಚಾರ ಪೊಲೀಸ್‌ ಠಾಣೆಯ ನೇತೃತ್ವದಲ್ಲಿ ಸಾರ್ವಜನಿಕರಿಂದಲೇ ಅಭಿಪ್ರಾಯ ಸಂಗ್ರಹಣೆಗೆ ಇಲಾಖೆಗಳ ಅಧಿಕಾರಿಗಳನ್ನೂ ಕೂಡಿಕೊಂಡು ಸಪ್ತಾಹವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು, ಆಟೋ ರಿಕ್ಷಾ ಸಂಘಟನೆಗಳು, ವರ್ತಕರಿಂದ ಲಿಖಿತ ಅಭಿಪ್ರಾಯಗಳನ್ನು ಪಡೆದು ಈ ಪ್ರಯೋಗ ಮಾಡಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬದಲಾವಣೆ ಹೇಗೆಂದರೆ…
· ಆಟೋ ರಿಕ್ಷಾಗಳಿಗೆ ವಿಕ್ಟರ್ ಶಾಲಾ ಬಳಿಯಿಂದ ಸಂಜೀವ ಶೆಟ್ಟಿ ಅಂಗಡಿ ತನಕದ ರಸ್ತೆ ಒನ್‌ ವೇ ಮಾಡಲಾಗಿದೆ.
· ಬೊಳುವಾರು ಕಡೆಯ ರಿಕ್ಷಾಗಳು ಹಳೆ ಪೋಸ್ಟ್‌ ಬಜಾರ್‌ ರಸ್ತೆ ಮೂಲಕ ಬಸ್‌ ನಿಲ್ದಾಣದ ಬಳಿಯಿಂದ ಬರಬೇಕು.
· ಭುವನೇಂದ್ರ ಕಲಾ ಮಂದಿರ ರಸ್ತೆಯ ಒನ್‌ ವೇ ನಿಯಮ ರದ್ದು.
· ಬಸ್‌ ನಿಲ್ದಾಣದ ಬಳಿಯ ಸೂಪರ್‌ ಟವರ್‌ ಎದುರಿನ ದ್ವಿಚಕ್ರ ವಾಹನ ಪಾರ್ಕಿಂಗ್‌ ಬಸ್‌ ನಿಲ್ದಾಣದ ನೆಲ ಅಂತಸ್ತಿಗೆ ಸ್ಥಳಾಂತರ.
· ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣಕ್ಕೆ ಮುಖ್ಯರಸ್ತೆ, ಗಾಂಧಿಕಟ್ಟೆ ಮೂಲಕ ಪ್ರವೇಶವಿಲ್ಲ. ಬಸ್‌ ನಿಲ್ದಾಣದ ಬಳಿಯಿಂದ ಗಾಂಧಿಕಟ್ಟೆ ಮೂಲಕ ಮಾತ್ರ ಮುಖ್ಯರಸ್ತೆಗೆ ಪ್ರವೇಶ.
· ಕೋರ್ಟು ರಸ್ತೆಯಿಂದ ಮುಖ್ಯರಸ್ತೆಗೆ ಸೇರುವ ಆಟೋ ರಿಕ್ಷಾಗಳು ಮುಖ್ಯ ರಸ್ತೆಗೆ ಸೇರುವಾಗ ಎಡಕ್ಕೆ ಚಲಿಸಬೇಕು.

ಕಾಲಾವಕಾಶವಿದೆ
ಸಪ್ತಾಹದ ಮೂಲಕ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ಸಂಚಾರ ವ್ಯತ್ಯಾಸಗಳ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದ್ದು, ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು. ಪ್ರಾಯೋಗಿಕ ಅವಧಿಯಲ್ಲಿ ಸಾಧಕ -ಬಾಧಕಗಳನ್ನು ಅರಿತುಕೊಳ್ಳಲಾಗುತ್ತದೆ. ಪ್ರಸ್ತಾವನೆ ಅಂಗೀಕರಿಸಲು ಜಿಲ್ಲಾಧಿಕಾರಿಗಳಿಗೆ ಮೂರು ತಿಂಗಳ ಕಾಲಾವಕಾಶವಿದೆ. ಒಂದು ತಿಂಗಳೊಳಗಿನ ಪ್ರಾಯೋಗಿಕ ಅವಧಿಯಲ್ಲಿ ಬದಲಾವಣೆಯ ಕ್ರಮ ಅಂತಿಮಗೊಳ್ಳಲಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು, ವಾಹನ ಚಾಲಕರ ಸಹಕಾರಬೇಕು.
– ಮಹೇಶ್‌ ಪ್ರಸಾದ್‌,
ಪಿಐ, ಪುತ್ತೂರು

ರಾಜೇಶ್‌ ಪಟ್ಟೆ

Advertisement
Advertisement

Udayavani is now on Telegram. Click here to join our channel and stay updated with the latest news.

Next