ಪುತ್ತೂರು: ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆಯು ಜಿಗಿತ ಕಂಡಿದ್ದು ಬೆಳೆಗಾರರ ದಸರಾ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ ಬೇಡಿಕೆ ಸೃಷ್ಟಿಯಾಗಿದೆ.
40 ರೂ.ವ್ಯತ್ಯಾಸ: ಕ್ಯಾಂಪ್ಕೋ ಮತ್ತು ಹೊರ ಮಾರುಕಟ್ಟೆಯಲ್ಲಿ ಕೆ.ಜಿ. ಅಡಿಕೆ ಧಾರಣೆಯಲ್ಲಿ 40 ರೂ.ನಷ್ಟು ವ್ಯತ್ಯಾಸ ಕಂಡು ಬಂದಿದೆ. ಅ. 7ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ ಕೆ.ಜಿ.ಗೆ 310 ರೂ. ಇದ್ದರೆ, ಹೊರ ಮಾರುಕಟ್ಟೆಯಲ್ಲಿ ಕೆ.ಜಿ.ಅಡಿಕೆಗೆ 350 ರೂ. ಇತ್ತು. ಸಿಂಗಲ್ ಚೋಲ್, ಡಬ್ಬಲ್ ಚೋಲ್ ಧಾರಣೆ ಎರಡೂ ಕಡೆಗಳಲ್ಲಿ ಸ್ಥಿರವಾಗಿತ್ತು.
ಮಳೆ: ಧಾರಣೆ ಏರಿಕೆ ಸಾಧ್ಯತೆ! ಭಾರೀ ಮಳೆ, ಕೊಳೆರೋಗದ ಕಾರಣ ಬೆಳೆಗಾರರಿಗೆ ಈ ವರ್ಷದ ಮೊದಲನೆಯ ಕೊಯ್ಲಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಅಡಿಕೆ ದೊರೆತಿಲ್ಲ. ಅಕ್ಟೋಬರ್ ತಿಂಗಳಲ್ಲಿ ಮಾರುಕಟ್ಟೆಗೆ ಹೊಸ ಅಡಿಕೆ ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ. ಹೀಗಾಗಿ ಸಹಜವಾಗಿ ಸಿಂಗಲ್ ಚೋಲ್‌ಗೆ ಬೇಡಿಕೆ ವೃದ್ಧಿಯಾಗಿ ಧಾರಣೆ ಏರಿಕೆ ಕಾಣಲಿದೆ ಅನ್ನುತ್ತಿದೆ ಮಾರುಕಟ್ಟೆ ಮೂಲಗಳು.
ಧಾರಣೆ ಸಮ; ಒಮ್ಮೊಮ್ಮೆ ಇಳಿಕೆ! ಕೆಲವು ಸಮಯಗಳಿಂದ ಸಿಂಗಲ್ ಚೋಲ್-ಡಬ್ಬಲ್ ಚೋಲ್ ಧಾರಣೆಯಲ್ಲಿ ಬೆಳೆಗಾರನಿಗೆ ನಷ್ಟವಾಗುತ್ತಿದೆ. ಅಂದರೆ ಸಿಂಗಲ್ ಚೋಲ್, ಡಬ್ಬಲ್ ಚೋಲ್ ಧಾರಣೆಯಲ್ಲಿ ವ್ಯತ್ಯಾಸ ಇಲ್ಲ. ಎರಡಕ್ಕೂ ಸಮವಾದ ದರ ಇದೆ. ಕೆಲವೊಮ್ಮೆ ಸಿಂಗಲ್ ಚೋಲ್‌ಗಿಂತ ಡಬ್ಬಲ್ ಚೋಲ್‌ಗೆ ಧಾರಣೆ ಕಡಿಮೆ ಇರುತ್ತದೆ. ಹೀಗಾಗಿ ಎರಡು ವರ್ಷದ ಹಿಂದಿನ ಅಡಿಕೆಯನ್ನು ಒಂದು ವರ್ಷದ ಹಿಂದಿನ ಅಡಿಕೆಯ ದರಕ್ಕೆ ಸಮನಾಗಿ ಅಥವಾ ಅದಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡಬೇಕಾದ ಸ್ಥಿತಿ ಬೆಳೆಗಾರನದ್ದು.
ಭೂತಾನ್‌ನಿಂದ ಹಸಿ ಅಡಿಕೆ ಆಮದು ಒಪ್ಪಂದದಿಂದ ದೇಶಿ ಅಡಿಕೆ ಧಾರಣೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂಬ ತಜ್ಞರ ಅಭಿಪ್ರಾಯಕ್ಕೆ ಪೂರಕ ಎಂಬಂತೆ ಚಾಲಿ ಅಡಿಕೆ ಮಾರುಕಟ್ಟೆಯು ಧಾರಣೆ ಏರಿಕೆಯ ಹಾದಿಯಲ್ಲಿದೆ.