Advertisement

Puttur: ಮುಂಜಾನೆ 3 ಗಂಟೆಗೆ ನಡೆಯಿತು ಅಗಲಿದವರಿಗೆ ಅವಲಕ್ಕಿ ಸಮರ್ಪಣೆ!

02:57 PM Nov 02, 2024 | Team Udayavani |

ಪುತ್ತೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ತುಳುನಾಡಿನ ಕೆಲ ಭಾಗಗಳಲ್ಲಿ ಅಗಲಿದವರಿಗೆ ಅವಲಕ್ಕಿ ಹಾಕುವ ಸಂಪ್ರದಾಯವಿದೆ. ಇದರಂತೆ ಅಮಾವಾಸ್ಯೆಯ ದಿನವಾದ ಶುಕ್ರವಾರ ಮುಂಜಾನೆ ಮೂರು ಗಂಟೆಗೆ ಹಲವಾರು ಮನೆಗಳಲ್ಲಿ ಆ ವರ್ಷ ಮೃತಪಟ್ಟವರಿಗೆ ಅವಲಕ್ಕಿ ಹಾಕುವ (ಬಜಿಲ್‌ ಪಾಡುನಿ) ಕ್ರಮ ನಡೆಯಿತು.

Advertisement

ಇದು ಕೆಲವು ಸಮುದಾಯದವರಲ್ಲಿ ಮಾತ್ರ ಆಚರಣೆಯಲ್ಲಿರುವ ಪದ್ಧತಿಯಾಗಿದೆ. ಕಳೆದ ದೀಪಾವಳಿಯಿಂದ ಈ ದೀಪಾವಳಿಯ ನಡುವೆ ಮನೆಯಲ್ಲಿ ಯಾರಾದರೂ ಮೃತಪಟ್ಟರೆ ಅವಲಕ್ಕಿ ಹಾಕುವ ಕಾರ್ಯಕ್ರಮ ನಡೆಯುತ್ತದೆ. ಇದರಲ್ಲಿರುವ ಇನ್ನೊಂದು ವಿಶೇಷವೆಂದರೆ, ಮೃತಪಟ್ಟವರು ಮಹಿಳೆಯಾಗಿದ್ದರೆ ದೀಪಾವಳಿಯ ಅಮಾವಾಸ್ಯೆ ದಿನ ಅವಲಕ್ಕಿ ಹಾಕುತ್ತಾರೆ. ಮೃತಪಟ್ಟವರು ಪುರುಷರಾದರೆ ಪಾಡ್ಯದ ದಿನ ಅವಲಕ್ಕಿ ಹಾಕಲಾಗುತ್ತದೆ. ಮೃತಪಟ್ಟ ಒಂದು ವರ್ಷ ಮಾತ್ರ ಈ ಕ್ರಮ ಚಾಲ್ತಿಯಲ್ಲಿರುತ್ತದೆ. ಅನಂತರ ಅವರ ಕುಟುಂಬದ ಮನೆಗಳಲ್ಲಿ ನಡೆಯುವ ವಾರ್ಷಿಕ ಪರ್ವದ ದಿನ ಗುರು ಹಿರಿಯರಿಗೆ ಬಡಿಸಲಾಗುತ್ತದೆ.

ಅವಲಕ್ಕಿ ಹಾಕುವುದು ಹೇಗೆ?

ಮನೆ ಮಂದಿ ಮುಂಜಾನೆ 3 ಗಂಟೆಗೆ ಎದ್ದು ಬಳಿಕ ಕೋಳಿ ಪದಾರ್ಥ, ದೋಸೆ ಮಾಡುತ್ತಾರೆ. ಶಾಸ್ತ್ರಪ್ರಕಾರ ಚಾಪೆ ಹಾಸಿ ಅದಕ್ಕೆ ಬಿಳಿ ವಸ್ತ್ರಹಾಸಿ ಮಣೆ ಇರಿಸಿ ದೀಪ ಬೆಳಗಿಸಲಾಗುತ್ತದೆ. ಇನ್ನೊಂದು ಮಣೆಯನ್ನು ಇರಿಸಿ ಅದರಲ್ಲಿ ಅಗಲಿದ ವ್ಯಕ್ತಿಯ ಇಷ್ಟದ ವಸ್ತ್ರಗಳನ್ನು ಇರಿಸಲಾಗುತ್ತದೆ. ಮುಂಭಾಗದಲ್ಲಿ ಮೂರು ಬಾಳೆ ಎಲೆಗಳನ್ನು ಒಟ್ಟೊಟ್ಟಿಗೆ ಜೋಡಿಸಿ, ತುಸು ದೂರದಲ್ಲಿ ಇನ್ನೆರಡು ಬಾಳೆ ಎಲೆಗಳನ್ನು ಹಾಕಲಾಗುತ್ತದೆ.

ಮೊದಲ ಮೂರು ಬಾಳೆ ಎಲೆಗಳಲ್ಲಿ ಅವಲಕ್ಕಿ, ಬಾಳೆಹಣ್ಣು, ಬೆಲ್ಲ, ಕಾಯಿಹಾಲು ಹಾಕಿದರೆ, ಇನ್ನೆರಡು ಬಾಲೆ ಎಲೆಗಳಲ್ಲಿ ದೋಸೆ, ಕೋಳಿ ಪದಾರ್ಥವನ್ನು ಬಡಿಸಲಾಗುತ್ತದೆ. ಈ ಎಲ್ಲ ಪ್ರಕ್ರಿಯೆ ಮುಂಜಾನೆ ಐದು ಗಂಟೆಯೊಳಗೆ ನಡೆಯುತ್ತದೆ. ಮಧ್ಯಾಹ್ನ 12 ಗಂಟೆಯೊಳಗೆ ಇದ್ದು ಅನಂತರ ಅದನ್ನು ತೆಗೆದು ಬಾಳೆಯಲ್ಲಿರುವುದನ್ನು ಮನೆ ಮಂದಿ, ಬಂಧು ಬಳಗದವರು ಸೇವಿಸುತ್ತಾರೆ.

Advertisement

ಬಾಲೆ ಎಲೆ ಹಾಕುವ ಸಂದರ್ಭ, ಬಾಳೆ ಎಲೆ ತೆಗೆಯುವ ಸಂದರ್ಭದಲ್ಲಿ ಮೃತರಿಗೆ ಸದ್ಗತಿ ಕೋರಿ ವಿಶೇಷ ಪ್ರಾರ್ಥನೆ ನಡೆಸಲಾಗುತ್ತದೆ. ಈ ದಿನ ಬಂಧುಮಿತ್ರರು, ಊರವರು ಅವಲಕ್ಕಿ, ಬೆಲ್ಲ ತಂದು ಆ ಎಲೆಗೆ ಹಾಕುವ ಪದ್ಧತಿಯು ಇದೆ.

ಇದರ ಪ್ರಕಾರ ಸತ್ತ ಆತ್ಮವು ಯಾವುದೇ ಕಾರಣಕ್ಕೂ ಆ ಮನೆಯನ್ನು ಬಿಡುವುದಿಲ್ಲ. ಮನೆಯ ಯಾವುದೇ ವಿಶೇಷ ಕಾರ್ಯಗಳು ನಡೆದಾಗ ಅವುಗಳಿಗೆ ಮೊದಲು ನಮಸ್ಕರಿಸುವುದು ತುಳುನಾಡಿನ ವಿಶೇಷ ಆಚರಣೆ. ಹೀಗಾಗಿ ಯಾವುದೇ ಹಬ್ಬ – ಹರಿದಿನಗಳಲ್ಲಿ ಹಿರಿಯರನ್ನು ನೆನೆಯುವ ಸಂಪ್ರದಾಯವು ತುಳುವರಲ್ಲಿದೆ.

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next