Advertisement

Puttur: ಸುಧಾರಣೆ ನಿರೀಕ್ಷೆಯಲ್ಲಿ ಕಬಕ-ಪುತ್ತೂರು ರೈಲು ನಿಲ್ದಾಣ

02:46 PM Oct 10, 2024 | Team Udayavani |

ಪುತ್ತೂರು: ಮಂಗಳೂರು-ಬೆಂಗಳೂರು ಸಂಪರ್ಕ ಕಲ್ಪಿಸುವ ಪುತ್ತೂರಿನ ಕಬಕ-ಪುತ್ತೂರು ರೈಲು ನಿಲ್ದಾಣವೂ ಹಲವು ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದು ಅಭಿವೃದ್ಧಿಯ ನಿರೀಕ್ಷೆಯಲ್ಲಿದೆ.

Advertisement

ಹಿಂದಿನ ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ಪ್ರಯತ್ನದ ಫಲವಾಗಿ ಕೇಂದ್ರ ಸರಕಾರದ ಆದರ್ಶ ರೈಲು ನಿಲ್ದಾಣ ಪಟ್ಟಿಯಲ್ಲಿ ಕಬಕ-ಪುತ್ತೂರು ರೈಲು ನಿಲ್ದಾಣ ಸೇರ್ಪಡೆಯಾಗಿತ್ತು. ಇದಕ್ಕಾಗಿ 2 ಕೋ.ರೂ.ಅನುದಾನ ಬಿಡುಗಡೆಗೊಂಡು ವಿವಿಧ ಕಾಮಗಾರಿ ನಡೆದಿತ್ತು. ಇದರಲ್ಲಿ ಪ್ಲಾಟ್‌ಫಾರಂ ನಿರ್ಮಾಣ, ವಿಶ್ರಾಂತಿ ಗೃಹ, ಶೌಚಗೃಹ, ಕಟ್ಟಡ ದುರಸ್ತಿ ಮೊದಲಾದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಈಗ ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ ಇನ್ನಷ್ಟು ಸುಧಾರಣೆಯ ಕ್ರಮಗಳ ಅನುಷ್ಠಾನದ ಅಗತ್ಯ ಇದೆ.

ಮಳೆಗಾಲದಲ್ಲಿ ಒದ್ದೆ
ನಿಲ್ದಾಣದ ಪ್ಲಾಟ್‌ ಫಾರಂನುದ್ದಕ್ಕೂ ಮೇಲ್ಛಾವಣಿ ಇಲ್ಲ. ಹೀಗಾಗಿ ಮಳೆಗಾಲದಲ್ಲಿ ಮಳೆ, ಬೇಸಗೆಯಲ್ಲಿ ಬಿಸಿಲಿಗೆ ಒಣಗಿಕೊಂಡು ರೈಲು ಏರಬೇಕು. ರೈಲು ಬಂತೆಂದರೆ ನಿಲ್ದಾಣದಿಂದ ಓಡುತ್ತಾ ರೈಲು ಏರುವ ದುಃಸ್ಥಿತಿ. 1 ನೇ ಪ್ಲಾಟ್‌ ಫಾರಂನ ಮೇಲ್ಛಾವಣಿಯನ್ನು 450 ಮೀ.ಉದ್ದಕ್ಕೆ ಹಾಗೂ 2 ನೇ ಪ್ಲಾಟ್‌ ಫಾರಂ ಮೇಲ್ಛಾವಣಿಯನ್ನೂ ವಿಸ್ತರಿಸುವ ಅಗತ್ಯ ಇಲ್ಲಿ ಕಂಡು ಬರುತ್ತಿದೆ.

ಪ್ರಮುಖ ರೈಲು ಮಾರ್ಗ
ಈ ಮಾರ್ಗದಲ್ಲಿ ಬೆಂಗಳೂರಿಗೆ 4 ರೈಲುಗಳು, 3 ಲೋಕಲ್‌ ಟ್ರೈನ್‌ಗಳು ಹೀಗೆ ಒಟ್ಟು ರೈಲುಗಳು 14 ಟ್ರಿಪ್‌ ನಡೆಸುತ್ತಿವೆ. ಪುತ್ತೂರು ನಗರಕ್ಕೆ ಹತ್ತಿರದಲ್ಲಿರುವ ರೈಲು ನಿಲ್ದಾಣದಲ್ಲಿ ದಿನಂಪ್ರತಿ ನೂರಾರು ಮಂದಿ ರೈಲು ಅನ್ನು ಆಶ್ರಯಿಸುತ್ತಾರೆ. ಕೇಂದ್ರ ಸರಕಾರದ ಅಮೃತ ರೈಲ್ವೇ ನಿಲ್ದಾಣ ಯೋಜನೆಗೆ ಕಬಕ-ಪುತ್ತೂರು ರೈಲು ನಿಲ್ದಾಣವನ್ನು ಈ ಯೋಜನೆಗೆ ಸೇರಿಸಬೇಕೆಂಬ ಆಗ್ರಹ ಆರಂಭವಾಗಿದೆ.

ಕೊಂಕಣ ರೈಲ್ವೇ ಅನ್ನು ಭಾರತೀಯ ರೈಲ್ವೇಯಲ್ಲಿ ಸೇರಿಸಿದರೆ ಕರಾವಳಿ ಕರ್ನಾಟಕಕ್ಕೆ ಅತಿ ಹೆಚ್ಚಿನ ಲಾಭ ಸಿಗಲಿದೆ. ಈ ಪ್ರಯತ್ನಕ್ಕೆ ಮತ್ತೆ ಚಾಲನೆ ಸಿಕ್ಕಿದೆ. ರೈಲ್ವೇ ರಾಜ್ಯ ಸಚಿವ ವಿ. ಸೋಮಣ್ಣ ಅವರ ಜತೆಗೂ ಚರ್ಚೆ ನಡೆಸಿ ಪುತ್ತೂರು ಆದರ್ಶ ರೈಲ್ವೇಯ ತುರ್ತು ಅಗತ್ಯಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುವುದು.
ಬ್ರಿಜೇಶ್‌ ಚೌಟ, ಸಂಸದರು, ದ.ಕ.ಲೋಕಸಭಾ ಕ್ಷೇತ್ರ

Advertisement

ಪ್ರಮುಖ ಬೇಡಿಕೆಗಳು

  • ಮುನ್ನೂರು ಮೀಟರ್‌ ಹಳಿ ಅಳವಡಿಸಿ ಮೂರನೇ ಫ್ಲಾಟ್‌ ಫಾರಂ ಸೌಲಭ್ಯ ಕಲ್ಪಿಸುವುದು.
  • 1ನೇ ಮತ್ತು 2ನೇ ಪ್ಲಾಟ್‌ ಫಾರಂ ಮೇಲ್ಛಾವಣೆ ವಿಸ್ತರಣೆ
  • ಬೆಂಗಳೂರು ರೈಲುಗಳ ಬೋಗಿಗಳು ನಿಲ್ಲುವ ಬಗ್ಗೆ ಸೂಚನ ಫಲಕ
  • ಪ್ಲಾಟ್‌ಫಾರಂನಲ್ಲಿ ಕುಡಿಯುವ ನೀರಿನ ವ್ಯವಸ್ಥೆ
  • ರೈಲ್ವೇ ಕ್ಯಾಂಟಿನ್‌ ವಿಸ್ತರಣೆ
  • ಎರಡೂ ಬದಿಗಳಲ್ಲಿ ಕಸದ ಬುಟ್ಟಿ
  • ಹಿರಿಯ ನಾಗರಿಕರು/ ಅಂಗವಿಕಲರಿಗೆ ಬ್ಯಾಟರಿ ಚಾಲಿತ ವಾಹನ ವ್ಯವಸ್ಥೆ
  • ಪ್ರಯಾಣಿಕರಿಗೆ ಆಸನದ ವ್ಯವಸ್ಥೆ
  • ಹೆಚ್ಚುವರಿ ವಿಶ್ರಾಂತಿ ಕೊಠಡಿ
Advertisement

Udayavani is now on Telegram. Click here to join our channel and stay updated with the latest news.

Next